ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಭಾನುವಾರ, ಮಾರ್ಚ್ 28, 2021

ಕಣ್ಣುಗಳು

ಕಣ್ಣುಗಳು 
ಎದುರು ಮನೆಯ ಹುಡುಗಿಯ
ಕಣ್ಣುಗಳಲ್ಲಿ ಸದಾ
ನೀರು ಚಿಮ್ಮುತ್ತಿರುತ್ತದೆ
ಬತ್ತದ ಅಂತರ್ಜಲ
ಪ್ರತಿದಿನದ ಕನಸು
ಅವಳ ಕಣ್ಣುಗಳಲ್ಲಿ
ಕಣ್ಣಿಡಬೇಕೆಂದು
ನನ್ನ ಕಣ್ಣುಗಳನ್ನು
ಸಂದೇಶ ರವಾನಿಸುವ
ಮೇಲ್ , ಮೆಸೇಜ್ ಗಳನ್ನಾಗಿಸಬೇಕೆಂದು,
ಅರ್ಥೈಸಿಕೊಳ್ಳದಿದ್ದರೆ ಬೇಡ
ಡ್ರಾಫ್ಟ್  ಬಾಕ್ಸ್ ನಲ್ಲೆ ಬೀಗ
ಜಡಿದುಕೊಳ್ಳಲಿ, ಎಂದೇನೇನೋ
ನೋಟಿಫಿಕೇಶನ್ಗಳು ನನ್ನ ತಲೆಯಲ್ಲಿ 
ರಿಂಗಣಿಸುತ್ತಿದ್ದ ಒಂದು ಅನುದಿನ 
ಎದುರಿಗೆ ಸಿಕ್ಕೇಬಿಟ್ಟಳು  
ಸಹಜವಾಗೇ, ನನ್ನ ಕಣ್ಣಲ್ಲಿ ಕಣ್ಣಾದಳು 
ಅಷ್ಟೂ ದಿನದ ಕೋಪ 
ದೃಷ್ಟಿಗಳ ಮಿಲನದಲ್ಲಿ 
ನನ್ನಲ್ಲೂ ಕಣ್ಣಿಂದ ಧಾರಾಕಾರವಾಗಿ 
ಹರಿಯಲಾರಂಭಿಸಿದರೂ 
ಅವಳ ಕಣ್ಣೀರಿನ ಆಳ -ಅಗಲಗಳೊಡನೆ 
ನನ್ನ ಕಣ್ಣುಗಳು ಬಳಲಿದವು 
ಅವಳ ಕಣ್ಣುಗಳು 
ಜೀವನದ ಅಲೆಗಳಲ್ಲಿ 
ಮಿಂದು ಹೊಳೆಯಾಗಿದ್ದವೇ ವಿನಃ 
ಪುಟಿದುರುಳುತ್ತಿದ್ದ ಚಿಲುಮೆಗಳಿಂದಲ್ಲ. 




ಗುರುವಾರ, ಮಾರ್ಚ್ 25, 2021



   


     ಸುನೀತ ಮೇಡಂರವರು ಹೇಳುವಂತೆ ನಾ ಅವರಿಗೆ ಅಪರಿಚಿತಳಾದರೂ, ನನಗೆ ತುಸು ಪರಿಚಿತ(ಕೃತಿ )ರಿರುವ ಅವರ ಸಾಮಾನ್ಯ ಓದುಗಳಾಗಿ ನಾನೇನು ಬರೆಯಬಲ್ಲೆ ಎಂಬುದು ನನ್ನನ್ನು ಬಹುವಾಗಿ ಕಾಡಿತು. ಪ್ರಯತ್ನದ ಬರವಣಿಗೆಯಲ್ಲಿ ವ್ಯತ್ಯಾಸಗಳಿದ್ದರೆ ಕ್ಷಮೆ ಎಂಬ  ಪ್ರೀತಿಯಿರಲಿ. 

