ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಬುಧವಾರ, ಜನವರಿ 27, 2021

ಮೆರಗು ನೀಡುವ ಹಬ್ಬ ಆಚರಣೆ

        ಅದೊಂದು ರಾಷ್ಟ್ರೀಯ ಹಬ್ಬ ಆಚರಣೆಯ ದಿನದಲ್ಲಿ ಶಾಲೆಗೆ ಮೆರಗು ತರಬಯಸಲು ಸ್ಪರ್ಧೆ, ಆಟ -ಊಟೋಪಚಾರಗಳ ಆಮಿಷ ಒಡ್ಡಿ ಎಲ್ಲರನ್ನು ಸೇರಿಸಿದ ಕಾರ್ಯಕ್ರಮ. ಅಂದು ಶಾಲೆಯಲ್ಲಿ ಹಿಂದೆಂದೂ ಕಾಣದ ಹಬ್ಬದ ವಾತಾವರಣ. 

ಶಾಲೆಯ ಮುಂದೆ ದಿನಾ ನಡೆದು ಹೋದರೂ,ಶಾಲೆಯ ಕಡೆ ತಿರುಗಿಯೂ ನೋಡದ, ಅಕಸ್ಮಾತಾಗಿ ನೋಡಿದರು ಶಾಲೆಯ ಕಟ್ಟಡ, ಅಲ್ಲಿಯ ಶಿಕ್ಷಕರು ನಮಗೆ ಗೊತ್ತೇ ಇಲ್ಲವೆಂಬಂತೆ ಹೋಗುವ ಜನಗಳು, ಸರ್ಕಾರಿ ಶಾಲೆ ಎಂದರೆ ಏನೋ ಉದಾಸೀನ ಮನೋಭಾವನೆ ಇರುವ ಗಣ್ಯರು, ಶಾಲೆಯನ್ನು ಸಾರ್ವಜನಿಕ ಸಭಾಂಗಣ ಮತ್ತು ಸಾರ್ವಜನಿಕ ಆಟದ ಮೈದಾನ ಮಾಡಿಕೊಳ್ಳಲು ಬಯಸುತ್ತಿರುವ ಮನಸ್ಸುಳ್ಳವರೆಲ್ಲಾ,  ಆ  ದಿನ ಅಲ್ಲಿ ನೆರೆದು ನಮ್ಮದೇ ಶಾಲೆ ಎಂಬಂತೆ ಬೀಗುತ್ತಿದ್ದರು.ಅದರಲ್ಲಿ ಒಂದೋ - ಎರಡೋ ಮನಸ್ಸುಗಳು  ಮಾತ್ರ ನಾನು ಓದಿದ ಶಾಲೆಯ ಅಭಿವೃದ್ಧಿಯ ಶ್ರೇಯಸ್ಸಿಗಾಗಿ ಶ್ರಮಿಸುತ್ತಿದ್ದವು.

ಅಲ್ಲಿಯ ಶಿಕ್ಷಕರುಗಳ ತೋರ್ಪಡಿಕೆಯ ಓಡಾಟ ಅಷ್ಟಿಷ್ಟಲ್ಲ.ಜನರಂತು ಶಿಕ್ಷಕರುಗಳ ಓಡಾಟ ನೋಡಿ ತಾವೂ ಶಿಕ್ಷಕರಾಗಿದ್ದರು. ಅದರಲ್ಲಿ ಕೆಲವು ಶಿಕ್ಷಕರು ತರಾತುರಿಯಲ್ಲಿ ನೀಡಿದ ಕೆಲಸವನ್ನು ಅಸಮಾಧಾನದಿಂದಲೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.
 
ಕಾರ್ಯಕ್ರಮವು ಹೇಗೋ ಏನೋ ಅದ್ದೂರಿಯಾಗಿ ನಡೆಯಿತು, ಎಲ್ಲರು ಆಡಿ, ಉಂಡು ತಿಂದು, ಕುಣಿದರು, ಸಮಾಪ್ತಿಯು ಹೊಸ ವರ್ಷ ಆಚರಣೆಯಂತೆ ರಾತ್ರಿಗಳಲ್ಲಿ ಜರುಗಿತ್ತು. 

