ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಶನಿವಾರ, ಫೆಬ್ರವರಿ 27, 2021

ಮೌನ ಮುರಿವೆಯಾ... [ ನನ್ನದೆ ರಚನೆಯ ಭಾವಗೀತೆ ]

ಮೌನ ಮುರಿವೆಯಾ... ಮುಕುಂದಾ
ನನ್ನ -ನಿನ್ನ ನಡುವಿನ
ತನು ಬೆರೆವೆಯಾ...ಮುಕುಂದಾ [2]

ನಿನ್ನಾ ಒಂದು ಕಿರುನಗೆ
ಸಾಕೆನಗೆ ಬಾಳಲಿ
ಅದು ಮಾಸದೆ ಹೊಸೆದಾಡುತಿರಲಿ
ನನ್ನ -ನಿನ್ನ ಭಾವ ರಾಗದಲಿ [ಮೌನ ಮುರಿವೆಯಾ ]

ನಿನ್ನ ಮಾತು ಕೇಳುತಿರೆ...
ಮನ ಬೀಗಿ ಬಾಗುವುದು
ಧನ್ಯವಾಗುತಾ, ಧನ್ಯವಾಗುತಾ[ಮೌನ ಮುರಿವೆಯಾ ]

ನಿನ್ನ ಒಂದು ಸ್ಪರುಷದಲಿ
ಸಿಗುತಿರೆ.. ನಿತ್ಯದಲಿ
ಅದು ನಾ ತಂದ
ಪುಣ್ಯಫಲದ ಹರುಷದಿ[ಮೌನ ಮುರಿವೆಯಾ



ಗುರುವಾರ, ಫೆಬ್ರವರಿ 25, 2021

'ದಿ ಗ್ರೇಟ್ ಇಂಡಿಯನ್ ಕಿಚನ್' ಮಲಯಾಳಂ ಮೂವಿ



ಮಾತನಾಡಲು ಭಾಷೆ ಬಾರದಿದ್ದರೂ, ಅಕ್ಷರ ಜ್ಞಾನ ಇದೆಯಲ್ಲ ಎಂಬ ಹೆಮ್ಮೆಯಿಂದ ನೋಡಿದ್ದೆ. ಹಿಂದೆ ನೋಡಿದ ಮಲಯಾಳಂ ಚಲನಚಿತ್ರಗಳಿಗಿಂತ ತುಸು ಹೆಚ್ಚಾಗಿ ಕಾಡಿದ ಚಲನಚಿತ್ರ ಕಾರಣ ಆ ಚಿತ್ರದಲ್ಲಿ ಕಂಪುಗಟ್ಟಿರುವ ನೈಜತನ. ಭಾರತೀಯ ಅಡುಗೆ ಮನೆಯ ಸ್ವಾರಸ್ಯಕತೆಯನ್ನು ತೀರಾ ಸರಳವಾಗಿ ಸೆರೆಹಿಡಿದಿದ್ದಾರೆ. ಬಹುಪಾಲು ಮಹಿಳೆಯರು ಅರಿವಿಲ್ಲದೆ ಅನುಭವಿಸುತ್ತಿರುವ ಕಥಾಹಂದರ. ನಾಯಕಿಯ ಪಾತ್ರಕ್ಕೆ ಜೀವ ತುಂಬಿರುವ ನಿಮಿಷ ಸಜಯನ್ ರವರ ನಟನೆ ಪ್ರಶಂಸನೀಯ. 