ನಾಡಿನ ಖ್ಯಾತ ಸಾಹಿತಿ ಡಾ.ನಾ.ಡಿಸೋಜರವರ " ಕವಿ ಬೆಳೆದ ಹಾಗೆ ಆತ ಪರಿಪೂರ್ಣನಾಗುತ್ತಾನೆ. ಆ ಬಗೆಯ ಎಲ್ಲಾ ಲಕ್ಷಣಗಳು ಸುನೀತಾರವರಿಗಿದೆ, ಎಂಬ ಮುನ್ನುಡಿಯನ್ನು ಲೇಪಿಸಿಕೊಂಡು ಉರುಳುತಲಿರುವ "ಉರುಳುವ ಗಾಲಿಗೆ ಹಿಡಿಯುತ ಕೋಲು " ಮಕ್ಕಳ ಕವನ ಸಂಕಲನವು 76 ಕವನಗಳನ್ನು  ತನ್ನ ಉರುಳುವ ಗಾಲಿಗೆ ಹಿಡಿದಿದೆ. 

 ಬಿಡುವಿಲ್ಲದ ಜೀವನದ ಜಂಜಾಟಗಳಲ್ಲಿ ಮಕ್ಕಳಾಗಿ, ಮಕ್ಕಳ ಮನಸ್ಥಿತಿಯೊಳಗೆ ಹೊಕ್ಕು, ಮುಗ್ಧತೆಯನ್ನು ಇಣುಕಿನೋಡಿ ಕವನಗಳಾಗಿ ಬರೆಯುವುದು, ಎಂಥಹವರಿಗೂ ತುಸು ತ್ರಾಸಕ್ಕೆ ತಳ್ಳುವ ಸಂಗತಿಯೇ. ಅಂಥಹ ಸಂಗತಿಗಳನ್ನೆಲ್ಲಾ ಬದಿಗೊತ್ತಿ ಸುನೀತ ಮೇಡಂರವರು,  ತಮ್ಮ ಮಕ್ಕಳಿಗಾಗಿ, ಮುಗ್ಧ ಮನದ ಮೊಗ್ಗುಗಳಿಗಾಗಿ ಉರುಳುವ ಗಾಲಿಗೆ ಹಿಡಿಯುತ ಕೋಲೆಂಬ ಉತ್ತಮವಾದ ಪ್ರಯತ್ನವನ್ನು ನಮ್ಮ ಮುಂದಿಟ್ಟಿದ್ದಾರೆ. 

 ಸುನೀತ ಮೇಡಂರವರ ಉರುಳುವ ಗಾಲಿಯು,  ಪುಟಾಣಿ ಮುಗ್ಧ  ಮನಸ್ಸುಗಳನ್ನು ಸಹಜವಾಗಿ ಅರಳಿಸುವ ಮನೆ, ಶಾಲೆ, ಹೂ, ಪ್ರಾಣಿ, ಹಬ್ಬ, ಜಾತ್ರೆ, ಮಳೆ, ಆಟಗಳು, ಹಳ್ಳಿ, ಪರಿಸರ, ದೇಶ, ಭಾಷೆ  ಹೀಗೆ ನೀತಿಪೂರಕವಾಗಿ, ಮನೋರಂಜನಾತ್ಮಕವಾಗಿ , ಕಲಿವಿಕೆಗೆ ಪೂರಕ ಲಯಗಳ ಮೂಲಕ ತನ್ನ ಕವನಗಳನ್ನು ಉರುಳಿಸುತ್ತಾ ಸಾಗಿದೆ. 

ಮೇಲಿನಿಂದ ನೂಲಿನ ಹಾಗೆ 
ಬೀಳುವೆ ಹೇಗಣ್ಣಾ? 
ಯಾರು ಅಲ್ಲಿ ನೇಯ್ಗೆ  ಕೆಲಸ 
ಮಾಡುತ್ತಿರುವರು? 

