ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಶುಕ್ರವಾರ, ಜುಲೈ 31, 2020


            ಮಿನಿ ಕತೆ 

ದಿನ ಬೆಳಗುವ ಸೂರ್ಯ. ಅವನ ಬೆಳಕಲ್ಲೇ ಮಿನುಗುವ ಹುಳು. 

ಕಾಣದೇ ಸೂರ್ಯನ ಸಮಯ ಮುಂದೆ ಚಲಿಸುತ್ತಿರಲ್ಲಿಲ್ಲ.

ಸೂರ್ಯನಿಗೆ ಹುಳುವಿನಲ್ಲಿ ಅವಿಶ್ವಾಸದ ಕದಿರ ಬಿಂದುಗಳು. ಪರೀಕ್ಷಿಸ ಬಯಸಿ, 

ನಸುಕಾದರೂ  ಬೆಳಗಲಿಲ್ಲ ಜಗದೊಡೆಯ.   ಬಂದೇ ಬರುವನೆಂದು ಮಿಣುಕಲು 

ಹುಳು ಕಾಯುತ್ತ ಕಾಯುತ್ತ...  ಕೂತಲ್ಲೇ ಕುಸಿದು ಬಿದ್ದಿತು. ಜನ ಗುಂಪುಗಟ್ಟಿ

ಕೋಲಿನಿಂದ ತಿವಿದು ನೋಡಿದರು. ಸಂಶಯವಿಲ್ಲದೆ ಹುಳು ಸತ್ತಿತ್ತು. 

ಸೂರ್ಯ ನಗುತ್ತಿದ್ದ .  ಆದರೆ ಹುಳು ಸೂರ್ಯನೊಳಗೆ ಬದುಕಿತ್ತು.                                                                                              


                                                                            
        

ಗುರುವಾರ, ಜುಲೈ 30, 2020

ತಲೆಶೂಲೆ


               ತಲೆಶೂಲೆ

ಕಣ್ಣು ರೆಪ್ಪೆ ಮತ್ತು ಹುಬ್ಬಿನ ಮೇಲಿನ ಗುಂಗು
ಸದಾ ತನ್ನಲ್ಲೇ ಸುತ್ತುತ್ತಿರುತ್ತದೆ
ನರನಾಡಿಗಳೊಂದಿಗೆ ಸರಸದ ವಿರಸ
ಎಡವಾದರೆ ಎಡ, ಬಲವಾದರೆ ಬಲ
ಗುಂಗಿನ ಅಮಲಿಗೆ ಕರೆಯೋಲೆಯ
ಅಗತ್ಯ ಅನಿವಾರ್ಯಗಳಿಲ್ಲ
ಆತಿಥ್ಯ ಬಯಸದ ಹೊರದೂಡ ಇಚ್ಛಿಸುವ
ಅಮಲಿನ ತೀವ್ರತೆಗೆ ಮಸ್ತಿಷ್ಕದಲ್ಲಿ
ಮಿತಿಗುಡುವ ಮೃದು ಮನಸ್ಸಿನ ಹುಳುಗಳು
ಕೆಲಸಕಾರ್ಯಗಳು ರಜೆಯ ಬೆನ್ನು ಬಡಿದುಬಿಡುತ್ತವೆ
ವಿಶ್ರಾಂತಿ ಅರಸಿ ಬಗ್ಗಿ ಬಗ್ಗಿ ನೋಡಿದರು
ಅಡ್ಡಗಟ್ಟಿ  ಜೀಗುಡುವ ಜೇನುನೊಣಗಳ ಸದ್ದು
ಗುಳಿಗೆಯ ಮೋಹಕ್ಕೆ ಜೋತುಬಿದ್ದರು
ಸ್ವಲ್ಪ ಮಟ್ಟಿನ ಮೋಹದ ಪೊರೆ ಕಳಚಿಬಿಡುತ್ತದೆ
ಕೃಶ ದೇಹದ ಬಾವು ಬಯಸಿ ಸುತ್ತಾಡಿದರು
ಹಿಂಡಿ ಹಿಪ್ಪೆಯಾಗಿಸಿ ರಸ ಕುಡಿದು
ತೇಗುವವರೆಗು ಗುಂಗಿನ ನೆರಳು ಬೆಳಕಿನ
ಗೋಡೆಯ ಆಟ ನಡೆಯುತ್ತಿರುತ್ತದೆ. 

