ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಗುರುವಾರ, ಮಾರ್ಚ್ 25, 2021



   


     ಸುನೀತ ಮೇಡಂರವರು ಹೇಳುವಂತೆ ನಾ ಅವರಿಗೆ ಅಪರಿಚಿತಳಾದರೂ, ನನಗೆ ತುಸು ಪರಿಚಿತ(ಕೃತಿ )ರಿರುವ ಅವರ ಸಾಮಾನ್ಯ ಓದುಗಳಾಗಿ ನಾನೇನು ಬರೆಯಬಲ್ಲೆ ಎಂಬುದು ನನ್ನನ್ನು ಬಹುವಾಗಿ ಕಾಡಿತು. ಪ್ರಯತ್ನದ ಬರವಣಿಗೆಯಲ್ಲಿ ವ್ಯತ್ಯಾಸಗಳಿದ್ದರೆ ಕ್ಷಮೆ ಎಂಬ  ಪ್ರೀತಿಯಿರಲಿ. 

ನಾಡಿನ ಖ್ಯಾತ ಸಾಹಿತಿ ಡಾ.ನಾ.ಡಿಸೋಜರವರ " ಕವಿ ಬೆಳೆದ ಹಾಗೆ ಆತ ಪರಿಪೂರ್ಣನಾಗುತ್ತಾನೆ. ಆ ಬಗೆಯ ಎಲ್ಲಾ ಲಕ್ಷಣಗಳು ಸುನೀತಾರವರಿಗಿದೆ, ಎಂಬ ಮುನ್ನುಡಿಯನ್ನು ಲೇಪಿಸಿಕೊಂಡು ಉರುಳುತಲಿರುವ "ಉರುಳುವ ಗಾಲಿಗೆ ಹಿಡಿಯುತ ಕೋಲು " ಮಕ್ಕಳ ಕವನ ಸಂಕಲನವು 76 ಕವನಗಳನ್ನು  ತನ್ನ ಉರುಳುವ ಗಾಲಿಗೆ ಹಿಡಿದಿದೆ. 

 ಬಿಡುವಿಲ್ಲದ ಜೀವನದ ಜಂಜಾಟಗಳಲ್ಲಿ ಮಕ್ಕಳಾಗಿ, ಮಕ್ಕಳ ಮನಸ್ಥಿತಿಯೊಳಗೆ ಹೊಕ್ಕು, ಮುಗ್ಧತೆಯನ್ನು ಇಣುಕಿನೋಡಿ ಕವನಗಳಾಗಿ ಬರೆಯುವುದು, ಎಂಥಹವರಿಗೂ ತುಸು ತ್ರಾಸಕ್ಕೆ ತಳ್ಳುವ ಸಂಗತಿಯೇ. ಅಂಥಹ ಸಂಗತಿಗಳನ್ನೆಲ್ಲಾ ಬದಿಗೊತ್ತಿ ಸುನೀತ ಮೇಡಂರವರು,  ತಮ್ಮ ಮಕ್ಕಳಿಗಾಗಿ, ಮುಗ್ಧ ಮನದ ಮೊಗ್ಗುಗಳಿಗಾಗಿ ಉರುಳುವ ಗಾಲಿಗೆ ಹಿಡಿಯುತ ಕೋಲೆಂಬ ಉತ್ತಮವಾದ ಪ್ರಯತ್ನವನ್ನು ನಮ್ಮ ಮುಂದಿಟ್ಟಿದ್ದಾರೆ. 

 ಸುನೀತ ಮೇಡಂರವರ ಉರುಳುವ ಗಾಲಿಯು,  ಪುಟಾಣಿ ಮುಗ್ಧ  ಮನಸ್ಸುಗಳನ್ನು ಸಹಜವಾಗಿ ಅರಳಿಸುವ ಮನೆ, ಶಾಲೆ, ಹೂ, ಪ್ರಾಣಿ, ಹಬ್ಬ, ಜಾತ್ರೆ, ಮಳೆ, ಆಟಗಳು, ಹಳ್ಳಿ, ಪರಿಸರ, ದೇಶ, ಭಾಷೆ  ಹೀಗೆ ನೀತಿಪೂರಕವಾಗಿ, ಮನೋರಂಜನಾತ್ಮಕವಾಗಿ , ಕಲಿವಿಕೆಗೆ ಪೂರಕ ಲಯಗಳ ಮೂಲಕ ತನ್ನ ಕವನಗಳನ್ನು ಉರುಳಿಸುತ್ತಾ ಸಾಗಿದೆ. 

