ನೀನು ನನ್ನೊಳಗೆ
ಹಸಿರಾಗಿರುವ ಬುದ್ಧ
ನಾನು ನಿನ್ನೊಳಗೆ
ಬೆಚ್ಚಗೆ ಉಸಿರಾಡುತ್ತಿರುವ ಕಂದ
ನಿನ್ನೊಳಗಿನ ತಾಳ್ಮೆ
ನನ್ನೊಳಗಿಗೆ ಹೊಳಪಿನ ಚಿಗುರು
ನಿನ್ನಯ ಪ್ರೀತಿ ಕಾಳಜಿ ಪಸೆ
ನನ್ನೊಳಗಿನ ಬದುಕಿಗೆ ಹಸಿರು
ಉಸಿರಿನ ಹರಿವು.
ಕಾಸರಕೂಸು
ಮಂಗಳವಾರ, ಜನವರಿ 24, 2023
ಸೋಮವಾರ, ನವೆಂಬರ್ 21, 2022
ನನ್ನೊಳಗಿನ ಬುದ್ಧ
ಹಸಿರ ಉಸಿರಂತೆ
ಸದಾ ಹಸನ್ಮುಖಿ
ಪಕ್ಷಿಯಂತೆ ಪಟ ಪಟ
ಸೊರಗಿದಾಗಲೆಲ್ಲ
ಅಮ್ಮನಾಗುತ್ತಾನೆ
ಕರಗಿದಾಗಲೆಲ್ಲ
ಅವ ಜಾಗೃತನಾಗುತ್ತಾನೆ
ಶಾಂತತೆಗೂ ಶಾಂತ
ಈ ನನ್ನೊಳಗಿನ ಬುದ್ಧ
ಶಾಂತತೆಯ ಬಾಣ
ಮಾಡಿ ಕಾಡಿ ಪೀಡಿಸಿ
ನಗುವಿನ ಹೂವಾಗುತ್ತಾನೆ
ಕಾಡುವ ನಾಳೆಗಳಿಗೆ
ಭರವಸೆಯ ಬೆಳಕಾಗುತ್ತಾನೆ
ನಿನ್ನಾತ್ಮದಲ್ಲಿ ಬೆಳಗುವ
ಪ್ರೀತಿ ಜ್ಯೋತಿಯಂತೆ
ನನ್ನ -ನಿನ್ನೊಳಗಿನ ಬುದ್ಧನಿಗೆ
ಆ ಶುದ್ಧ ಬುದ್ಧನ ನೆರಳು
ಎಂದೂ ಕಾಡಿ ಮೋಹಿಸದಿರಲಿ
ಅವನಾತ್ಮದ ಬೆಳಗು
ಎಂದೆಂದಿಗೂ ನನ್ನ ನಿನ್ನಲ್ಲಿನ
ಕತ್ತಲು ಬೆಳಕು ಬೆರೆತ
ದಿವ್ಯ ಜ್ಯೋತಿಯಾಗಿ
ಜಗದೊಳಗಿನ ಕತ್ತಲಿನ
ಕಾರ್ಮೋಡಗಳಿಗೆ
ಸ್ಫೂರ್ತಿಯ ದಾರಿದೀಪವಾಗಿರಲಿ
ನೆನಪಿರಲಿ ಶುದ್ಧ ಬುದ್ಧನ
ನೆನಪಿನಲಿ
ಶನಿವಾರ, ನವೆಂಬರ್ 12, 2022
ಹೆಣ್ಣು
ಹೆಣ್ಣು
ಆದರೆ ಕುಂಕುಮವಿರಬೇಕಂತೆ
ಹೆಣ್ಣಂತೆ ಅವಳು
ಜೇಡರ ಬಲೆಯ ಜಡೆ ಇರಬೇಕಂತೆ
ಹೆಣ್ಣಂತೆ ಅವಳು
ನರಿಗೆಗಳೆಲ್ಲ ಮಣ್ಣಾಗುವವರೆಗೂ
ಬಾಗುತ್ತಿರಬೇಕಂತೆ
ಹೆಣ್ಣಂತೆ ಅವಳು
ಜನ್ಮ ಸಾರ್ಥಕತೆಯ
ಮಕ್ಕಳಿರಬೇಕಂತೆ
ಹೆಣ್ಣಂತೆ ಅವಳು
ನೌಕರಿ, ಸೌಕರ್ಯಗಳ
ಉಸಾಬರಿ ಬೇಕಿಲ್ಲವಂತೆ
ಹೆಣ್ಣಂತೆ ಅವಳು
ಮನೆಯೊಳಗೆ ಆಕಾಶ ನೇಯ ಬೇಕಂತೆ
ಹೆಣ್ಣಂತೆ ಅವಳು
ಬಯಕೆ ಬಾಣಲೆ ಬೇಯಿಸಿ
ಮನಸ್ಸು, ಕನಸುಗಳ
ಅಡುಗೆ ಮಾಡಿ ಬಡಿಸಬೇಕಂತೆ
ಹೆಣ್ಣಂತೆ ಅವಳು
ಅಧೀನತೆ ಅವಳ ಆ ಜನ್ಮಸಿದ್ಧ ಹಕ್ಕಂತೆ
ಹೆಣ್ಣಂತೆ ಅವಳು
ಸದಾ ನಗುತ್ತಿರಬೇಕಂತೆ
ಕತ್ತಲ್ಲಲ್ಲಿರುವ ಹಣತೆಯಂತೆ
ಹೆಣ್ಣು ಹೂವಂತೆ
ನೋವಲ್ಲೂ ನಗಬೇಕಂತೆ
ಹೆಣ್ಣು ಕೋಮಲೆಯಂತೆ
ಸ್ವಾತಂತ್ರ್ಯ ಬಳಿ ಸುಳಿಯಬಾರದಂತೆ
ಈ ಹೂವು, ಹಾವುಗಳ
ಲೆಕ್ಕಾಚಾರವೆಲ್ಲ ಎಷ್ಟು ದಿನ?