ಮಳೆಯಣ್ಣ ಕವನದಲ್ಲಿ ಲೇಖಕಿ ಮಗುವಾಗಿ ಮಳೆಯನ್ನು, ನೂಲಾಗಿ ಕಾಣುವ ವಿಭಿನ್ನ  ಚಿಂತನೆ, ಮಳೆಬೀಳುವಿಕೆಯಲ್ಲಿ  ನೇಯ್ಗೆ ಕೆಲಸದ ಕಲ್ಪನೆ, ಮಳೆ ಹನಿಯನ್ನು ಬಣ್ಣವಿಲ್ಲದ ಬಿಂದುವಾಗಿ ಕಾಣುವುದು, ಹನಿಗಳು ಡಿಕ್ಕಿ ಹೊಡೆಯುವಿಕೆಯ ಭಾವ, ಇವು ಕವಿ ಮನಕ್ಕೆ ಮಾತ್ರ ಸಾಧ್ಯವಾದೀತು ಎಂಬುದು ನನ್ನ ಭಾವನೆ. 

ಮನೆ  ಮನಗಳ ಬೆಸುಗೆಯಾಸೆಗೆ 
ಹೃದಯ ಹಣತೆಯ ಹಚ್ಚಿಟ್ಟ ಭಾಷೆ 
ನಮ್ಮ ಕನ್ನಡ ಎಷ್ಟು ಸುಂದರ 

 ಇಲ್ಲಿ ಲೇಖಕಿ ಕನ್ನಡ ಭಾಷೆಯ ಮೇಲಿನ ಅಭಿಮಾನ,  ಪ್ರೀತಿಗೆ ತನ್ನ ಕವನವನ್ನು ಬೆಸುಗೆಯಾಗಿಸಿದ್ದಾರೆ.

ಕಪ್ಪು ಬಣ್ಣದ ಪರದೆಯೂ 
ಬಿಳಿಯ ಸೀಮೆಸುಣ್ಣವೂ 
ಕರಿಹಲಗೆಗದು ಸಮವಸ್ತ್ರವೂ 
ಬರೆದು ಅಳಿಸಿ ಬರೆದು ಅಳಿಸಿ 
ಎದೆಯೊಳಗೆಲ್ಲಾ ಇಳಿಯುತ್ತೆ 

 ಶಾಲೆಯಲ್ಲಿ ಮಕ್ಕಳ ಕಲಿಕೆ, ಕರಿಹಲಕೆಯ ಮೇಲಿನ ಬರವಣಿಗೆಯಿಂದ ಪಕ್ವತೆ ಪಡೆಯುವುದನ್ನು ಲೇಖಕಿ ಸುಂದರವಾಗಿ ಕರಿಹಲಗೆಗೆ ಬಿಳಿಯ ಸಮವಸ್ತ್ರ ತೊಡಿಸುವ ಮೂಲಕ ಕವನದ ಸಾಲುಗಳನ್ನು ಚೆಂದಗಾಣಿಸಿದ್ದಾರೆ. 

ಒಳ್ಳೆಯ ಗೆಳೆಯರ ಸೇರಿಕೊಂಡು 
ಬಾಳು ಚೆಂದ ಮಾಡು ಕಂದ 
ಎಲ್ಲರೊಳಗೊಂದಾಗಿ ನೀನು 
ಮಡಿಲ ಮುತ್ತಾಗು 
ಈ ನಾಡಿನ ಸ್ವತ್ತಾಗು 

 ಲೇಖಕಿ ಮೂಲತಃ ಶಿಕ್ಷಕಿಯಾಗಿರುವುದರಿಂದ ತಮ್ಮ ಮಕ್ಕಳಲ್ಲಿ ಅಪೇಕ್ಷಿಸುವ ಸದ್ಗುಣ, ಆಚಾರ-ವಿಚಾರ ವಿನಯಗಳಿಂದ ಮಡಿಲ ಮುತ್ತಾಗಿ , ಸ್ವತ್ತಾಗಿ ಬಾಳಿರಿ ಎಂದು ಆಶಿಸಿದ್ದಾರೆ. 