ಬುಧವಾರ, ಫೆಬ್ರವರಿ 24, 2021


ರಣ ಬಿಸಿಲಿನ ಬೇಸಿಗೆಯಲ್ಲಿ ಮರಿಗುಬ್ಬಿ ತನ್ನ ತಾಯಿಯೊಂದಿಗೆ ಮರಳುಗಾಡಿನಲ್ಲಿ ನಡೆದು ಹೋಗುತಿತ್ತು. ಮರಿಗುಬ್ಬಿ ತಾಯಿ ಪ್ರೀತಿ ಅನುಮಾನಿಸಿ ಪರೀಕ್ಷಿಸಲೆಂದು ಹೇಳಿತು, ಅಮ್ಮ... ನಾನು ಹಿಂದಿರುಗಿ ಬರುವವರೆಗೂ ನೀನೊಬ್ಬಳೇ ನಿಂತ ಈ ಜಾಗದಲ್ಲೇ ನನಗಾಗಿ ಕಾಯುತ್ತಿರಬೇಕೆಂದು.  ಹೆತ್ತವ್ವನಿಗೆ ಮಗುವಿನ ಮಾತಿನ ಮರ್ಮ ಅರ್ಥವಾಗದಿರುವುದೇ..? ತಾಯಿ ಗುಬ್ಬಿ ಒಪ್ಪಿಗೆ ನೀಡಿದ ಮೇಲೆ ಮರಿಗುಬ್ಬಿ ಅಲ್ಲಿಂದ ಹೊರಟು ಹೋಯಿತು. ಹಲವು ತಾಸು... ದಿನ, ರಾತ್ರಿ, ಹೀಗೆ ವಾರಗಳೇ ಕಳೆದವು.  ಒಂದು ದಿನ ಮರಿಗುಬ್ಬಿಗೆ ತನ್ನ ತಾಯಿಯ ನೆನಪಾಗಿ ಮನೆಯನ್ನು ಸೇರಿತು. ಆದರೆ ಮನೆಯಲ್ಲಿ  ತಾಯಿ ಇಲ್ಲದ್ದು ಕಂಡು ಆಶ್ಚರ್ಯ. ಅಕ್ಕ ಪಕ್ಕದಲ್ಲೆಲ್ಲಾ ವಿಚಾರಿಸಿ ಸೋತ ಮರಿಗುಬ್ಬಿಗೆ ನೆನಪಾಯಿತು, ತಾನು ತಾಯಿಗೆ ಹೇಳಿದ ಮಾತು. ತಕ್ಷಣ ಪುರ್ರೆಂದು ಮರಳುಗಾಡಿನ ಕಡೆ ಹಾರಿತು. ಮರಳುಗಾಡಿನಲ್ಲಿ ಆ ದಿನ  ಹೇಳಿದ ಜಾಗದಲ್ಲೇ ಅಮ್ಮನ್ನನ್ನು ಕಂಡು ಮರಿಗುಬ್ಬಿಯ ಆನಂದ ಹೇಳತೀರದಾಯಿತು. ಅಮ್ಮನ ಹತ್ತಿರ  ಹೋಗಿ ನೋಡಿತು, ತಾನು ಹೇಳಿದ ಜಾಗದಿಂದ ಸ್ವಲ್ಪವೂ ಅಲುಗದೆ ನಿಂತು, ಕೃಶವಾಗಿ ಮರಳಲ್ಲಿ ಹೂತು ಹೋಗಿ ಮುಖ ಮಾತ್ರ ಕಾಣುತಿತ್ತು.ಮರಿಗುಬ್ಬಿ ಅಮ್ಮಾ... ಎಂದೊಡನೆ ತನ್ನ ಮರಿಗಾಗಿ ಜೀವದ ತುದಿ ಎಳೆ ಹಿಡಿದು ಕಾಯುತ್ತಿದ್ದ ತಾಯಿಗುಬ್ಬಿ ಕೊನೆಯದಾಗಿ ಉಸುರಿತು, ಕಡು ಬಿಸಿಲು, ಮಳೆಗಳ ಕಾಯುವಿಕೆಯಲ್ಲಿ ನನ್ನಲ್ಲಿ ನೀನು ಗೆದ್ದೆ, ಆದರೆ ಮನಸ್ಸೊಳಗಿನ ಕಾಯುವಿಕೆಯಲ್ಲಿ  ಕ್ಷಣ ಕ್ಷಣವೂ ಮರಳೊಳಗೆ ನೀ ಹೂತು ಹೋದೆ. 



ಕ್ಷಮಿಸು

ಕ್ಷಮಿಸು ಎಂಬುದು ಆಗಾಗ್ಗೆ
ಮರುಕಳಿಸುವ ಮಾರ್ದನಿ
ನಮ್ಮ ಮನುಕುಲದೊಳಗೆ
ಹಿಂಜರಿಕೆ, ಮುಗ್ಗರಿಕೆಗಳಿಲ್ಲ
ಕ್ಷಮಿಸುವಿಕೆಯ ಅರಿವು
ಪರಿವಿನ ಪಟ್ಟಿಯಲ್ಲಿ
ಮುಲಾಜು ರಿಯಾಯಿತಿಗಳಿಲ್ಲ
ಲಯ, ತಾಳಗಳಿಲ್ಲ
ಆದರೆ ವಜ್ರದ ಹೊಳಪಿದೆ
ಪಾದರಸದ ಹರಿವಿದೆ
ಒಮೊಮ್ಮೆ ಮುಗ್ಗರಿಸಿ ಪಲ್ಟಿ
ಹೊಡೆದರೂ ಇನ್ನೊಮ್ಮೆ
ಸೆಟೆದು ನಿಲ್ಲುತ್ತದೆ
ಸಾವೇ ಕಣ್ಣೆದುರಿದ್ದರೂ
ಸರಳ ಸುಲಲಿತವಾಗಿ
ಮಾಡುವುದ ಮಾಡಿ
ನನ್ನ ನೀ ಕ್ಷಮಿಸು. 
ನಾ ಕ್ಷಮಿಸುವಿಕೆಯನ್ನೇ 
ಪ್ರಶ್ನಿಸುವೆ ತರವೇ ಇದುವೆ ನಿನಗೆ...? 
ಕ್ಷಮಿಸು..... 


