ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಶುಕ್ರವಾರ, ಅಕ್ಟೋಬರ್ 27, 2023

ಬರೆದು ಹಗುರವಾಗುವ ಪ್ರಯತ್ನದಲ್ಲಿ.....

ಹೊರಟಿದ್ದೇನೋ ಪ್ರವಾಸವೇ.......

ಆರಂಭ ದಿನದ ಮುಂಜಾನೆಯಲ್ಲಿದ್ದ ಕುತೂಹಲ, ಖುಷಿಗಳು ಬರು ಬರುತ್ತಾ ಕ್ಷೀಣಿಸತೊಡಗಿದವು.

ಬಹಳವಾಗಿ ಕಾಡಿದ್ದು ಸಮಾನ ಮನಸ್ಕರ ಕೊರತೆ. ಕ್ಷಮಿಸಿ.....ಯಾರನ್ನು ದೂಷಿಸುವ ನಿಲುವು ನನ್ನದಲ್ಲ.
ನಿಮ್ಮೆಲ್ಲರಂತೆ ಬೇರೆಯವರು ಇರಲು ಸಾಧ್ಯವಿಲ್ಲ. ಕಾರಣ ವ್ಯಕ್ತಿಗತ ಭಿನ್ನತೆಗಳೆಂಬ ಸಹಜ ಗುಣ.

ಹೆಚ್ಚು  ಏಕಾಂತವನ್ನು ಬಯಸುವವಳು ನಾ...

ಪ್ರವಾಸದಲ್ಲಿ ನನ್ನಿಚ್ಚೆಯ ನೋಟ, ನಡೆಯುವಿಕೆ, ಊಟ,   ಇವುಗಳಲ್ಲಿ  ಒಬ್ಬಳೇ ಹೊರಟ ದಾರಿಯಲ್ಲಿ ಜೊತೆಗೂಡಿದವರೊಂದಿಗೆ ಸೇರಿದೆ, ಮಾತಾಡಿದೆ, ಬೆರೆತೆ.

 ದೃಷ್ಟಿಯಂತೆ  ಸೃಷ್ಟಿ ಎಂಬುದು  ಮನುಷ್ಯ ಗುಣ.
 
ವಿಶಾಲ ಮನೋಭಾವನೆ ಎಂಬ ದಯೆಯನ್ನು ದೃಷ್ಟಿಯಲ್ಲಿ ಬೆಳೆಸಿಕೊಂಡರೆ ಪ್ರತಿಯೊಬ್ಬರು ಭಿನ್ನತೆಯಲ್ಲೂ ಅನನ್ಯವೆಂಬುದು ನನ್ನ ಅನಿಸಿಕೆ.

ಇಂತಹ ಭಿನ್ನ ಸಂಗತಿಗಳ ನಡುವೆಯೂ ಪ್ರವಾಸದಲ್ಲಿ ನನ್ನದೇಯಾದ ಅಳತೆ ಗೋಲಿನಲ್ಲಿ  ಬೆರೆತು ಖುಷಿಯ ಕ್ಷಣಗಳನ್ನು ಸವಿದಿದ್ದೇನೆ.
 ಸುಂದರ ಕ್ಷಣದ  ನೆನಪುಗಳಿಗೂ.... ನಿಮ್ಮೆಲ್ಲರಿಗೆ ಮನತುಂಬಿದ 🙏ಧನ್ಯವಾದಗಳು🙏

ಸೋಮವಾರ, ಜುಲೈ 24, 2023

ಕವಿತೆ (ಕಥೆ )


ನಾಲ್ಕು ಸಾಲು ಬರೆದು ತಿಳಿಸಿ ಬರವಣಿಗೆ ಕುರಿತು, ಎಂದು ಕೇಳಿ ಎಷ್ಟೋ ವರುಷಗಳು ಕಳೆದಿದ್ದವು.

ಭೋರ್ಗರೆದು ಸುರಿವ ಚಡಿ ಮಳೆ,ಕತ್ತಲೆಯನ್ನು ನುಂಗಿ ಚಂದಿರನೂ ಕಪ್ಪಾಗಿ ಎಲ್ಲಿ ನೋಡಿದರೂ ಕತ್ತಲು, ಆ ರಾತ್ರಿಯಲ್ಲಿ ಹಾಸಿಗೆಯಲ್ಲಿ ಅಂಗಾತ ಮಲಗಿದ್ದ ಸ್ಯಾಲಿನಾಳಿಗೆ ಈ ಮೇಲಿನ ಸಾಲುಗಳು ಕೊರೆಯ ತೊಡಗಿದವು.