    ಮಾರನೇ ದಿನ ನಾ ಎಂದಿನಂತೆ ಶಾಲೆಯ ಮುಂದೆ ಹಾದು ಹೋಗುವಾಗ ಗಮನಿಸಿದೆ... ಮೊದಲಿನಂತೆ ಕಂಡ ಶಾಲೆ, ಆದರೆ ಗಿಡಗಳನ್ನು ತೆಗೆದು ಮತ್ತೆ ನೆಟ್ಟ ಹೊಸ ಗಿಡಗಳು, ಕಾರ್ಯಕ್ರಮ ನಡೆದ ಸಂಕೇತವಾಗಿ ಅವಶೇಷವಾಗಿ ಉಳಿದಿದ್ದ ಚಪ್ಪರ, ನನ್ನನ್ನು ಬಳಸಿಕೊಂಡು ತಿಂದು ಕುಡಿದರೆಂದು ಅಳುತ್ತ ಹರಕು -ಮುರುಕಾಗಿದ್ದ ಪ್ಲಾಸ್ಟಿಕ್ ಲೋಟ-ತಟ್ಟೆಗಳು, ಕಸ, ಮೂಲೆಗಳಲ್ಲಿ ಅವಿತು ಕುಳಿತ್ತಿದ್ದ ಬಾಟಲಿಗಳು, ನಾಯಿಗಳು ಮೂಸಿ ನೋಡಿ ಖುಷಿ ಪಡುತ್ತಿದ್ದ ಮೂಳೆಗಳು ಹಾಗೂ ಮಕ್ಕಳಿಲ್ಲದೆ ಬಿಕೋ ಎನ್ನುತ್ತಿದ್ದ ಶಾಲೆಯ ಮೂಕರಾಗದ ತರಂಗದಲೆಗಳು. 

ಎಲ್ಲಕ್ಕಿಂತ ನನ್ನನ್ನು ಹೆಚ್ಚಾಗಿ ಕಾಡಿದ ವಿಷಯವೆಂದರೆ ಅಲ್ಲಿ ಕ್ರಾಂತಿಕಾರಿಯಾಗಿ ಭುಗಿಲೆದ್ದು ಕೆಲಸ ಮಾಡಿದ ಜಾತಿಯ ಬೇರು, ರಾಜಕೀಯ ವೈಷಮ್ಯ, ನಾಟಕೀಯ ಪ್ರವೃತ್ತಿ, ಪ್ರಚಾರದ ಲಾಬಿಗಳು. ಎಲ್ಲಿಯೂ ಶಾಲೆಯ ಮೃದು ಮನಸ್ಸುಗಳನ್ನು ಪಾರಿಜಾತಗಳಾಗಿ ಅರಳಿಸುವ ಭರವಸೆ ಕಂಡು ಬರಲಿಲ್ಲ.

ಹೂ, ಹಣ್ಣು, ಹಾರ-ತುರಾಯಿ, ಬಹುಮಾನ, ಉಪಹಾರಗಳಿಗೆಂದು ದಾನ ನೀಡಿ ಪ್ರಚಾರ ಪಡೆಯುವ ಉದಾರ ಮನಸ್ಸುಗಳು, ಶೈಕ್ಷಣಿಕ ಉಪಯುಕ್ತತೆ ವಿಷಯ ಬಂದರೆ ಉದಾರತೆ ಬತ್ತಿದ ಜಲವಾಗುತ್ತದೆ. ಹಾರ-ತುರಾಯಿ, ಬಹುಮಾನ, ಉಪಹಾರ ಇತ್ಯಾದಿಗಳಿಗೆ ಸಂಗ್ರಹಗೊಂಡಿದ್ದ ಅಷ್ಟೂ ಹಣವು ಮಕ್ಕಳ ಶೈಕ್ಷಣಿಕ ಉದ್ದೇಶಕ್ಕಾಗಿ ಅಲಂಕಾರಗೊಂಡಿದ್ದರೆ ಉದಾರತೆ ಸಾರ್ಥಕತೆಯ ಉತ್ತುಂಗದಲ್ಲಿ ವಿಜೃಂಭಿಸುತಿತ್ತು.