ಅಪ್ಪ

ಅಂದು ಅಪ್ಪ ತನ್ನ ನೋವಿನ ಬೀಜವನ್ನು
ನನ್ನೊಳಗಿನ ನಾನಾಗಿ ಬಿತ್ತಿದ
ಅದು ನನ್ನೊಳಗಿನ ನಾವಾಯಿತು
ಹಗಲು ರಾತ್ರಿ ತನ್ನ ಬೆವರು
ಘಾಟಿನ ಸಿಡಿ ಮಿಡಿಯನ್ನು ಮೆತ್ತಿದ
ಮೊಳೆತ ಗಿಡಕೆ ತನ್ನಂತೆ ಪ್ರಾಮಾಣಿಕತೆಯ 
ತಾಜಾತನದ ನೀರುಣಿಸಿದ 
ಅಮ್ಮ ಮುಲಾಮು ಇಲ್ಲದ ತನ್ನ 
ನೋವುಗಳಿಂದ ಪೋಷಣೆ ಮಾಡಿ 
ನಗೆಯೆಂಬ ಹರಿದ ಚಾಪೆ ಹೊದಿಸಿದಳು 
ಅವರಿಬ್ಬರ ಕತ್ತಲು ಬೆಳಕಿನ ಈಜಾಟದಲ್ಲಿ 
ಸಸಿ ಬಾಡದೆ ಚಿಗುರೊಡೆಯಿತು 
ಮಳೆ ಬಿಸಿಲಿನ ಒಲವ ತಾಪಕೆ 
ಇಬ್ಬರೂ ತಮ್ಮ ದೇಹದ ಚರ್ಮ
ಬಿಸಿಲುಡಿಗೆ ಮಾಡಿ 
ಗಿಡಕೆ ಹೊರಿಸಿದರು 
ಗಿಡ ಕವಲೊಡೆಯುವುದರಲ್ಲಿ 
ಎಡವಿದರು ಮೂಲತ್ವದಲ್ಲಿ 
ಅರಳಿ ಮರವಾಯಿತು 
ಆದರೀಗ ಬುಡಕೆ ತಗುಲಿದೆ 
ಮಾರ್ಮಿಕ ಹುಳುವಿನ ಕೊರೆತ 
ಉಳಿವು ಅಳಿವುಗಳಲ್ಲಿ 
ಪ್ರಶ್ನೆಯಾಗಿ ಕಂಡಿಹುದು 
ನನ್ನೊಳಗಿನ ನಾನು -ನಾವು. 






ಚೀಲ

ಬಲೆ ಬಲೆಯ ಕತ್ತಲೆಯ ಚೀಲ 
ನಾ ಅದರೊಳಗೆ  ಬೆಳಕನ್ನು 
ಹಿಡಿದು ಆದಷ್ಟು ತುಂಬಿದ್ದೆ 
ಬೆಳಕು ಮಿನುಗುವುದು ಬಲೆಯಲ್ಲಿ 
ಆಗಾಗ ಕಾಣುತಿತ್ತು
ಮೂಲೆಯಲ್ಲೆಲ್ಲೋ ದುಗುಡ 
ಬೆಳಕು ಕತ್ತಲ್ಲನ್ನು ನುಂಗುವುದೋ 
ಕತ್ತಲೆ ಬೆಳಕಿಗೆ ಶರಣಾಗುವುದೋ
ಚೀಲದ ದಾರ ಅಲುಗಾಡತೊಡಗಿತು 
ಆದಷ್ಟೂ ಬಿಗಿದು ಸರಿಮಾಡಿ 
ಕುಳಿತೆ ವಿರಮಿಸಲು 
ಕ್ಷಣಮಾತ್ರದಲ್ಲಿ ಹಿಂದೆ 
ಧಗ್ ಎಂಬ ಸದ್ದು 
ನಿಧಾನವಾಗಿ ನೋಡಿದೆ ತಿರುಗಿ 
ಚೀಲ ಛಿದ್ರ ಛಿದ್ರ !
ಬೆಳಕೆಂಬ ಸುಳಿವಿಲ್ಲ 
ಕತ್ತಲು ಸುರಿದು ಹರಿದಾಡುತ್ತಿದೆ 
ಅದ ನೋಡಿ ನನಗೆ ದಿಗಿಲಿನ ಮೂರ್ಛೆ 
ಕತ್ತಲೊಳಗೆ ನನ್ನದೇ ಪ್ರತಿಬಿಂಬ 
ಗಹ ಗಹಿಸಿ ನಗುತ್ತಿದ್ದ ಕಂಡು. 