ಶರಣೆಂಬ ಅಸ್ತ್ರ
ಕತ್ತರಿಸಿ, ಧೈರ್ಯ ವೆಂಬ
ಅಸ್ತ್ರಕ್ಕೆ ಕೈ ಚಾಚುವವರೆಗೆ.
ಮಂಗಳವಾರ, ಜುಲೈ 19, 2022
ನೀ ಎಂಬ ವರ್ಷಧಾರೆ
ನಾನೆಂಬ ಧರೆಯ ಮರೆತು ಬಿಟ್ಟೆಯಾ
ದೂರದ ಮುನಿಸು ತೋರಿ
ನೀಲಿ ಆಕಾಶದಲೆಲ್ಲೋ ಅವಿತು ಬಿಟ್ಟೆಯಲ್ಲ
ನಾನೆಂಬ ನೆನಪುಗಳನ್ನು ಮಾಸಿ
ನಿನ್ನ ಹನಿಗಳಿಲ್ಲದೆ
ಬಿರುಕು ಬಿಟ್ಟಿಹುದು ನನ್ನ ನಾಲಗೆ
ನಿನ್ನ ಸನಿಹವಿಲ್ಲದೆ
ನನ್ನ ಒಡಲ ಬಂಜರು ಹಿಂಡುತಿಹುದು
ನನ್ನ ಹಸಿರಿನ ವನಸಿರಿ
ನಿನ್ನ ಸ್ಪರ್ಶವಿಲ್ಲದೆ
ನಶಿಸಿ ನರಳುತಿಹುದು
ದಿನೇ ನಿನಗಾಗಿ
ನನ್ನ ಒಡಲ ಉಷ್ಣದಲ್ಲಿ
ಬೆಂದ ರೈತರು
ಕಣ್ಣೀರಿನ ಹಿಡಿಶಾಪ
ಹಾಕುತಿಹರು
ನನ್ನೊಂದಿಗಿನ ಮುನಿಸು ಬೇಡ
ಬಾ ಬಾ ಆದಷ್ಟು ಬೇಗ
ನನ್ನ ತಣಿಸಿ ನನ್ನೊಂದಿಗಿನ
ಜೀವರಾಶಿಗಳನ್ನು ಹರ್ಷಿಸು ಬಾ
ನೀ ಎಂದೆಂದಿಗೂ....ನೀ
ನೀ ಇರದೆ ನಾನೆಂಬುದಿಲ್ಲ
ನಾ ನಾನಾಗಲು
ನೀ ನನ್ನೊಳಗಿರಬೇಕು
ನಿರೀಕ್ಷೆಯಲ್ಲಿ.....