ಮೇಲಿನಿಂದ ನೂಲಿನ ಹಾಗೆ 
ಬೀಳುವೆ ಹೇಗಣ್ಣಾ? 
ಯಾರು ಅಲ್ಲಿ ನೇಯ್ಗೆ  ಕೆಲಸ 
ಮಾಡುತ್ತಿರುವರು? 

ಮಳೆಯಣ್ಣ ಕವನದಲ್ಲಿ ಲೇಖಕಿ ಮಗುವಾಗಿ ಮಳೆಯನ್ನು, ನೂಲಾಗಿ ಕಾಣುವ ವಿಭಿನ್ನ  ಚಿಂತನೆ, ಮಳೆಬೀಳುವಿಕೆಯಲ್ಲಿ  ನೇಯ್ಗೆ ಕೆಲಸದ ಕಲ್ಪನೆ, ಮಳೆ ಹನಿಯನ್ನು ಬಣ್ಣವಿಲ್ಲದ ಬಿಂದುವಾಗಿ ಕಾಣುವುದು, ಹನಿಗಳು ಡಿಕ್ಕಿ ಹೊಡೆಯುವಿಕೆಯ ಭಾವ, ಇವು ಕವಿ ಮನಕ್ಕೆ ಮಾತ್ರ ಸಾಧ್ಯವಾದೀತು ಎಂಬುದು ನನ್ನ ಭಾವನೆ. 

ಮನೆ  ಮನಗಳ ಬೆಸುಗೆಯಾಸೆಗೆ 
ಹೃದಯ ಹಣತೆಯ ಹಚ್ಚಿಟ್ಟ ಭಾಷೆ 
ನಮ್ಮ ಕನ್ನಡ ಎಷ್ಟು ಸುಂದರ 

 ಇಲ್ಲಿ ಲೇಖಕಿ ಕನ್ನಡ ಭಾಷೆಯ ಮೇಲಿನ ಅಭಿಮಾನ,  ಪ್ರೀತಿಗೆ ತನ್ನ ಕವನವನ್ನು ಬೆಸುಗೆಯಾಗಿಸಿದ್ದಾರೆ.

ಕಪ್ಪು ಬಣ್ಣದ ಪರದೆಯೂ 
ಬಿಳಿಯ ಸೀಮೆಸುಣ್ಣವೂ 
ಕರಿಹಲಗೆಗದು ಸಮವಸ್ತ್ರವೂ 
ಬರೆದು ಅಳಿಸಿ ಬರೆದು ಅಳಿಸಿ 
ಎದೆಯೊಳಗೆಲ್ಲಾ ಇಳಿಯುತ್ತೆ 

 ಶಾಲೆಯಲ್ಲಿ ಮಕ್ಕಳ ಕಲಿಕೆ, ಕರಿಹಲಕೆಯ ಮೇಲಿನ ಬರವಣಿಗೆಯಿಂದ ಪಕ್ವತೆ ಪಡೆಯುವುದನ್ನು ಲೇಖಕಿ ಸುಂದರವಾಗಿ ಕರಿಹಲಗೆಗೆ ಬಿಳಿಯ ಸಮವಸ್ತ್ರ ತೊಡಿಸುವ ಮೂಲಕ ಕವನದ ಸಾಲುಗಳನ್ನು ಚೆಂದಗಾಣಿಸಿದ್ದಾರೆ. 