ಬೆಳಗಾಗುವವರೆಗೂ ಒದ್ದಾಡಿ, ಸ್ವಲ್ಪ ಬೆಳಕು ಕಾಣಿಸಿದೊಡನೆ ಬೇಗ ಬೇಗ ಕೆಲಸವನ್ನು ಮುಗಿಸಿ, ಅವನು ನಾಲ್ಕು ಸಾಲು ಬರೆದು ಕೊಟ್ಟರೆ, ಆ ಸಾಹಿತಿ ಮೇಧಾವಿಗೆ, ಅವನಿಷ್ಟ ಪಡುವ ಬೋನ್ಸಾಯ್
ಮರದ ಬೀಜಗಳನ್ನಾದರೂ ಕೊಡುವ ಎಂದು ಯೋಚಿಸುತ್ತಾ, ಮನೆಯ ಮೂಲೆಯಲ್ಲಿ ಡಬ್ಬದಲ್ಲಿ ಇಟ್ಟಿದ್ದ ಬೀಜಗಳನ್ನು ತನ್ನ ಬಟ್ಟೆಗೆ ಗಂಟು ಹಾಕಿದಳು.
ಯಾರೂ ಇಲ್ಲದೆ ಮನೆ -ಮನಗಳಲ್ಲಿ ಒಂಟಿಯಾಗಿದ್ದ ಸ್ಯಾಲಿನೋ ಮನೆಗೆ ಒಂದು ದೊಡ್ಡ ಬೀಗ ಜಡಿದು ಹೊರಟಳು. ಆ ಬೀಗ ಮತ್ತೆ ಮತ್ತೆ ಅವಳನ್ನು ಕರೆಯುತ್ತಿರುವಂತೆ ಭಾಸವಾಗಿ, ಹಿಂದಿರುಗಿ ಬಂದು ಬೀಗವನ್ನು ಅಲ್ಲಾಡಿಸಿ ನೋಡಿ, ಮರೆದು ನಡೆದಿದ್ದ ಛತ್ರಿ ಯನ್ನು ಹಿಡಿದು ಹೊರಟಳು.

ಜಲಪಾತದಂತೆ ಭೋರ್ಗರೆದು ಸುರಿಯುತ್ತಿರುವ ಮಳೆ, ಮಣ್ಣನ್ನು ತನ್ನೊಡನೆ ಹೊತ್ತು ತರುವಷ್ಟು ರಭಸವಾಗಿ ಬೀಸುತ್ತಿರುವ ಗಾಳಿ , ಸೂರ್ಯನು ಪೂರ್ಣವಾಗಿ ಮೂಡಿರದ ಆ ನಸು ಬೆಳಕಿನಲ್ಲಿ(ಅವನಿದ್ದಲ್ಲೆಲ್ಲ ಬೆಟ್ಟ ಗುಡ್ಡ -ಭೋರ್ಗರೆವ ಚಡಿ ಮಳೆ ಎಂದು ಮನದಲ್ಲಿ ಪ್ರೀತಿಯಿಂದ ಶಪಿಸುತ್ತ) ಕಾಲುವೆಯಂತಾಗಿದ್ದ ದಾರಿಯಲ್ಲಿ, ಹಸಿವು, ಆಯಾಸವನ್ನು ಲೆಕ್ಕಿಸದೆ,ದಪ್ ದಪ್ ಎಂದು ಕಾಲು ಹಾಕುತ್ತಾ ಆ ಕಾಡು ದಾರಿಯಲ್ಲಿ ಹೆಜ್ಜೆ ಹಾಕಿದಳು.

ಕೊನೆಗೂ,ಅವನ ಮನೆ ಅಂಗಳ ತಲುಪಿ, ಗಿಲ್ಬರ್ಟ್.... ಗಿಲ್ಬರ್ಟ್... ಎಂದು ಏರುಧ್ವನಿಯಲ್ಲಿ ಕರೆದಳು. ಮುಚ್ಚಿದ ಬಾಗಿಲು, ಉತ್ತರವಿಲ್ಲ. ಮತ್ತೆ ಜೋರು ಧ್ವನಿಯಲ್ಲಿ ಕಿರುಚಿದಳು,
ಗಿಲ್ಬರ್ಟ್... ಗಿಲ್ಬರ್ಟ್.....
ಆ ಕಡೆಯಿಂದ ವಯಸ್ಸಾದ ಒಂದು ಧ್ವನಿ ಮಾತಾಡಿತು......
ಯಾರೋ...!
ಅವನಿಲ್ಲ ಹೋಗಾಯಿತು....
ಬರುವುದು ಇನ್ನೆಲ್ಲಿ....