ಸೋಮವಾರ, ಜುಲೈ 27, 2020

ಹರಿಕಾರ


ಹೇ ದೇವಾ... ಭವ -ಬವಣೆಯ ಹರಿಕಾರ
ಏಕಾಗಿ ಬಿಟ್ಟಿರುವೆ ತನುವ !
ನನ್ನದೆನ್ನುವುದು ಮರೀಚಿಕೆಗೆ ಬಾಯಾರಿರುವಾಗ
ಕೊಟ್ಟು -ಕೇಳುವ ಪರಿಯ ದಿರಿಸೇನು

ಶೈಶವ -ಹರೆಯಗಳ ಅರಿವಿಲ್ಲದ ಕನವರಿಕೆ
ಅರಿತು ಬೆರೆಯುವಾಗ ನೀ ಎಡೆಗೊಡುತ್ತಿಲ್ಲ
ತಪ್ಪು ಒಪ್ಪಿನ ಜರಿಯ ಕಪ್ಪು ಹಾಸಿನ ದಿರಿಸು ತೊಟ್ಟಿರುವ
ಅಳೆದು ತೂಗುವ ಲೆಕ್ಕಾಚಾರದ ತಾರೀಫು

ಒಬ್ಬರಲ್ಲಿ ಕಿತ್ತು ಇನ್ನೊಬ್ಬರಿಗೆ ಬಿತ್ತುವ
ಸಮ ಅಸಮಾನತೆಗಳ ಆತ್ಮವ ನಾ ಒಲ್ಲೆ
ಎಲ್ಲಿಯ ಗುಣ ವ್ಯತ್ಯಾಸಗಳ ದೋಷಕ್ಕೆ
ಅಸಹಾಯಕರ ಕಾಡಿ ದೂಡಿರುವೆ
ಮನಸ್ಸಲ್ಲಿ ಪರಿಪಕ್ವತೆಯ ನಂಟಿನ ಜಾಡಿದ್ದರೆ
ಜಗದಲಿ ಕಾಣುತ ಸಮಾನರಾಗಿ
ಹಂಚೆಲ್ಲ ಸುಖ -ದುಃಖದ ಆಗಮ -ನಿಗಮಗಳ ಫಲವ


ಕೃಶದ ಇಂದು ನಾಳೆಯ ದೇಹದ ಅಸ್ತಿತ್ವಕ್ಕೆ
ಪುಟಿಯುತ್ತಿದೆ ನಾನು -ನನ್ನದೆಂಬ ಅಮಲಿನ ಮಜಲುಗಳು
ಸಿರಿತನವ ಉಟ್ಟು ನೆಮ್ಮದಿಯ ಕಿತ್ತು
ಗಹಗಹಿಸಿ ನಗುತ್ತಿರುವ ನಿನ್ನ ಮರ್ಮಕ್ಕೆ
ಶರಣಯ್ಯ ನಾ ಶರಣು


ನನ್ನೊಳಗಿನ ನಾನು ಬೇರಲ್ಲೇ ಕೊಳೆಯಲಿ
ಕ್ರೂರತೆಯಲ್ಲಿನ ಮೃಗ ತುಳಿಯಲಿ
ಸಮಾನತೆಯ ದಿಕ್ಕು ರಾರಾಜಿಸಲಿ
ನ್ಯಾಯ ಸಂಕುಲ ಅಜರಾಮರವಾಗಲಿ
ಪ್ರೀತಿಯು ಪ್ರೀತಿಯ ಸೇರುತ ಬಾಳಲಿ
ಆಗ ನಾ ಮೆಚ್ಚಿ ನುಡಿಯುವೆ
ನಿನ್ನ ಆಂತರ್ಯ -ಬಾಹ್ಯ ತತ್ವ ಸತ್ವದ ಸಿದ್ದಿ ಶುದ್ಧಿಯ.