ಹಳ್ಳಕ್ಕೆ ಬಿದ್ದ ಕಸವಿಸಿಯೇನು 
ಬಿದ್ದರೂ ಎದ್ದು ಓಡೂ 
ಬದುಕು ಹಾಗೆಯೇ ನೋಡು 
ಸುಲಭದಿ ಸಿಕ್ಕ ಈ ಚಕ್ರ, ಕೋಲು 

  ಕವನ ಸಂಕಲನದ ಆಶಾಭಾವದ ಶೀರ್ಷಿಕೆ ಹೊತ್ತಿರುವ ಉರುಳುವ ಗಾಲಿಗೆ ಹಿಡಿಯುತ ಕೋಲು ಕವಿತೆಯಲ್ಲಿ ಲೇಖಕಿ, ಹೊರಗೆ ಹೋದ ಮಗ ಸಮಯವಾದರೂ ಇನ್ನೂ ಬಾರದಿದ್ದನ್ನು ಕಂಡು ತಾಯಂದಿರು ಪಡುವ  ಸಹಜವಾದ ಆತಂಕ, ಚಕ್ರವನ್ನು ನಾಗರೀಕತೆಯ ಸಂಕೇತವಾಗಿ, ಕೋಲನ್ನು ನಿಯಂತ್ರಣದ ಸಂಕೇತವಾಗಿ ಬಳಸಿ, ಬದುಕಿನಲ್ಲಿ ಸೋಲು ಸಹಜ, ಅದನ್ನು ಕೊಡವಿ ನಿಂತು, ಬದುಕಿನಲ್ಲಿ ಆಹ್ವಾನಿಸುವ ಅವಕಾಶಗಳನ್ನು ಬಳಸಿ ಬೆಳೆಯುವ ಆಶಯದೊಂದಿಗೆ, ಶರವೇಗದಲ್ಲಿ  ಉದಯಿಸುತ್ತಿರುವ ಇಂದಿನ ನಾಗರಿಕತೆಯನ್ನು ಪರಿಸರದ ಅರಿವಿನಿಂದ, ನಾಗರೀಕತೆಯ ರಕ್ಷಣೆಯನ್ನು ಹಿಡಿಯುವ ಕೋಲಾಗಿ ಹಾಗೆ ಜೀವನದ ಸೋಲು - ಗೆಲುವಿನ  ಚಕ್ರಕ್ಕೆ, ಆಶಾಭಾವದಿಂದ ಸೆಟೆದು ನಿಲ್ಲುವ ಕೋಲನ್ನು ಹಿಡಿಯಿರಿ ಎಂಬುದನ್ನು ಆಟದ ಮೂಲಕ ವ್ಯಕ್ತಪಡಿಸಿರುವುದು ಅವರ ಕವಿತ್ವ ಭಾವಕ್ಕೆ ಉತ್ತಮ ಉದಾಹರಣೆ.  

ಅಮ್ಮ ಅಮ್ಮ ರಜೆಯಲಿ ನಾನು 
ತಾತನ ಮನೆಗೆ ಹೋಗುವೆನು 
ಸುಡು ಸುಡು ಬಿಸಿಲಿನ ರಜೆಯನು ನಾನು 
ಮರದ ನೆರಳಲಿ ಕಳೆಯುವೆನು 

 ಆಧುನೀಕತೆಯ ಆಡಂಬರ, ಭರಾಟೆಗಳಲ್ಲಿ ಮಕ್ಕಳಲ್ಲಿರುವ ಮುಗ್ಧತೆ ದಿನೇ ದಿನೇ ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ರಜೆಯ ಮಜಾ ಕವಿತೆ, ನಮ್ಮನ್ನು ಬಾಲ್ಯಕ್ಕೆ ಮತ್ತೊಮ್ಮೆ ಅಟ್ಟಿದ ಅನುಭವ ಮತ್ತು ಇಂದಿನ  ಮಕ್ಕಳಿಗೆ ನಾವು ಕಳೆದ ಬಾಲ್ಯವನ್ನು ಚುಟುಕಾಗಿ ತಿಳಿಸಲು ಒಂದು ಉತ್ತಮ ಸಾಧನ ಈ ಕವಿತೆ. 