ಒಳ್ಳೆಯ ಗೆಳೆಯರ ಸೇರಿಕೊಂಡು 
ಬಾಳು ಚೆಂದ ಮಾಡು ಕಂದ 
ಎಲ್ಲರೊಳಗೊಂದಾಗಿ ನೀನು 
ಮಡಿಲ ಮುತ್ತಾಗು 
ಈ ನಾಡಿನ ಸ್ವತ್ತಾಗು 

 ಲೇಖಕಿ ಮೂಲತಃ ಶಿಕ್ಷಕಿಯಾಗಿರುವುದರಿಂದ ತಮ್ಮ ಮಕ್ಕಳಲ್ಲಿ ಅಪೇಕ್ಷಿಸುವ ಸದ್ಗುಣ, ಆಚಾರ-ವಿಚಾರ ವಿನಯಗಳಿಂದ ಮಡಿಲ ಮುತ್ತಾಗಿ , ಸ್ವತ್ತಾಗಿ ಬಾಳಿರಿ ಎಂದು ಆಶಿಸಿದ್ದಾರೆ. 

ಹಳ್ಳಕ್ಕೆ ಬಿದ್ದ ಕಸವಿಸಿಯೇನು 
ಬಿದ್ದರೂ ಎದ್ದು ಓಡೂ 
ಬದುಕು ಹಾಗೆಯೇ ನೋಡು 
ಸುಲಭದಿ ಸಿಕ್ಕ ಈ ಚಕ್ರ, ಕೋಲು 

  ಕವನ ಸಂಕಲನದ ಆಶಾಭಾವದ ಶೀರ್ಷಿಕೆ ಹೊತ್ತಿರುವ ಉರುಳುವ ಗಾಲಿಗೆ ಹಿಡಿಯುತ ಕೋಲು ಕವಿತೆಯಲ್ಲಿ ಲೇಖಕಿ, ಹೊರಗೆ ಹೋದ ಮಗ ಸಮಯವಾದರೂ ಇನ್ನೂ ಬಾರದಿದ್ದನ್ನು ಕಂಡು ತಾಯಂದಿರು ಪಡುವ  ಸಹಜವಾದ ಆತಂಕ, ಚಕ್ರವನ್ನು ನಾಗರೀಕತೆಯ ಸಂಕೇತವಾಗಿ, ಕೋಲನ್ನು ನಿಯಂತ್ರಣದ ಸಂಕೇತವಾಗಿ ಬಳಸಿ, ಬದುಕಿನಲ್ಲಿ ಸೋಲು ಸಹಜ, ಅದನ್ನು ಕೊಡವಿ ನಿಂತು, ಬದುಕಿನಲ್ಲಿ ಆಹ್ವಾನಿಸುವ ಅವಕಾಶಗಳನ್ನು ಬಳಸಿ ಬೆಳೆಯುವ ಆಶಯದೊಂದಿಗೆ, ಶರವೇಗದಲ್ಲಿ  ಉದಯಿಸುತ್ತಿರುವ ಇಂದಿನ ನಾಗರಿಕತೆಯನ್ನು ಪರಿಸರದ ಅರಿವಿನಿಂದ, ನಾಗರೀಕತೆಯ ರಕ್ಷಣೆಯನ್ನು ಹಿಡಿಯುವ ಕೋಲಾಗಿ ಹಾಗೆ ಜೀವನದ ಸೋಲು - ಗೆಲುವಿನ  ಚಕ್ರಕ್ಕೆ, ಆಶಾಭಾವದಿಂದ ಸೆಟೆದು ನಿಲ್ಲುವ ಕೋಲನ್ನು ಹಿಡಿಯಿರಿ ಎಂಬುದನ್ನು ಆಟದ ಮೂಲಕ ವ್ಯಕ್ತಪಡಿಸಿರುವುದು ಅವರ ಕವಿತ್ವ ಭಾವಕ್ಕೆ ಉತ್ತಮ ಉದಾಹರಣೆ.  