ಶುಕ್ರವಾರ, ಜುಲೈ 24, 2020

ಅರೆನಗ್ನ ಕನಸು


       ಅರೆನಗ್ನ ಕನಸು

ನಿನ್ನ ಅರೆ ಬೆಳಕಿನ ಇಬ್ಬನಿಯ ಮನೆಯಲ್ಲಿ
ನಾ ಒದ್ದೆಯಾಗಿ ಒಣಗುತ್ತಿರುವಾಗ
ಕೋಲ್ಮಿಂಚಂತೆ  ನೀ ಹೊಕ್ಕೆ
ಚಳಿಯನ್ನು ತಬ್ಬಲಿಯಾಗಿ  ಹೊದ್ದಿದ್ದ   ನನಗೆ
ಕಣ್ಣುಗಳಿಂದ  ಬಿಟ್ಟ ಇರುವೆ ಮೈಯೆಲ್ಲಾ ಸುತ್ತುತ್ತಿದೆ
ನಿನ್ನ ಎದುರಿನ ಅಂತರದಲ್ಲಿ ನಾ ಮುದುಡಿದರೆ
ತುಟಿಯಂಚಿನ ಮೊಗ್ಗಿನ ತಾವರೆಯು ಮುಡಿಯಲ್ಲಿ
ಬಿಸಿ ಉಸಿರಿನ ತಾಪಕ್ಕೆ ಹಬ್ಬಿ ಚುಂಬನದ
ಅಂಬರಕ್ಕೆ  ಅರಳಿದ ಕೊಡೆಯಾಯಿತು
ನಿನ್ನ ಕೆಮ್ಮಣ್ಣು ತುಟಿಯಲ್ಲಿ ನನ್ನ ರೂಪು
ಬಿತ್ತಿದಾಗ ನನ್ನೊಳಗೆ ನವಿಲುಗಳು ಗುಂಪುಗಟ್ಟಿ
ನೃತ್ಯವಾಡಿದ್ದವು
ಹಿಡಿದೆಳೆದ ಒರಟು ರಭಸದ ಬಿಗಿತಕ್ಕೆ
ಕೆನ್ನೆಯ ಗುಳಿಯ ಕಚಗುಳಿಯಲ್ಲಿ ನಗುವ
ಕಂದಮ್ಮನಾಗಿದ್ದೆ
ಅಡ್ಡಾ ದಿಡ್ಡಿನ ಹಾಸು ಹೊಕ್ಕಳ್ಳಲ್ಲಿ ಮಲಗಿದ ನನಗೆ
ಮತ್ತದೇ ಇರುವೆ ಮತ್ತೆ ತೆವಳಿದಾಗ ಮೈಯೆಲ್ಲಾ
ಕಾದ ಬಾಣಲೆ ಎಣ್ಣೆಯಲ್ಲಿ ಅದ್ದಿದಂತಾಗಿ ಮೀನಾಕಾರದ
ಕಣ್ಣು ಬಿಟ್ಟಾಗ ಬವಣೆ ಯಮರಾಯನ
ಕುಣಿಕೆ ಪಾಶಕ್ಕೆ ಬೆವೆತು ನೀರಿನ ಹೊಳೆಯಲ್ಲಿ ಈಜಾಡಿ
ಮುಳುಗಿದ್ದೆ.