 ಕೆಲವು ಕವಿತೆಗಳಲ್ಲಿ ಪ್ರಾರಂಭದ ಸಾಲುಗಳಲ್ಲಿ ತುಡಿಯುವ ಲಯ, ಭಾವ, ಕವಿತೆಯ ಕೊನೆಯವರೆಗೂ ಮಿಡಿಯುವಂತಿರಬೇಕಿತ್ತು ಎಂಬುದು ನನಗೆ ಸುನೀತ ಮೇಡಂರವರ ಕವನಗಳನ್ನು ಓದಿದಾಗ ಲಘುವಾಗಿ ಮಿಡಿದ ಭಾವಾನಿಸಿಕೆ.

 "ಪುಸ್ತಕದಲ್ಲಿರುವ ಕೆಲವು ಪದ್ಯಗಳನ್ನಾದರೂ ಶಾಲಾ ವಿದ್ಯಾರ್ಥಿಗಳು,  ರಾಗವಾಗಿ ಹಾಡಿದರೆ ನನ್ನ ಪ್ರಯತ್ನ ಸಫಲವಾಗುವುದು ಎಂಬ ಭಾವದೊಂದಿಗೆ,  ನನ್ನ ಶಿಶುಗೀತೆಗಳನ್ನು ವಿದ್ಯಾರ್ಥಿಗಳು ತರಗತಿಯಲ್ಲಿ ದಿನನಿತ್ಯ ಹಾಡುವುದನ್ನು ಕೇಳುತ್ತಾ, ತೃಪ್ತಿಯ ಸಾರ್ಥಕ್ಯ ಭಾವ ಕಂಡಿರುವ ಲೇಖಕಿ, ಓದುಗರ ಸಾರ್ಥಕ್ಯ ಭಾವದ ಅಭಿಪ್ರಾಯಿಸುವಿಕೆಗಾಗಿ "ಉರುಳುವ ಗಾಲಿಗೆ ಹಿಡಿಯುತ ಕೋಲು " ಕವನ  ಸಂಕಲನವನ್ನು ನಮ್ಮ -ನಿಮ್ಮೆಲ್ಲರ ಮುಂದಿಟ್ಟಿದ್ದಾರೆ. ಅವರ ಪ್ರಯತ್ನಕ್ಕೆ ಉತ್ತಮವಾದ ಯಶಸ್ಸು ಓದುಗರ ವಿಮರ್ಶೆ, ಪರಾಮರ್ಶೆ, ಹಾರೈಕೆಗಳ ಮೂಲಕ ಒಲಿದು ಬರಲಿ, ಸುನೀತ ಮೇಡಂ  ಸಾಹಿತ್ಯಕ್ಷೇತ್ರ ಕಂಡ ಉತ್ತಮ ಕವಿಗಳನ್ನು ಮೀರಿ ಬೆಳೆಯುವ ಹೃದಯಕವಿಯಾಗಿ ಪುಟಿಯಲಿ ಎಂದು  ಅತ್ಯಂತ ಕಿರಿಯವಳಾಗಿ ಮನ ತುಂಬಿ ಹಾರೈಸುತ್ತೇನೆ 💐💐.




