ಪ್ರಾಮಾಣಿಕತೆಯ ಅಂಗಿಯನ್ನು
ಕಳಚಿ ತೊಟ್ಟಿಕೊಂಡಿತು
ನೋಡಲು ಎಷ್ಟು ಮಿರ ಮಿರ
ನವ ನವ, ಶುಭ್ರ
ಬೀಸೋ ಗಾಳಿ, ಹರಿವ ನೀರಿಗೂ
ಅದರ ಅಂಗಿಯಲ್ಲಿರುವ
ಕಪ್ಪು ಚುಕ್ಕೆಗಳು ಕಾಣಿಸುವುದಿಲ್ಲ
ದುರ್ಬಿನ್ನೇ ಬೇಕಾದೀತು
ಗಾಂಧಿತಾತನ ನ್ಯಾಯಬೆಲೆ
ಅಂಗಡಿಯ ಸಾಬೂನುಗಳಿಂದಲೂ
ಆ ಚುಕ್ಕೆಗಳು ಮಾಸುವುದಿಲ್ಲ
ಇನ್ನಷ್ಟು ಇಸ್ತ್ರಿ ಮಾಡಿದಂತೆ
ಹೊಳೆಯುತ್ತದೆ
ಅದರ ವಿಜೃಂಭಣೆಯ ಮುಂದೆ
ಅಸಹಾಯ ಪ್ರಾಮಾಣಿಕತೆ
ಬಾಯಿಗೆ ಬೀಗ ಜಡಿದು
ಜನ ಮನಗಳನ್ನು ಹುಡುಕುತ್ತಾ
ಅಲೆಯುತ್ತಿರುತ್ತದೆ
ಎಲ್ಲಿಯವರೆಗೆ...?
ತೋರ್ಪಡಿಕೆ ಅಂಗಿಯ
ಕಳಚಲು ಅವ, ಅವಳು
ಕಪ್ಪು ರಂಧ್ರಗಳಿಲ್ಲದ ಹೊಸ
ಬಿಳಿ ಅಂಗಿ ತೊಡುವವರೆಗೆ
ಆದರಿನ್ನೂ ಅವರು ಅಂಗಿ
ಖರೀದಿಸುವ ಯೋಚನೆಯನ್ನು
ಮಾಡಿಲ್ಲ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