ಸೋಮವಾರ, ಜುಲೈ 13, 2020

ಕೆಂಪಿನ ಬಸ್ಸು




ನಮ್ಮ ಊರಿನ ಕೆಂಪಿನ ಬಸ್ಸು
ಭೇದಭಾವವನ್ನು ಎಂದೂ ತಿಂದಿಲ್ಲ
ಜೀವನ ವೈರಾಗ್ಯದ ಮುಪ್ಪನುಂಡಿಲ್ಲ
ಕಪ್ಪು-ಬಿಳುಪಿನ ಬಣ್ಣದ ಬೇರನ್ನು ಅಂಟಿಸಿಕೊಂಡಿಲ್ಲ
ಮುಂಭಾಗದ ನೆತ್ತಿ ದುರದುರ ದೃಷ್ಟಿಸುವವರನ್ನು
ಮೌನವಾಗಿ ಸ್ವಾಗತ  ಕೋರುತ್ತಾ,,,,,,,,
ಸವಾರ ಪ್ರಜೆಗಳ ಶುಚಿತ್ವಕ್ಕೆ ಕೈಗನ್ನಡಿಯಾಗಿದೆ
ಕಸದ ಬುಟ್ಟಿಯ ವಾಸಿಗರೆಲ್ಲ
ಸೀಟು , ಬೋಟಿನ ಕೆಳಗೆ
ವಾಯುವಿನ ಅಡ್ಡಾಟಕ್ಕಿರುವ ಕಿಟಕಿಗಳು
ಮಳೆರಾಯ ತೊಟ್ಟಿಕ್ಕುತ್ತಿದ್ದರೂ ಮಂಡೆ
ಕೆಡಿಸಿಕೊಳ್ಳುವ ಪರಿವಿಲ್ಲ
ಕಾಲೇಜು ಹೈಕಳ ಜ್ಞಾನ ಲಿಪಿಗಳು
ಶೈಲಿಗಳಲ್ಲಿ ಕೆತ್ತಲ್ಪಟ್ಟಿದ್ದರು ಬೇಸರವಂತು ಕಂಡಿಲ್ಲ
ಸೀಮೆಂಟು ಕಾಂಕ್ರೀಟು ರಂಗವಲ್ಲಿಯ
ತೋಡುಗಳಲ್ಲಿ ಬೀಗುತ್ತಿದ್ದ ರಾಜರಥ
ಸಿಗರೇಟು, ಬೀಡಿ , ಸಾರಾಯಿಗಳ
ಪರಿಮಳಕ್ಕೆ ಜೋತುಬಿದ್ದು
ಯಾವುದೇ ರಥಬೀದಿಯಲ್ಲಿ ಪ್ರಜೆಗಳ
ಅಣತಿಯಂತೆ ನಿಂತುಬಿಡುತ್ತಿತ್ತು
ಸದ್ದು-ಗದ್ದಲಗಳಲ್ಲಿ ಕಲ್ಲುಗಳನ್ನು ಬಾಚಿ
ತಿಂದು ನಜ್ಜುಗುಜ್ಜಾಗಿ ಗಲಗಲ ಸದ್ದುಳ್ಳ
ತಗಡಿನ ಡೋರು ನೇತಾಡುತ್ತಿದ್ದರು
ನನ್ನ ಸಮಯಕ್ಕೆ ಬೆಲೆಯಿತ್ತು ತಲುಪಿಸುತ್ತಿದ್ದ
ಬಸ್ಸಿಂದು ಮಂಗಳಸೂತ್ರ ಕಳೆದುಕೊಂಡವರಂತೆ
ಚಿಂತೆಯ ಅರೆನಿದ್ರೆಯಲ್ಲಿ ಬೇಯುತ್ತಾ ನಿಂತಿದೆ.



ಭಾನುವಾರ, ಜುಲೈ 12, 2020

ಸೂರ್ಯ -ಭೂಮಿ




ನನ್ನ  ಆತ್ಮ ದಂತ ಸೂರ್ಯ ಭೂಮಿಗೆ
ಒಂದು ವಸಂತ ತುಂಬಿದೆಯಂತೆ
ಹೆಮ್ಮೆತುಂಬಿದ  ಅಭಿನಂದನೆಗಳು
ಚಿರಋಣಿಯ ಕೃತಜ್ಞತೆ
ಎಲ್ಲೋ ಹೊತ್ತೊಯ್ದ ರೂಪನ್ನು
ಮತ್ತದೇ ಪ್ರತಿಬಿಂಬಿಸಿದ್ದಕ್ಕೆ
ಕೋಪ-ತಾಪದ ಅನುರಾಗಗಳೆಷ್ಟೋ
ಬಿಟ್ಟು ಬಿಡುವನೆಂಬ ಮುನಿಸುಗಳೆಷ್ಟೋ
ಮನ-ಮನಗಳ ಭಾವವೇದನೆ
ಪದಗಳಲ್ಲಿ ಅವರ್ಣೀಯ
ನಿರ್ಲಕ್ಷ್ಯದಲ್ಲಿ ಮನೆಮಾಡಿದ ಸೂರಲ್ಲಿ
ಆಂತರ್ಯ ಅರಿವಿನ ಅನಿವಾರ್ಯ ಹಂಗಿಲ್ಲ
ಇಳೆಯ ಜೀವಜಗತ್ತು ಮರೆಮಾಚಿ
ನಗುವ ಸೌರಮಂಡಲ ಒಡೆಯ
ಒಲುಮೆ ಒಲೆಯ ಹೊತ್ತಿಸದೆ ಸುಡುವ ಸೂರ್ಯ
ತನ್ನ ದಿಕ್ಕಿನ ಪರಿಯ ತಿಳಿಯಗೊಡುವುದಿಲ್ಲ
ತಟಸ್ಥತೆಯ ಒರತೆ ಹಾಸಿಹೊದ್ದು ಮೌನದ
ಕಾಯಿಗಳು ಹಲ್ಲು ಕಳೆದುಕೊಂಡರು
ಭುವಿಯ ಒಡಲು ಬತ್ತುವುದೆ .. . . . . ?
ಅದನರಿತ ಛಲವೊಂದೆ ಲಜ್ಜೆತೊರೆದು
ತಳ್ಳಿದರು ನವವಂಸತ   ಇದ್ದೆ  ತೀರುವೆನೆಂದು .