ಶುಕ್ರವಾರ, ಫೆಬ್ರವರಿ 5, 2021

ಮುಪ್ಪು


ಶತ ಶತಮಾನಗಳಿಂದಲೂ
ಬಾಳಿ ಬಂದಿದ್ದೆ
ತಲೆಮಾರಿಗಿಲ್ಲ ಯಾರೂ ಇಂದು
ಕಾಲೊಂದು ಮುರಿಯಿತೆಂದು
ಹೊಳಪಿನ ಬಣ್ಣ ಮಾಸಿತೆಂದು
ಹಳೆಕೊಠಡಿಯ ವಾಸ್ತವ್ಯಕ್ಕೆ
ತಂದು ಬಿಸುಟಿದರು 
ಗತಕಾಲವೂ ಇಂದಿಲ್ಲಿ ನೆನಪಾಗಿದೆ 
ಎಲ್ಲರ ಸಮ್ಮುಖ ಅಂದು ನಾ 
ಅರೆಬರೆ ತಿಂದು ಆಲಿಸಿದ 
ನ್ಯಾಯದ ತುಣುಕುಗಳು 
ಬಹಿಷ್ಕರಿಸಿದ ವ್ಯಾಜ್ಯಗಳು, 
ದಾರಿ ಅರಸಿ ಸೋಲನ್ನಪ್ಪಿದ 
ಭೂ ಮಾತೆಯರು ನನ್ನಲ್ಲಿ ವಿರಳ 
ತಾರುಣ್ಯದಲ್ಲಿ ಉದಾಸೀನತೆ 
ಕುಡಿಯುವ ನೀರಾಗಿತ್ತು ನನಗೆ 
ಹಾಗೆ ಮುದುಕ -ಮುದುಕಿಯರ 
ಕಣ್ಣೀರೂ  ಸಹ 
ಅದೆಷ್ಟೋ  ಬಡವರು ನನ್ನ ಕಾಲುಗಳಿಗೆ
ಪಾಲಿಸು ಮಾಡಿದ್ದರು 
ಹೆಪ್ಪುಗಟ್ಟಿದ್ದ ರಕ್ತದ ಕಲೆಗಳನ್ನು 
ಕೆರೆದು ತೆಗೆದಿದ್ದರು 
ರಕ್ತ ಬೀಜಾಸುರರು ಮೆಟ್ಟಿಲೇರಿ 
ಅಟ್ಟಹಾಸಗೈದಿದ್ದರು ನನ್ನಲ್ಲಿ 
ಲೆಕ್ಕವಿಲ್ಲದಷ್ಟು ನೋಟಿನ ನೊಣಗಳು
ಅಂಟಿ ಗುಯ್ ಗುಟ್ಟಿದ್ದವು 
ಬ್ಯಾಕ್ಟೀರಿಯಾ, ವೈರಸ್ಸುಗಳು ಕೊರೆದು 
ಕರಕಲು ಮಾಡಿ ಅದೃಶ್ಯವಾಗಿದ್ದರೂ 
ಜಾತಿ, ವಿಜಾತಿಯ ಬೇರುಗಳು 
ಹಬ್ಬಿ ಬಿಟ್ಟಿದ್ದವು 
ಎಲ್ಲವೂ ಜೊಂಪುಗಟ್ಟಿದ್ದವು ಅಂದು ನನ್ನಲ್ಲಿ. 
ಇಂದು ನಾ ಮುರಿದಿರುವೆ 
ಅದೇ ಜನ ನನಗೂ ತೋರಿರುವರು 
ಮುಪ್ಪನು ಮರೆಯುವ  ತಾರುಣ್ಯವ 
ನನ್ನಂತೆ ಶತ ಶತಮಾನ ಅರಸಿ 
ಮರುಗುತ್ತಿರುವ ಈ ಹಾಳು ಉಗ್ರಾಣದಲ್ಲಿ. 

 

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...