ಶನಿವಾರ, ಜನವರಿ 23, 2021

ಬುಧವಾರ, ಜನವರಿ 20, 2021

ಕವಿತೆಗಳು

ಇತ್ತೀಚೆಗೇಕೋ ಕವಿತೆಗಳು
ನನ್ನೊಂದಿಗೆ ಮುನಿಸು -ಮುಷ್ಕರಗಳ
ತಗಾದೆ ತೋರಿ, ಬೆವೆತು ನೀರಾಡಿ
ಮಾಸು ಮಾಸಾಗುತ್ತಿವೆ
ಕವಿತೆಗಳಲ್ಲಿ ಗುಳ್ಳೆಗಳ್ಳೆದ್ದು
ಚರ್ಮ ಸುಲಿದೇಳುತ್ತಿದ್ದರು
ಅಕ್ಷರಗಳು ಪದಗಳಾಗುತ್ತಿಲ್ಲ
ಪದಗಳು ಸಾಲುಗಳಾಗಿ ತೋರುತ್ತಿಲ್ಲ
ಕಲ್ಪನೆಗಳು ಕೂಸಾಗುತ್ತಿಲ್ಲ
ಗತಕಾಲ ಅರಸುತ್ತಿರುವ ಭಾಸ
ಬಾ ಎಂದರೂ ಬರಲಾರದೆ
ಸೆಡ್ಡು ಹೊಡೆದು ಹೆಪ್ಪುಗಟ್ಟಿ ನಿಂತು
ಸುಟ್ಟು ಬೇಯುತ್ತಿರುವ ಭಾವನೆಗಳೊಂದಿಗೆ 
ಕರಕಲಾದರೂ,  ರಾಜಿ ಸಂಧಾನಗಳ 
ತಗಾದೆಗಳು  ಏರ್ಪಡದಿದ್ದರು 
ಶರಣಾಗತಿಯ ಶಯನ ಬಯಸಿ 
ಖಿನ್ನತೆಯ ಲೋಕದಲ್ಲಿ ನಿಂತಾಗ ನಾ 
ಹರಿಯುತ್ತವೆ ಹನಿ ಹನಿಯಾಗಿ 
ಬಿಳಿಯ ಹಾಳೆಯ ಮೇಲೆ. 



ಬುಧವಾರ, ಜನವರಿ 13, 2021

ಸೂರ್ಯ

ಸೌರಮಂಡಲ ಶೋಭಿತ ನಕ್ಷತ್ರ ನಮ್ಮ ವೈವಸ್ವತ. ತಾನು ಉರಿದು ಜಗಕ್ಕೆಲ್ಲ ಬೆಳಕು ಕೊಡುವುದು ಅರ್ಕನ ಸ್ವಭಾವತಃ ಕರ್ತವ್ಯ ಒಪ್ಪುವ, ಆದರೆ ಆಯಾಸಗೊಂಡಾಗ, ಭೂಮಿ ಆತಂಕದ  ಭೂಕಂಪ, ಜ್ವಾಲಾಮುಖಿಯ  ಸೃಷ್ಟಿಯಲ್ಲಿ ಕರಗುತ್ತಿದೆ ಎಂಬುದನ್ನು ಅರಿತು ಬೆಳಗಿದರೆ ಸೌರಮಂಡಲದ ಒಡೆಯ ಮತ್ತಷ್ಟು ಶೋಭಿತನಾಗುತ್ತಾನೆ. 