ಸೋಮವಾರ, ಜುಲೈ 6, 2020

Urban

The hills are always far away.
He knows the broken roads, and
movesIn circles tracked within
his head.Before he wakes and
has his say,The river which he
claims he lovesIs dry, and all
the winds lie dead.

At dawn he never sees the skies
Which, silently, are born again.
Nor feels the shadows of the
nightRecline their fingers on his
eyes.He welcomes neither sun
nor rain.His landscape has no
depth or height.

The city like a passion burns.
He dreams of morning walks,
alone,And floating on a wave of
sand.But still his mind its traffic
turnsAway from beach and tree
and stoneTo kindred clamour
close at hand.

Nissim Ezekiel
                                                                                                 

ನಗರ                                                                                     

ಬೆಟ್ಟಗಳು ಯಾವಾಗಲೂ ದೂರದಲ್ಲಿರುತ್ತವೆ.
ಮುರಿದ ರಸ್ತೆಗಳು ಮತ್ತು ಅವನ ತಲೆಯೊಳಗೆ ಗೆರೆ
ಹಾಕಲಾದ ವಲಯಗಳಲ್ಲಿನ ಚಲನೆಗಳು ಅವನಿಗೆ ತಿಳಿದಿದೆ.
ಅವನು ಎಚ್ಚರಗೊಳ್ಳುವ ಮೊದಲು ಮತ್ತು ಅವನ ಮಾತನ್ನು ,
ತಾನು ಪ್ರೀತಿಸುತ್ತೇನೆ ಎಂದು ಹೇಳಿಕೊಳ್ಳುವ ನದಿ ಒಣಗಿದೆ
ಮತ್ತು ಎಲ್ಲಾ ಗಾಳಿಗಳು ಸತ್ತಿವೆ.

ಮುಂಜಾನೆ ಅವನು ಆಕಾಶ ನೋಡುವುದಿಲ್ಲ
ಇದು , ಮೌನವಾಗಿ ಮತ್ತೆ ಜನಿಸುತ್ತದೆ
ರಾತ್ರಿಯ ನೆರಳುಗಳನ್ನು ಅನುಭವಿಸುವುದಿಲ್ಲ
ಅವನ ಕಣ್ಣುಗಳ ಮೇಲೆ ಬೆರಳುಗಳನ್ನು ಓರೆಯಾಗಿಸಿ
ಅವನು ಸೂರ್ಯ ಅಥವಾ ಮಳೆಯನ್ನು ಸ್ವಾಗತಿಸುವುದಿಲ್ಲ
ಅವನ  ಭೂದೃಶ್ಯಕ್ಕೆ ಆಳ ಅಥವಾ ಎತ್ತರವಿಲ್ಲ .

ನಗರ ಉತ್ಸಾಹ /ಭಾವೋದ್ರೆಕದಿಂದ ಉರಿಯುತ್ತದೆ.
ಅವನು ಬೆಳಿಗ್ಗೆ ಏಕಾಂಗಿಯಾಗಿ ನಡೆಯುವ ಕನಸು ಕಾಣುತ್ತಾನೆ
ಮತ್ತು ಮರಳಿನ ಅಲೆಯ ಮೇಲೆ ತೇಲುತ್ತಾನೆ.
ಆದರೆ ಇನ್ನೂ ಅವನ ಮನಸ್ಸು ದಟ್ಟಣೆಯ ತಿರುವುಗಳು  ,
ಕಡಲತೀರ ಮತ್ತು ಮರ ಮತ್ತು ಕಲ್ಲಿನಿಂದ ದೂರ ಸರಿಯುತ್ತದೆ
ಕೈಯ ಹತ್ತಿರದಲ್ಲಿರುವ ನಂಟಿನ ಗದ್ದಲಗಳಿಂದ. 

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...