ಮಂಗಳವಾರ, ಮಾರ್ಚ್ 23, 2021

ತೋರ್ಪಡಿಕೆ

ತೋರ್ಪಡಿಕೆ ನಾಟಕದಲ್ಲಿ
ಪ್ರಾಮಾಣಿಕತೆಯ ಅಂಗಿಯನ್ನು
ಕಳಚಿ ತೊಟ್ಟಿಕೊಂಡಿತು
ನೋಡಲು ಎಷ್ಟು ಮಿರ ಮಿರ
ನವ ನವ, ಶುಭ್ರ
ಬೀಸೋ ಗಾಳಿ, ಹರಿವ ನೀರಿಗೂ
ಅದರ ಅಂಗಿಯಲ್ಲಿರುವ
ಕಪ್ಪು ಚುಕ್ಕೆಗಳು ಕಾಣಿಸುವುದಿಲ್ಲ
ದುರ್ಬಿನ್ನೇ ಬೇಕಾದೀತು
ಗಾಂಧಿತಾತನ ನ್ಯಾಯಬೆಲೆ
ಅಂಗಡಿಯ ಸಾಬೂನುಗಳಿಂದಲೂ
ಆ ಚುಕ್ಕೆಗಳು ಮಾಸುವುದಿಲ್ಲ 
ಇನ್ನಷ್ಟು ಇಸ್ತ್ರಿ ಮಾಡಿದಂತೆ 
ಹೊಳೆಯುತ್ತದೆ 
ಅದರ ವಿಜೃಂಭಣೆಯ ಮುಂದೆ 
ಅಸಹಾಯ ಪ್ರಾಮಾಣಿಕತೆ 
ಬಾಯಿಗೆ ಬೀಗ ಜಡಿದು
ಜನ ಮನಗಳನ್ನು ಹುಡುಕುತ್ತಾ 
ಅಲೆಯುತ್ತಿರುತ್ತದೆ 
ಎಲ್ಲಿಯವರೆಗೆ...? 
ತೋರ್ಪಡಿಕೆ ಅಂಗಿಯ 
ಕಳಚಲು ಅವ, ಅವಳು 
ಕಪ್ಪು ರಂಧ್ರಗಳಿಲ್ಲದ ಹೊಸ 
ಬಿಳಿ ಅಂಗಿ ತೊಡುವವರೆಗೆ 
ಆದರಿನ್ನೂ ಅವರು ಅಂಗಿ 
ಖರೀದಿಸುವ ಯೋಚನೆಯನ್ನು 
ಮಾಡಿಲ್ಲ. 


ಗುರುವಾರ, ಮಾರ್ಚ್ 4, 2021

ಅನೀಫಾ

ಖಾಲಿ ಕುರ್ಚಿಯಲ್ಲಿ
ಕುಳಿತ ನಮ್ಮ ಅನೀಫನಿಗೆ
ಮನಸ್ಸೆಲ್ಲಾ ಖಾಲಿ -ಖಾಲಿ
ಒಮ್ಮೊಮ್ಮೆ ಅದರಲ್ಲಿ
ಹೂ ಅರಳಿದಂತೆ,
ಗಾಳಿ ಬೀಸಿದಂತೆ ಭಾಸವಾಗಿ
ಕುರ್ಚಿ ಹಿಂದೆ ಮುಂದೆ
ವಾಲಿದೊಡನೆ ತಡ
ಬಡಯಿಸುತ್ತಾನೆ
ಪಕ್ಕದಲೆಲ್ಲೋ ಸದ್ದಾಗಿ
ಭ್ರಮೆಯಿಂದ ಎಚ್ಚರಿಸುತ್ತದೆ 
ಕುರ್ಚಿಯ ಕೈ ನೇವರಿಸುತ್ತಾನೆ 
ಕಾಲಲ್ಲಿ ಕಾಲಿಟ್ಟು ಚಡಪಡಿಸುತ್ತಾನೆ 
ಅದರೊಡನೆ ಸಂವಾದಕ್ಕಿಳಿಯುತ್ತಾನೆ 
ಹಾಗೂ ಮನಸ್ಸು ತುಂಬಲಿಲ್ಲ 
ಕೊನೆಗೆ ಕುರ್ಚಿಯೊಂದಿಗೆ 
ಕನಸಿಗೆ ಬೀಳುತ್ತಾನೆ 
ಅಲ್ಲೂ ಸಾಣೆ ಹಿಡಿಯುವ 
ಮಂಡಿಗೆ ತಿನ್ನುವ ಮರ್ಕಟ ಛಾಯೆ 
ತಕ್ಷಣ ಕುರ್ಚಿಗೆ ಮೆತ್ತಿದ 
ತುಕ್ಕೆಂಬ ರಜದ ನೆನಪಾಗಿ
ಕುರ್ಚಿಯಿಂದ ಎದ್ದು, ಎಣ್ಣೆ ಹಚ್ಚಿ 
ಪಾಲಿಶ್ಯು ಮಾಡ ತೊಡಗುತ್ತಾನೆ. 




ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...