ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಗುರುವಾರ, ಜೂನ್ 3, 2021

ಎಲ್ಲರು ಅವನನ್ನು ಹುಚ್ಚನೆಂದೇ ಕರೆಯುತ್ತಿದ್ದರು, ನೋಡಲು ಸರಿಸುಮಾರು ಹಾಗೆಯೇ. ಎಣ್ಣೆ ಕಂಡು ವರ್ಷಗಳೇ ಕಳೆದಿದ್ದ ಕೂದಲು, ಎಂದೂ ತೆಗೆಯದ ಆ ಕಪ್ಪು ಬಿಳಿ ಗಡ್ಡ, ಚರಂಡಿಯ ಕೊಳಚೆಯೂ ನಾಚುವಂತ ಕೊಳಕಲು ಬಟ್ಟೆ, ಸ್ನಾನ, ಏನೆಂಬುದನ್ನೇ ಅರಿಯದ ದೇಹ,ಎಣ್ಣೆಯ ವಾಸನೆಯನ್ನು ಕಂಡಿರದ ಕೂದಲು, ಹೆಗಲ ಮೇಲೆ ಸದಾ ಸಂಗಾತಿಯಾಗಿದ್ದ ಒಂದು ಚೀಲ, ಹೀಗೆ ಆ ವ್ಯಕ್ತಿ ಕಾಣಸಿಗುತ್ತಿದ್ದ ದೈನಂದಿನ ಚಿತ್ರಣ. 

 ಸಿಕ್ಕ ಸಿಕ್ಕಲ್ಲಿ  ವಸ್ತುಗಳನ್ನು ಚೀಲಗಳಲ್ಲಿ ತುಂಬುವುದು, ಕಂಡ ಕಂಡ ಮನೆಯ ಹೊರಗೆ ಸಿಕ್ಕಿದ್ದನ್ನೆಲ್ಲಾ ಕದಿಯುವುದು, ಕೆಟ್ಟ ಕೆಟ್ಟ ಮಾತುಗಳಲ್ಲಿ ಜನರನ್ನು ಬೈಯುತ್ತಾ ನಡೆದಾಡುತ್ತಿದ್ದ ಆ ವ್ಯಕ್ತಿಯನ್ನು  ನೋಡಿ ಜನ, ವ್ಯಕ್ತಿಯನ್ನು ಹುಚ್ಚನೆಂದು ಕರೆಯುತ್ತಿದ್ದರು. ಹಾಗೆಯೇ ಕಳ್ಳತನ ಮಾಡುತ್ತಿದ್ದ ಕಾರಣಕ್ಕಾಗಿ,  ಆಗಾಗ್ಗೆ ಜನಗಳಿಂದ ಹೊಡೆತದ ರುಚಿಯನ್ನು ಕಂಡಿದ್ದರೂ ಕಳ್ಳತನ ಬಿಡುತ್ತಿರಲಿಲ್ಲ. ಬಹುಶಃ ಹಸಿವಿನ ದಾಹ ಮತ್ತು ಕುಡಿತದ ಚಟವನ್ನು ನೀಗಿಸಲು. 

ನಾನು ಆ ವ್ಯಕ್ತಿಯನ್ನು ಗಮನಿಸಿದ ಹಾಗೆ ಸಂಬಂಧಿಗಳಿದ್ದು, ಮದುವೆಯ ಗೋಜಿರಲಿಲ್ಲವಾದ್ದರಿಂದ ಏಕಾಂಗಿಯಾಗಿದ್ದರು. ಸಣ್ಣ ಪಟ್ಟಣವೆಂದು ಗುರುತಿಸಿಕೊಳ್ಳುವ , ತಾರಸಿ, ಬಹುಅಂತಸ್ತಿನ ಮನೆಗಳ ಮಧ್ಯೆ ಇದ್ದ,  ತನ್ನ ಪಾಳುಮನೆಯಲ್ಲಿ ವಾಸ. ಆ ಮನೆಯೊಳಗೋ ಕದ್ದು ತಂದಿದ್ದ ಏನೇನೋ ವಸ್ತುಗಳು, ಬಟ್ಟೆ, ಪಾತ್ರೆ, ದೊಡ್ಡ ಕಲ್ಲುಗಳು, ಮೂಟೆಗಳು ಕಾಫಿ ಬೀಜ, ಮೆಣಸು, ಶುಂಠಿ, ಹೀಗೆ ಏನೇನೋ.  ಈ ಕದ್ದು ತಂದ ವಸ್ತುಗಳನ್ನು ಅಂಗಡಿಯಲ್ಲಿ ಮಾರುವುದು, ಅವರು ಕೊಟ್ಟ ಅಲ್ಪ -ಸ್ವಲ್ಪ ಹಣದಲ್ಲಿ ಕುಡಿದು, ಆ ಪಾಳು ಮನೆಯೊಳಗೆ ಶವಾಸನ ಹಾಕಿ ಮಲಗುವುದು. 

ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಎದ್ದು ಅವರಿವರ ಮನೆಯ ಹಿತ್ತಲು ಹುಡುಕುವುದು, ಆ ವ್ಯಕ್ತಿಯ ದಿನಚರಿಯಾಗಿತ್ತು.ಈ ದಿನಚರಿ ಕೊರೋನಾ ಲಾಕ್ಡೌನ್ ದಿನಗಳಲ್ಲೂ ಮುಂದುವರೆದಿತ್ತು. ಆದರೆ ಎಂದೂ ಆ ವ್ಯಕ್ತಿ ಮಾಸ್ಕ್ ಮೊರೆ ಹೋದವರಲ್ಲ. ಹಾಗೆ ಕೊರೋನಾ ಸಹ ಅವರ ಬಳಿ ಬಂದಿದ್ದಿಲ್ಲ. ಆದರೆ ಮೂರು ದಿನಗಳಿಂದ ಸದಾ ಬೀದಿಯಲ್ಲಿ ಸುತ್ತಾಡುತ್ತಿದ್ದ  ಆ ವ್ಯಕ್ತಿ ಕಾಣುತ್ತಿರಲಿಲ್ಲ. ಅಂತಹ ವ್ಯಕ್ತಿಯ ಬಗ್ಗೆ ಯಾರು ತಾನೇ ತಲೆಕೆಡಿಸಿ ಕೊಂಡಾರು? 

ಯಾವಾಗ ಆ ಪಾಳುಮನೆಯಿಂದ ಕೆಟ್ಟ ವಾಸನೆ ಅಕ್ಕ ಪಕ್ಕದ ಮನೆಗೆ ಬಡಿಯಿತೋ,ಅನುಮಾನಾಸ್ಪದದಿಂದ  ಒಳ ಹೊಕ್ಕು ನೋಡಿದಾಗ ಎಲ್ಲರ ಅನುಮಾನ ನಿಜವಾಗಿತ್ತು, ಹುಚ್ಚನೆಂದು ಕರೆಸಿಕೊಳ್ಳುತ್ತಿದ್ದ ವ್ಯಕ್ತಿ  ಸತ್ತು ದಿನಗಳು ಕಳೆದಿದ್ದವು.  

ಸಂಬಂಧಿಕರು, ಬೆಲೆಬಾಳುವ ಆಸ್ತಿ, ಹಲವಾರು ಲಕ್ಷಗಳನ್ನು ಇಟ್ಟಿದ್ದ( ಜನಗಳ ಮಾತು ),  ಇಷ್ಟೆಲ್ಲಾ ಇದ್ದಾರು, ಆ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆದದ್ದು, ಗ್ರಾಮ ಪಂಚಾಯಿತಿಯಿಂದ ಒಂದು ಗೂಡ್ಸ್ ಆಟೋ ನಲ್ಲಿ ತೆಗೆದುಕೊಂಡು ಹೋಗಿ ಹೂತರು. 

ಆ ವ್ಯಕ್ತಿಯ ದುರ್ದೈವ ಅಷ್ಟೆಲ್ಲಾ ಬೆಲೆಬಾಳುವ ಆಸ್ತಿ ಇದ್ದರೂ ವಿದ್ಯೆ, ಸಾಮಾನ್ಯ ತಿಳುವಳಿಕೆ ಇಲ್ಲದೆ, ಒಂದು ದಿನವೂ ಸಾಮಾನ್ಯ ಜನಗಳಂತೆ ಬಾಳದೆ ಅನಾಥ ಶವವಾಗಿ ಜೀವಬಿಟ್ಟಿದ್ದು. 

 ಹುಚ್ಚನಿಗೆ ಕೊರೋನಾ, ಕುಡಿದ ಮತ್ತಿನಲ್ಲಿ ಬಿದ್ದು ತಲೆಗೆ ಪೆಟ್ಟು ಬಿದ್ದಿದೆ,  ಹೀಗೆಲ್ಲ  ಸತ್ತ ಕೆಲವು ದಿನಗಳ ನಂತರ ಜನಗಳು ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದರು. ಆದರೆ ಆ ವ್ಯಕ್ತಿ ಜನಗಳು ಹೇಳುವಂತೆ ಹುಚ್ಚನಾಗಿರಲಿಲ್ಲ. ಅವನ ವೇಷ ಭೂಷಣಗಳಷ್ಟೇ ಹುಚ್ಚಾಗಿದ್ದವು.  



ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...