ಮಂಗಳವಾರ, ಜನವರಿ 12, 2021

ಕೊಡಗಿನ ಗವಿಸಿದ್ಧೇಶ್ವರ ಬೆಟ್ಟ

ಭಾರತದ ಸ್ಕಾಟ್ಲ್ಯಾಂಡ್ ಎಂದು ಕರೆಸಿಕೊಳ್ಳುವ ಕರ್ನಾಟಕದ ಒಂದು ಪುಟ್ಟ ಜಿಲ್ಲೆ ಕೊಡಗು. ಕೊಡಗಿನ ಸೋಮವಾರಪೇಟೆ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮ ಆಗಳಿ. ಈ ಗ್ರಾಮವು ನಿಸರ್ಗ ರಮಣೀಯತೆಯಿಂದ ಕಂಗೊಳಿಸುತ್ತಿದೆ .ಈ ನಿಸರ್ಗ ಸೌಂದರ್ಯದ ಒಡಲಲ್ಲಿರುವುದೇ ಗವಿಸಿದ್ಧೇಶ್ವರ ಬೆಟ್ಟ. ಈ ಬೆಟ್ಟಕ್ಕೆ ಕಟ್ಟೆಪುರ ಮೀಸಲು ಅರಣ್ಯದ ನಡುವೆ ಹಾದು ಹೋಗಬೇಕು.

ಈ ಅರಣ್ಯವು ತುಂಬಾ ದಟ್ಟತೆಯನ್ನು,ಇಂದು ಉಳಿಸಿ ಕೊಂಡಿಲ್ಲವಾದರೂ ರಸ್ತೆಯಲ್ಲಿ ಸಾಗುವಾಗ ತಂಪಾದ ವಾತಾವರಣ ಮನಕ್ಕೆ ಹಿತನೀಡುತ್ತದೆ.   ಗವಿಸಿದ್ಧೇಶ್ವರ ಬೆಟ್ಟಕ್ಕೆ ಸಾಗುವ ಹಾದಿಯಲ್ಲಿ ಕಾಡುಬಸವ ಹೆಸರಿನಲ್ಲಿ ಕರಿಸಿಕೊಳ್ಳುವ ಚಿಕ್ಕದಾದ ದೇವರಗುಡಿ ಒಂದು ಕಾಣಸಿಗುತ್ತದೆ. ಈ ಗುಡಿಯು ತನ್ನದೆಯಾದ ವಿಶಿಷ್ಟ್ಯವನ್ನು ಹೊಂದಿದ್ದು,

ಇಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಪ್ರಕೃತಿಯ ಮಧ್ಯದಲ್ಲಿ ಮಲಗಿ ವಿಶ್ರಮಿಸಿರುವಂತೆ ಭಾಸವಾಗುವ ಮನೋಜ್ಞವಾದ ಕೆರೆಯೊಂದು ಕಾಣಸಿಗುತ್ತದೆ.

ದಂಡಿನ ಬಾವಿ ದಳವಾಯಿ ಕೆರೆ. ಹಿಂದೆ ಕೊಡಗಿನ ರಾಜನಾಗಿದ್ದ ವೀರರಾಜ ಮತ್ತು ಅವನ ಸೇನಾಧಿಕಾರಿಗಳು (ರಾಜನ ದಂಡು -ಸೇನೆ) ಸಿದ್ಧೇಶ್ವರ ದೇವರ ಆಣತಿಯಂತೆ ಒಂದು ರಾತ್ರಿಯಲ್ಲಿ ಕೆರೆಯನ್ನು ನಿರ್ಮಾಣ ಮಾಡಿದ್ದರಿಂದ, ಈ ಕೆರೆಗೆ ದಂಡಿನ ಬಾವಿ ದಳವಾಯಿ ಕೆರೆ ಎಂದು ಹೆಸರಾಗಿದೆ ಎಂದು ಇಲ್ಲಿನ ಹಿರಿಯ ಗ್ರಾಮಸ್ಥರು ಹೇಳುತ್ತಾರೆ. ಈ ಕೆರೆಯ ಸೌಂದರ್ಯವನ್ನು ಮನ ತುಂಬಿಕೊಂಡು ಮುಂದೆ ಸಾಗಿದರೆ, ರಸ್ತೆಯ ಬಲಭಾಗಕ್ಕೆ ಕಾಣುವ ಕವಲು ದಾರಿಯಲ್ಲಿ ಸ್ವಲ್ಪ ದೂರ ಪ್ರಯಾಣಿಸಿದರೆ, ನಮ್ಮನ್ನು ಎದುರ್ಗೊಳ್ಳುವುದೇ ಮನೋಹರವಾದ ಬಂಡೆಗಳಿಂದ ಕೂಡಿದ ಗವಿಸಿದ್ಧೇಶ್ವರ ಬೆಟ್ಟ .