ಅಮ್ಮ ಅಮ್ಮ ರಜೆಯಲಿ ನಾನು 
ತಾತನ ಮನೆಗೆ ಹೋಗುವೆನು 
ಸುಡು ಸುಡು ಬಿಸಿಲಿನ ರಜೆಯನು ನಾನು 
ಮರದ ನೆರಳಲಿ ಕಳೆಯುವೆನು 

 ಆಧುನೀಕತೆಯ ಆಡಂಬರ, ಭರಾಟೆಗಳಲ್ಲಿ ಮಕ್ಕಳಲ್ಲಿರುವ ಮುಗ್ಧತೆ ದಿನೇ ದಿನೇ ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ರಜೆಯ ಮಜಾ ಕವಿತೆ, ನಮ್ಮನ್ನು ಬಾಲ್ಯಕ್ಕೆ ಮತ್ತೊಮ್ಮೆ ಅಟ್ಟಿದ ಅನುಭವ ಮತ್ತು ಇಂದಿನ  ಮಕ್ಕಳಿಗೆ ನಾವು ಕಳೆದ ಬಾಲ್ಯವನ್ನು ಚುಟುಕಾಗಿ ತಿಳಿಸಲು ಒಂದು ಉತ್ತಮ ಸಾಧನ ಈ ಕವಿತೆ. 

 ಕೆಲವು ಕವಿತೆಗಳಲ್ಲಿ ಪ್ರಾರಂಭದ ಸಾಲುಗಳಲ್ಲಿ ತುಡಿಯುವ ಲಯ, ಭಾವ, ಕವಿತೆಯ ಕೊನೆಯವರೆಗೂ ಮಿಡಿಯುವಂತಿರಬೇಕಿತ್ತು ಎಂಬುದು ನನಗೆ ಸುನೀತ ಮೇಡಂರವರ ಕವನಗಳನ್ನು ಓದಿದಾಗ ಲಘುವಾಗಿ ಮಿಡಿದ ಭಾವಾನಿಸಿಕೆ.

 "ಪುಸ್ತಕದಲ್ಲಿರುವ ಕೆಲವು ಪದ್ಯಗಳನ್ನಾದರೂ ಶಾಲಾ ವಿದ್ಯಾರ್ಥಿಗಳು,  ರಾಗವಾಗಿ ಹಾಡಿದರೆ ನನ್ನ ಪ್ರಯತ್ನ ಸಫಲವಾಗುವುದು ಎಂಬ ಭಾವದೊಂದಿಗೆ,  ನನ್ನ ಶಿಶುಗೀತೆಗಳನ್ನು ವಿದ್ಯಾರ್ಥಿಗಳು ತರಗತಿಯಲ್ಲಿ ದಿನನಿತ್ಯ ಹಾಡುವುದನ್ನು ಕೇಳುತ್ತಾ, ತೃಪ್ತಿಯ ಸಾರ್ಥಕ್ಯ ಭಾವ ಕಂಡಿರುವ ಲೇಖಕಿ, ಓದುಗರ ಸಾರ್ಥಕ್ಯ ಭಾವದ ಅಭಿಪ್ರಾಯಿಸುವಿಕೆಗಾಗಿ "ಉರುಳುವ ಗಾಲಿಗೆ ಹಿಡಿಯುತ ಕೋಲು " ಕವನ  ಸಂಕಲನವನ್ನು ನಮ್ಮ -ನಿಮ್ಮೆಲ್ಲರ ಮುಂದಿಟ್ಟಿದ್ದಾರೆ. ಅವರ ಪ್ರಯತ್ನಕ್ಕೆ ಉತ್ತಮವಾದ ಯಶಸ್ಸು ಓದುಗರ ವಿಮರ್ಶೆ, ಪರಾಮರ್ಶೆ, ಹಾರೈಕೆಗಳ ಮೂಲಕ ಒಲಿದು ಬರಲಿ, ಸುನೀತ ಮೇಡಂ  ಸಾಹಿತ್ಯಕ್ಷೇತ್ರ ಕಂಡ ಉತ್ತಮ ಕವಿಗಳನ್ನು ಮೀರಿ ಬೆಳೆಯುವ ಹೃದಯಕವಿಯಾಗಿ ಪುಟಿಯಲಿ ಎಂದು  ಅತ್ಯಂತ ಕಿರಿಯವಳಾಗಿ ಮನ ತುಂಬಿ ಹಾರೈಸುತ್ತೇನೆ 💐💐.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...