ಸ್ಯಾಲಿನೋ ಆ ಮಾತುಗಳನ್ನು ಕೇಳಿದೊಡನೆ, ಅವನ ಮನೆಯಂಗಳದ ಮನದಲ್ಲಿಯೇ ಕುಸಿಯತೊಡಗಿದಳು. ಮಳೆ, ಗಾಳಿ ಮಣ್ಣು, ತರಗೆಲೆಗಳು ಅವಳನ್ನು ಸಂಪೂರ್ಣವಾಗಿ ಆವರಿಸಿದವು. ತಿಂಗಳು ಕಳೆದು, ಮಳೆಯೂ ನಿಂತಿತು.

ಮನೆಗೆ ವಾಪಾಸ್ಸದ ಗಿಲ್ಬರ್ಟ್.ಮನೆ ಅಂಗಳದಲ್ಲಿ ಒಂದು ಬೋನ್ಸಾಯ್ ಗಿಡ ಬೆಳೆದು ನಗುತ್ತಿರುವುದು ಗಮನಿಸಿದ. ಹತ್ತಿರ ಹೋದ, ಹೊಸ ಗಿಡ ಹುಟ್ಟಿದೆ. ಅಮ್ಮನನ್ನು ಕೂಗಿದ... ಗುದ್ದಲಿ ತಾ.. ಹದ ಮಾಡುವ ಬೋನ್ಸಾಯ್ ಗಿಡ ಹುಟ್ಟಿ, ಚಂದದಿ ನಗುತಿದೆ. ಇದರ ಮೇಲೆ ಒಂದು ಕವಿತೆ ಬರೆದು ಪ್ರೀತಿಯಿಂದ ಓದಿ ಹಗುರಾಗಬೇಕು.






ಶನಿವಾರ, ಜೂನ್ 17, 2023

ಕಾಡುವಿಕೆ

ದಿನಾ ಸಂಜೆಯಾಗುವ ವೇಳೆಗೆ ಮಕ್ಕಳ, ಗಲಾಟೆ, ಕಿರಿಕಿರಿ, ತಲೆನೋವು....
ಅಪ್ಪಾ... ಸಾಕಪ್ಪ, ಮನೆಗೆ ಹೋಗಿ ರೆಸ್ಟ್ ಮಾಡುವ ಅನ್ನಿಸುತ್ತಿದ್ದ ನನಗೆ ಬೇಸಿಗೆ ರಜಾ ದಿನಗಳಲ್ಲಿ,ಆ ಮಕ್ಕಳ ಗಲಾಟೆ, ನನ್ನೊಂದಿಗಿನ ಮಾತು, ಚಾಡಿತನ, ಅವರ ನಗು, ಮುಗ್ದತೆ, ಪಿಸುಗುಟ್ಟುವಿಕೆ, ವಿಧೇಯತೆ, ವಿನಯ, ಗೌರವ, ನನ್ನೊಂದಿಗಿನ ಆತ್ಮೀಯತೆ, ಅವರೊಂದಿಗಿನ ಒಡನಾಟಗಳು ಬಹುವಾಗಿ ಕಾಡುತ್ತಿವೆ.

ಎಷ್ಟಾದರೂ ನನ್ನ ಶಾಲೆಯ ಮಕ್ಕಳು, ನಮ್ಮ ಮಕ್ಕಳು, ದೇವರಂತ ಮುಗ್ಧ ಮಕ್ಕಳು.


Miss you All

ಖುಷಿಯ ಅಮಲೇರಿದ ದಿನ (ಚಾರಣ )

ಬಹುದಿನದ ಆಸೆ, ಕನಸು, ಹಂಬಲ.... ನಾನೂ trekking ಹೋಗಬೇಕೆಂಬುದು. ಆದರದೋ ಕೂಡಿಬಾರದ ದಿನವಾಗಿತ್ತು. ಹಪಾಹಪಿ ತನದ ಪ್ರಯತ್ನವಾಗಿ, ಅಂದಿನ ದಿನ ನಾನು ತಂಡದೊಂದಿಗೆ ಪಾರ್ವತಮ್ಮ ಬೆಟ್ಟಕ್ಕೆ ಖುಷಿ, ಕುತೂಹಲ ದೊಂದಿಗೆ ಚಾರಣ ಹೋದದ್ದು ಕನಸಿನ ಬೀಜಕ್ಕೆ, ಹದಗೊಳಿಸಿದ ತಂಪು ಮಣ್ಣಿನ ಸ್ಪರ್ಶ ದೊರೆತ ಖುಷಿಯಾಯಿತು.