ಅಲ್ಲಿನ ಸುತ್ತಲಿನ ಪ್ರದೇಶವೂ ದೇವರ ಕಾಡು ಎಂದು ಕರೆಸಿಕೊಳ್ಳುತ್ತದೆ. ಹೆಬ್ಬಂಡೆಗಳ ನಡುವಿರುವ ಈ ಬೆಟ್ಟವನ್ನು, ಅಲ್ಲಿಯ ಹಕ್ಕಿ -ಪಕ್ಷಿಗಳ ಕಲರವ, ಚಿಲಿಪಿಲಿ ನಾದವನ್ನು ಆಲಿಸುತ್ತಾ, ಪ್ರಕೃತಿ ಸೌಂದರ್ಯ ವನ್ನು ಆರಾಧಿಸುತ್ತಾ, ಬೆಟ್ಟವನ್ನು ಕಡಿದು ನಿರ್ಮಿಸಿರುವ ಮೆಟ್ಟಿಲುಗಳನ್ನು ಏರುತ್ತಾ ಹೋದರೆ ಕಾಣಸಿಗುವುದೇ ಸಿದ್ದೇಶ್ವರ ಸ್ವಾಮಿ ದೇವಾಲಯ. ದೇವಸ್ಥಾನದ ಗೋಡೆಗಳು ಪೂರ್ಣಪ್ರಮಾಣದಲ್ಲಿ ನೈಸರ್ಗಿಕವಾಗಿ ರಚನೆಯಾಗಿರುವ ಬಂಡೆಗಳಿಂದ ನಿರ್ಮಿಸಲ್ಪಟ್ಟಿವೆ.

ದೇವಾಲಯದ ಒಳಗೆ ಪ್ರವೇಶಿಸಿದಾಗ ಗವಿಸಿದ್ಧೇಶ್ವರ ಸ್ವಾಮಿ ಮಲಗಿರುವ ಭಂಗಿಯಲ್ಲಿ ಕಾಣಸಿಗುತ್ತದೆ. ಇಲ್ಲಿ ನಾಗದೇವತೆಯು ಹುತ್ತದ ರೂಪದಲ್ಲಿ ನೆಲೆಸಿದ್ದಾಳೆ.



      ದೇವಾಲಯದ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿದ್ದು,ಜನಗಳ ಸದ್ದು-ಗದ್ದಲವಿಲ್ಲದೆ ನಿಶಬ್ದವಾಗಿದ್ದು,  ಪ್ರಕೃತಿಯ ಸೌಂದರ್ಯವು ಮನಸ್ಸಿಗೆ ಮುದನೀಡುತ್ತದೆ. ದೇವಾಲಯದ ಹಿಂಬದಿಯಲ್ಲಿ ನಿಂತು ನೋಡಿದರೆ ಪ್ರಕೃತಿ ದೇವತೆಯೇ ಎದ್ದು ಬಂದಂತೆ ಭಾಸವಾಗುವ ಆ ಕ್ಷಣ ಮೈನವಿರೇಳಿಸುತ್ತದೆ. 

       ಇಲ್ಲಿ ಕಂಡುಬರುವ ಪುರಾತನ ಹೆಬ್ಬಂಡೆಗಳು ಇಲ್ಲಿಯ ಇನ್ನೊಂದು ವಿಶೇಷತೆಗಳಾಗಿವೆ. ಗ್ರಾಮಸ್ಥರ ಅಭಿಪ್ರಾಯದಲ್ಲಿ ಈ ದೇವಸ್ಥಾನದ ಐತಿಹ್ಯವನ್ನು ಹೇಳುವುದಾದರೆ  ಸುಮಾರು 500 ರಿಂದ 600 ವರ್ಷಗಳ ಹಿಂದೆ ಐದು ಜನ ಶರಣರು ಭಿಕ್ಷಾಟನೆ ಮಾಡಿಕೊಂಡು ಈ ಗ್ರಾಮದಲ್ಲಿ ನೆಲೆಸಿದ್ದು, ಈ ಬೆಟ್ಟವು ಹಿಂದೆ ದಟ್ಟಾರಣ್ಯವಾಗಿದ್ದು, ಧ್ಯಾನಕ್ಕೆ ಪ್ರಶಾಂತವಾಗಿದ್ದರಿಂದ ಶರಣರು ಕಾಲಕ್ರಮೇಣ  ಗ್ರಾಮಗಳನ್ನು ತೊರೆದು ಈ ಪ್ರದೇಶಕ್ಕೆ ಬಂದು ಗುಹೆಯಲ್ಲಿ   ನೆಲೆ ಕಂಡುಕೊಂಡರು. 

