ಅಡಗಿದ್ದ ಚಿತ್ರಕಾರ ಎಚ್ಚೆದ್ದು
ಹೊರ ಬರಲು ತವಕಿಸಿದ
ಇಳಿವಯಸ್ಸಿನ ಅವ್ವನೆಂದಳು
ನೀನಿನ್ನು ಎಳೆಮಿಡಿ ಕೂಸೆ
ಮೌನದಿ ಬಯಸಿ ವರ್ಣವ
ತಬ್ಬಿ ತಾಳಿದನು
ವರ್ಣಗಳ ಬಿಸಿ ಕುದಿ ಏರುತಲಿತ್ತು
ಚಿತ್ರಕಾರ ಅವ್ವನಲ್ಲಿ ಆಹ್ವಾನಿಸಿದ
ನಾನು ಹೊರಬರಲೇ...??
ಅಂತಃಕರಣದ ಮುದಿ ಮನ
ಉಸುರಿತು ಬೆತ್ತಲೆ ಜಗತ್ತಿನೊಳು
ಬಂದು ನೀನೇನು ಮಾಡುವೆ..??
ಬಿಸಿ ರಕ್ತದೋಕುಳಿ ಹರಿದು
ಎದೆಯಲ್ಲಿ ಕೊರೆದು ಮೂಡಿರುವ
ಸತ್ಯ -ಮಿಥ್ಯದ ನೆರಳು
ಬೆಳಕು ಹುಣ್ಣಿನ ಉಬ್ಬು ತಬ್ಬಿನ
ಚಿತ್ರವನ್ನು ಅಂಟಿಸಿ ಎಲುಬಾಗಿ
ಜಗತ್ತಿನ ಅಸ್ಥಿಪಂಜರವಾಗುವ
ಓಕುಳಿ ಖಾಲಿ ಹಾಳೆಯಲಿ ಎಲ್ಲೆಡೆ
ಚಿಮ್ಮಿ ಹರಿಯುತಿತ್ತು