ಪ್ರಕೃತಿಯೊಂದಿಗಿನ ಒಡನಾಟದ ಮುಂದೆ ನಾನೆಂಬುದು ಏನಿಲ್ಲವೆನಿಸಿತು. ಮೋಡ ಕವಿದ ವಾತಾವರಣ, ಹುಡುಕಿದರೂ ಸಿಗದಂತ ನಿಶ್ಯಬ್ಧತೆ , ತಂಪ್ಪಿಕ್ಕುವ ವಾಯುರಾಯ, ನಿಜಕ್ಕೂ ಮನಸ್ಸಿನ ಉಲ್ಲಾಸಕ್ಕೆ ಮೆಟ್ಟಿಲುಗಳಾದವು.

ಮನಸಿನ ಹಲವಾರು ಜಾಡುಗಳನ್ನು ಮರೆತು , ಮನಸ್ಸಿಗೆ ಹಿತನೀಡುವಲ್ಲಿ ಆ ಜಾಗ ಗೆದ್ದಿತ್ತು.

ಅಲ್ಲಿ ಎಲ್ಲರೊಂದಿಗೆ ತಿಂದ ಉಪಹಾರದಂತೆ ಆ ಬೆಟ್ಟದ ಮೌನವೂ ಖಿನ್ನತೆಯನ್ನು ತನ್ನ ಮೌನದಲ್ಲೇ ತಿಂದು ಮುಗಿಸುತ್ತಿರುವಂತೆ ಭಾಸವಾಗುತಿತ್ತು.
ನಿಜಕ್ಕೂ ಮೊದಲ ಚಾರಣ ನೀಡಿದ ಖುಷಿ,ಮಗದೊಂದು ಚಾರಣ ಹೋಗುವ ಆಸೆಯ ಬೀಜವು ಅಲ್ಲೇ ಚಿಗುರೊಡೆದು ಮೊಗ್ಗಾಯಿತು.

ಆತ್ಮೀಯರೊಂದಿಗೆ ಆತ್ಮೀಯತೆಯ ಸ್ಪರ್ಶದಲ್ಲಿ , ಏಕಾಂತಕ್ಕೆ ಹೆಗಲು ಕೊಡುವ ಅಲ್ಲಿಯ ವಾತಾವರಣದೊಂದಿಗೆ ಪ್ರಕೃತಿಯ ಸವಿಯನ್ನು ಸವಿದದ್ದು ಅಲ್ಲಿಯೇ.

ಮತ್ತೊಂದು ಚಾರಣ ನೀರಿಕ್ಷೆಯಲ್ಲಿ ಸದಾ.... ಹಸಿರಾಗಿ .... ಉಸಿರಾಗುತ್ತಿರುವ....


ಶುಕ್ರವಾರ, ಜೂನ್ 9, 2023

ಭಾವಗಳು ಕರಗಿ 
ಮನೆ ಹನಿಗಳಾಗಿ
ತೊಯ್ದು
ಭುವಿಯಲ್ಲಿ ಮಿಂದು
ನಿನ್ನಲ್ಲಿಯ ತಾಳ್ಮೆ 
ಮೊಳಕೆಯ
ಚಿಗುರಾಗಿ ಬೆರೆತು
ನಿನ್ನಂಶವಾಗಿ ಆವಿರ್ಭವಿಸುವ 
ತವಕದಲಿ
ಕುಣಿ ಕುಣಿ
ಮನದಲಿ ಹಗುರಾಗುತಿಹವು 

ಮಂಗಳವಾರ, ಜನವರಿ 24, 2023

ನೀನು ನನ್ನೊಳಗೆ
ಹಸಿರಾಗಿರುವ ಬುದ್ಧ
ನಾನು ನಿನ್ನೊಳಗೆ
ಬೆಚ್ಚಗೆ ಉಸಿರಾಡುತ್ತಿರುವ ಕಂದ
ನಿನ್ನೊಳಗಿನ ತಾಳ್ಮೆ
ನನ್ನೊಳಗಿಗೆ ಹೊಳಪಿನ ಚಿಗುರು
ನಿನ್ನಯ ಪ್ರೀತಿ ಕಾಳಜಿ ಪಸೆ
ನನ್ನೊಳಗಿನ ಬದುಕಿಗೆ ಹಸಿರು
ಉಸಿರಿನ ಹರಿವು.














ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...