  ಶರಣರು ಲೋಕ ಕಲ್ಯಾಣಾರ್ಥವಾಗಿ ಈ ಪ್ರದೇಶದಲ್ಲಿ ಶಿವನು ನೆಲೆನಿಲ್ಲಬೇಕಾಗಿ ಶಿವನನ್ನು ಕುರಿತು ತಪಸ್ಸು ಮಾಡಿದಾಗ,  ಅವರ ತಪಸ್ಸಿಗೆ ಮೆಚ್ಚಿ ಸಿದ್ದೇಶ್ವರನ ರೂಪದಲ್ಲಿ ಗವಿ (ಗುಹೆ )ಯಲ್ಲಿ ಐಕ್ಯವಾಗುತ್ತಾನೆ. ಶರಣರು ಸಹ ಸಿದ್ದೇಶ್ವರನ ಸನಿಹದಲ್ಲಿ ಕಲ್ಲುಗಳ ರೂಪದಲ್ಲಿ ಐಕ್ಯವಾಗಿರುವುದನ್ನು ಕಾಣಬಹುದು. ಅಂದಿನಿಂದ  ಇದು ಗವಿಸಿದ್ಧೇಶ್ವರ ಬೆಟ್ಟವೆಂದು ಕರೆಯಲ್ಪಡುತ್ತದೆ. 

ಸಿದ್ಧೇಶ್ವರ ಸ್ವಾಮಿಯ ಮೂರ್ತಿ ಮತ್ತು ಬೆಟ್ಟ ಪ್ರತಿವರ್ಷ ರಾಗಿಕಾಳಿನಷ್ಟು ಬೆಳೆಯಲ್ಪಡುತ್ತಿದೆ ಎಂಬುದು ಗ್ರಾಮಸ್ಥರ ಹೇಳಿಕೆ ಮತ್ತು ನಂಬಿಕೆ. 

       ಪ್ರತಿವರ್ಷ ಶಿವರಾತ್ರಿಯ ಮಾರನೇ ದಿನ  ಎಲ್ಲಾ ಜನಾಂಗದವರು ಸೇರಿ ಜಾತ್ರೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.

           ಜನರು,  ಪಟ್ಟಣಗಳ ಕಿರಿಕಿರಿ ಗದ್ದಲ ಶಬ್ದಗಳಿಂದ ಯಾವಾಗಲೂ ದೂರವಿರುವ ಈ ಬೆಟ್ಟ ನಿಸರ್ಗ ಸೌಂದರ್ಯ ಮತ್ತು ನಿಶ್ಯಬ್ದತೆಯಿಂದ  ಮನಸ್ಸಿನ ಎಲ್ಲಾ ಜಂಜಾಟಗಳನ್ನು ಕ್ಷಣಕಾಲ ದೂರವಿಡಲು ಮತ್ತು ಪೋಟೋಗ್ರಫಿಯನ್ನು  ಅರಸಿ ಬರುವವರಿಗೆ ಒಂದು ಆಹ್ವಾನದಂತೆ ವ್ಯಕ್ತವಾಗುತ್ತದೆ.ಅಪರೂಪಕ್ಕೊಮ್ಮೆ ಎಂಬಂತೆ ಗಜರಾಜರ ದಂಡು ದಾಳಿಮಾಡುತ್ತದೆ ಎಂಬುದನ್ನು ಬಿಟ್ಟರೆ ಇಲ್ಲಿಗೆ ತೆರಳಲು ಬೇರೆ ಇನ್ನಾವುದೇ ಭಯವಿಲ್ಲ.
  
        


ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...