ಕೆಲಸಬೇಕಾಗಿದೆ, ಆ ಕಚೇರಿಯಲಿ
ಆ ಒಲವ ನೋಡಲು
ಅದರ ಚೆಲುವ ಸವಿಯಲು
ಅಂತರ್ಯ ಸ್ವಚ್ಛವಾಗಲು
ಆ ಒಂದು ಕಚೇರಿಯಲಿ
ಒಲವಿಂದ ಉಸಿರಾಡುತ್ತಿರುವ
ಹಸಿರಿನ ಅರಿವನ್ನು
ನಾ ಉಸಿರಾಡಲು
ಕೆಲಸ ಬೇಕಾಗಿದೆ, ಆ ಕಚೇರಿಯಲಿ
ಒಲವು ಮೌನದಲಿ
ಪ್ರತಿಭಟಿಸುತ್ತಿರುವ
ಶಿಷ್ಟತೆಯ , ಮಾರ್ದನಿಯಾಗಿ
ಧ್ವನಿಸಲು ಕೆಲಸಬೇಕಾಗಿದೆ
ಆ ಕಚೇರಿಯಲಿ
ಒಲವಲ್ಲಿ ತುಂಬಿರುವ
ಗಾಂಭೀರ್ಯವನು ಅಳೆದು
ಕುಡಿದು ಹೊರಹೊಮ್ಮಿದ ಹೂವಾಗಲು
ಕೆಲಸಬೇಕಾಗಿದೆ, ಆ ಕಚೇರಿಯಲಿ
ಒಲವಿನ ಕಣ್ಣಲ್ಲಿ ಕಣ್ಣಾಗಿ
ಮಾತಲ್ಲಿ ಮಾತಾಗಿ
ಸುತ್ತಲಿನ ಸಾಂಗತ್ಯವಾಗಿ
ಅದರ ಚಪ್ಪಲಿಯ ಧೂಳಾಗಿ
ಅದರಂತೆ ಶಾಂತಿ ಸೌಹಾರ್ದದ
ಮೂರ್ತಿಯಾಗಲು
ಕೆಲಸಬೇಕಾಗಿದೆ, ಆ ಕಚೇರಿಯಲ್ಲಿ
ಕಸಗುಡಿಸುವ ಕೆಲಸಬೇಕಾಗಿದೆ.


















