ಭಾವನೆಗಳು ನಮ್ಮನ್ನು ಬರಸೆಳೆದು ಬಂಧಿಸುತ್ತವೆಯೋ ಅಥವಾ ನಾವೇ ಅವುಗಳಲ್ಲಿ ಮೋಹಗೊಂಡು ಬಂಧಿಯಾಗುತ್ತೇವೆಯೋ ತಿಳಿಯದು. ನಿರ್ಭಾವ ವ್ಯಕ್ತಿಗಳು ಇದ್ದಾರೆಂದು ಹೇಳಲಾಗುವುದಿಲ್ಲವಾದರೂ ನಮ್ಮ ಆಚಾರ -ವಿಚಾರ, ಕೆಲಸ ನಮ್ಮ ಭಾವನೆಗಳೊಂದಿಗೆ ವಿಲೀನಗೊಂಡಿರುತ್ತವೆ. ಕನಸು, ಕಲ್ಪನೆಗಳು, ಭಾವನೆಗಳು ಹಡೆಯುವ ಕೂಸುಗಳೆಂದರೆ ತಪ್ಪಾಗಲಾರವು.
ಒಬ್ಬ ವ್ಯಕ್ತಿಯ ಪರಿಪೂರ್ಣತೆ ಎಂಬುದು ಕೇವಲ ಜ್ಞಾನ, ತಿಳುವಳಿಕೆ, ಗೌರವಾಧಾರಗಳು, ಪ್ರಶಂಸೆ, ಬುದ್ಧಿವಂತಿಕೆ, ಪ್ರಶಸ್ತಿಗಳಲ್ಲಿ ಅಡಕವಾಗಿರುವುದಿಲ್ಲ. ವ್ಯಕ್ತಿಯ ಭಾವನಾತ್ಮಕ ಅಂಶಗಳನ್ನೂ ಅವಲಂಬಿಸಿರುತ್ತವೆ.ಭಾವನೆ ಮತ್ತು ಬುದ್ಧಿವಂತಿಗೆ ಪರಸ್ಪರ ಸಂಬಂಧ ಹೊಂದಿರುವ ನಮ್ಮ ನರನಾಡಿಗಳಿದ್ದಂತೆ. ಬುದ್ಧಿವಂತಿಕೆಯೇ ಎಲ್ಲಕ್ಕಿಂತ ಮೇಲಾದುದ್ದಲ್ಲ,. ಒಂದು ವೇಳೆ ಬುದ್ಧಿ ಮಾತ್ರದಿಂದಲೇ ಆಕಾಂಕ್ಷೆ, ಚಿಂತನೆಗಳು, ಹುಟ್ಟುತ್ತವೆಯೆಂದರೂ, ಅವುಗಳಿಗೆ ನೀರೆರೆದು ಪೋಷಿಸುವುದು ವ್ಯಕ್ತಿಯ ಭಾವಧಾರೆ.
ಭಾವನೆಯು ತೀರ ನೇರವಾಗಿ ಸಂಬಂಧ ಹೊಂದಿರುವ ಅಂಶಗಳೆಂದರೆ ಸ್ನೇಹ, ಪ್ರೀತಿ, ದಾಂಪತ್ಯ, ಕುಟುಂಬಗಳಲ್ಲಿ. ಕುಟುಂಬದಲ್ಲಿ ಬುದ್ಧಿಗಿಂತ ಭಾವನೆಯ ಪಾತ್ರ ಹಿರಿದಾಗಬೇಕು. ಹೆಚ್ಚು ಆತ್ಮೀಯತೆಯ ನಡವಳಿಕೆಯು ಸಂಬಂಧವನ್ನು ಹೆಚ್ಚು ಗಟ್ಟಿಯಾಗಿ ಬೆಸೆದುಕೊಳ್ಳುತ್ತವೆ.
ಭಾವನೆಗಳು ವಿಸ್ತ್ರುತವಾಗಿ ತೆರೆದುಕೊಳ್ಳುವ ಮತ್ತೊಂದು ವಲಯವೆಂದರೆ ಹೃದಯವಂತಿಕೆ. ಹೃದಯವಂತಿಕೆ ಎಂಬುದು ಕೆಲವರಿಗೆ ಸಾಮಾನ್ಯ ಭಾವನಾತ್ಮಕ ಅಂಶವಾಗಿ ಕಾಣಬಹದು. ಹೃದಯವಂತಿಕೆ ಬಹು ವಿಶಾಲವಾದ ಎಲ್ಲರಲ್ಲೂ ಇರದ, ಎಲ್ಲರಿಂದಲು ತೋರಲಾರದ ಭಾವನಾತ್ಮಕತೆಯಲ್ಲಿ ಅತ್ಯಂತ ವಿರಳವಾದ ಒಂದು ವ್ಯಕ್ತಿತ್ವ.
ಕೆಲವರ ಪ್ರಕಾರ ಭಾವನಾತ್ಮಕ ಅಂಶಗಳಾದ ಪ್ರೀತಿ, ಕಾಳಜಿ, ಭಾತೃತ್ವ, ಮಮತೆಗಳು ಗೋಪ್ಯತೆಯ ವಿಷಯ ವಸ್ತುಗಳಾಗಿದ್ದು, ಕಾಲಯಮನನ್ನು ತಿಂದು ಹಾಕುವ ಅಂಶಗಳಾಗಿ ಕಾಣಸಿಗುತ್ತವೆ.
ಹಾಗೆಯೇ ಇನ್ನೊಂದು ಮುಖ್ಯವಾದ ಅಂಶವೆಂದರೆ ಭಾವನೆಯೇ ಬದುಕಾದರು ಕಷ್ಟ. ಹಾಗೆ ಎಲ್ಲವನ್ನು ಬುದ್ಧಿಗೆ ಮೀಸಲಿಟ್ಟರೂ ಕಷ್ಟ. ಇಂದಿನ ಸ್ವಾರ್ಥ ಜಗತ್ತಿನಲ್ಲಿ ಪ್ರೀತಿಯ, ಸ್ಪಂದನೆಯ ಭಾವನೆಗಳೆಂದರೆ ಬೆಲೆ ಇಲ್ಲದವುಗಳಾಗಿವೆ. ಭಾವನೆಗಳಿಗೆ ಈ ದಿನಗಳಲ್ಲಿ ಬೆಲೆಕೊಡುವವರು ಅತ್ಯಲ್ಪರು ಹಾಗು ಅತ್ಯಲ್ಪರಲ್ಲಿ ಅಲ್ಪರು. ಭಾವನೆಯನ್ನು ಬದುಕಾಗಿಸಿ ಕೊಂಡು ಅದರ ವೇದನೆಯಲ್ಲಿ ಹಪಹಪಿಸಿ ನರಳುತ್ತಿರುವ ಅದೆಷ್ಟೋ ಮನಸ್ಸುಗಳು, ಸ್ವಾರ್ಥ ಮನಸ್ಸುಗಳ ಅರ್ಥೈಸಿ ಬೇರೊಂದು ಅಸ್ಮಿತೆಯನ್ನು ಒಪ್ಪಿ ಬಾಳುವ ಅನಿವಾರ್ಯತೆ ಬಂದೊದಗಿದೆ.
ಇಂದಿನ ದಿನಗಳಿಗೆ ಸಮಯವಿಲ್ಲವೋ ಅಥವಾ ನಮಗೆ ನಮ್ಮ ಕೆಲಸದ ಒತ್ತಡ, ಜವಾಬ್ಧಾರಿಗಳಿಂದ ಬಿಡುವು ಸಿಗುತ್ತಿಲ್ಲವೋ... ಒಮ್ಮೆ ಎಲ್ಲರು , ಅವರವರ ಯೋಚನಾಲಹರಿಗೆ ಹೊಕ್ಕಬೇಕಾಗುತ್ತದೆ. ಜ್ಞಾನ (ಬುದ್ಧಿ ವಂತಿಕೆ )ಮನಸ್ಸಿನ ದೀಪವಿದ್ದಂತೆ, ಪ್ರೀತಿ ಅದರ ಪ್ರಕಾಶದಲ್ಲಿ ಬೆಳಗುವ ಬೆಳಕಾಗ ಬೇಕೇ ಹೊರತು, ಒಬ್ಬ ವ್ಯಕ್ತಿಯ ಮನಸ್ಸಿನ ಭಾವನೆಗಳನ್ನು ಅರಿಯುವಲ್ಲಿ ಜ್ಞಾನವು ನಂದಿದಾಗ, ಹೃದಯವಂತಿಕೆ ಇಲ್ಲದ ಮೇಲೆ... ಬುದ್ಧಿವಂತಿಗೆ(ಜ್ಞಾನ )ಎಷ್ಟಿದ್ದರೇನು..? ಅನ್ನಿಸದೆ ಇರಲಾರದು.
ನಮ್ಮನು ಪ್ರೀತಿಸುವ, ನಮ್ಮ ಬರುವಿಕೆಗಾಗಿ ಹಾತೊರೆಯುವ, ನಮ್ಮನ್ನೇ ಜೀವವೆಂದು ಆಶಿಸಿ, ಭಾವಿಸಿ ಬದುಕುತ್ತಿರುವ ಜೀವಗಳ ಭಾವನೆಗಳಿಗೆ ಅಸಡ್ಡೆ ತೋರಿ ಬದುಕುವುದು ನಮ್ಮ ಇಂದಿನ ನವೀಕರಣಗೊಂಡು ರೂಪುಗೊಂಡಿರುವ ಭಾವನೆಗಳಾಗಿವೆ. ಭಾವನೆಗಳಿಗೆ ಬೇಲಿ ಹಾಕಿ, ಸುತ್ತ ನೀರೆರೆಯುವ ಬದಲು, ಪರಸ್ಪರ ಹಂಚಿ ತೆಗೆದುಕೊಳ್ಳುವುದರಿಂದ ಸಂಬಂಧಗಳು ಗಟ್ಟಿಗೊಳ್ಳುತ್ತವೆ.
ಭಾವನೆಗಳನ್ನು hidden context ಆಗಿ ಮಾಡದೆ, share context ಆಗಿಸಿ, ಭಾವನೆಗಳು, ಬುದ್ಧಿವಂತಿಕೆ, ಕಾರ್ಯನಿರ್ವಹಣೆಯಲ್ಲಿ ಭಾವನಾತ್ಮಕ ಬುದ್ಧಿ ವಂತಿಕೆಯನ್ನು ಸರಿದೂಗಿಸಿಕೊಂಡು ಬದುಕುವತ್ತ, ಯೋಚಿಸುವ ಚಿಂತನೆ ಮಾಡಿ ಬದುಕನ್ನು ಕಟ್ಟಿಕೊಳ್ಳುವ ಬುದ್ಧಿವಂತಿಕೆಯ ಭಾವನಾಜೀವಿಗಳಾಗೋಣ. ಭಾವನೆಗಳೆಂಬ ಸುಂದರವಾದ ಅಂತರಂಗದ ಅಲೆಗಳನ್ನು
ಗೌರವಿಸೋಣವೆಂಬುದು ನನ್ನ ಭಾವಾಂತರಂಗದ ಅನಿಸಿಕೆ.