ನಾನೆಂಬ ಧರೆ
ಗುರುವಾರ, ಜುಲೈ 14, 2022
ಯೋಚಿಸಬೇಡ ಮನವೆ
ನಾನೆಂದೂ ಬಿಟ್ಟು ಹೋಗುವವಳೇ
ನೀ ಯೋಚಿಸಿದಷ್ಟು ನಾ ದೂರ
ನನ್ನ ಕೊನೆ ಉಸಿರು
ನಿನ್ನಯ ಉಸಿರಿಗೆ ಉಸಿರಾಗಿರುತ್ತದೆ
ನೀ ಸೂರ್ಯನಂತಿಹನು
ಸದಾ ನಗುವಿನ ಆಭರಣ ಹೊದ್ದವನು
ನಾ ಇರಲಿ ಬಿಡಲಿ
ನೀ ನಗಲೇ ಬೇಕು, ಜಗ ಮರೆತು
ನಿನ್ನಿಂದ ಬೆಳೆದು ಹಸಿರಾಗಲಿರುವುದು
ಬಹಳಷ್ಟು
ನಿನ್ನ ಹರಿಯುವಿಕೆಯಲ್ಲಿ ಜೊತೆಗೊಂಡ
ಆಕಸ್ಮಿಕ ಝರಿಯಷ್ಟೆ
ನೀ ಪುಟ್ಟಿದಷ್ಟು ನಾ ಚಿಗುರುವೆ
ಒಳಗೊಳಗೆ ಮರವಾಗುವೆ
ನೀ ಬೆಳೆಯುತ್ತಿರು ಎಲ್ಲರ ಮನದ
ಹೆಮ್ಮರದಲಿ ಅಲ್ಲಿ ನಾ
ಗೂಡು ಕಟ್ಟುವೆ
ನೀ ನಡೆಯುತ್ತಿರುವ ಒಂಟಿಯಾಗಿ
ನಾ ಕಾವಲಾಗಿ ಹಿಂಬಾಲಿಸುವೆ
ಮೌನದಲಿ ಮಗ್ನನಾಗಿರು
ನಾ ಧ್ಯಾನದಲ್ಲಿ ಸೇರಿಕೊಳ್ಳುವೆ
ನೀ ದಾರಿದೀಪವಾಗುತ್ತಿರು
ಬೆಳಕಲ್ಲಿ ಮಿಣುಕುವ ಹುಳುವಾಗುವೆ
ನೀ ನಗುತ್ತಿರು, ನಿನ್ನ ನಗುವಲ್ಲೇ
ನಾ ನಗುವೇ, ನಲಿವೆ
ಬಾಳುವೆ ನಿನ್ನಾತ್ಮಲ್ಲೆ.
ನಾನೆಂಬುದು ಇಳೆ
ನೀ ಎಂಬುದು ಆಕಾಶವಲ್ಲ
ಆಕಾಶವೆಂಬುದು ದೂರವೇ
ಎಂದೆಂದಿಗೂ.....
ನೀನು ಬಿಳಿ ಚುಕ್ಕಿಯ
ಹನಿಗಳಾಗಿ ಉದುರುತ್ತಿರುವಾಗ
ಬಾಯ್ತೆರೆದು ಕಾಯುವೆ
ನೀ ನನ್ನ ಕಣ ಕಣಗಳನ್ನು
ಮೃದುವಾಗ ಸ್ಪರ್ಶಿಸಿ ಹರಸಿದಾಗ
ಮೈನೆರೆದು ಹಸಿರಾಗುವೆ
ನಿನ್ನ ಹನಿಗಳು ನನ್ನ ಚುಂಬಿಸಿದಾಗ
ಆ ಹಸಿರ ಉಸಿರನ್ನು ಧರಿಸಿ
ನಾ ಶೃಂಗಾರಗೊಳ್ಳುವೆ
ನನ್ನ ತನುವನ್ನು ನೀ
ಕದಿಯ ಬಂದವನಂತೆ
ನೀ ಹೀಗೆ ತಂಪನೆರೆಯುವಾಗ
ಒಂದಾಗಿ ನನ್ನೊಳಗಿಳಿದು
ಝರಿ ಎಂಬುದಾಗಿಯೋ
ಸಸಿ ಎಂಬುದಾಗಿಯೋ
ನನ್ನ ನಿನ್ನ ಪ್ರೀತಿಯ ಕುರುಹು
ಮೊಳಕೆಯೊಡೆದು
ಉಳುಮೆ ಒಡೆಯನ
ಮುಖವೆಂಬ ಎದೆಯಂಗಳದಲ್ಲಿ
ನಲಿದಾಡುತ್ತಿರಬೇಕು ಒಂದಾಗಿ ಸದಾ....
ಆದರೆ ನೀ ಎಂಬುದು
ಎಂದೂ ಆಕಾಶವಾಗದಿರಲಿ
ಆಕಾಶ ಇಳೆಗಳ ಅಂತರ
ನಾ ಎಂದಿಗೂ ದಾಟಲೊಲ್ಲೆ.
ಶುಕ್ರವಾರ, ಜೂನ್ 17, 2022
ನಿನ್ನನ್ನು ಕಣ್ತುಂಬಿಕೊಳ್ಳುವಾಸೆ
ದೀರ್ಘ ಉಸಿರು
ನನ್ನನ್ನು ಅರಸುವ ಮುನ್ನ
ಕಣ್ಣುಗಳು ಸದಾ ತೆರದಿರಲಿ
ಮುಚ್ಚುವ ಪ್ರಯತ್ನಬೇಡ
ಮರೆಯಾದೀತು ನಿನ್ನ ಬಿಂಬ
ಕಣ್ತುಂಬಿಕೊಳ್ಳುವಾಗ
ನಿನ್ನ ತನ ಬಿಟ್ಟು, ನನ್ನ ತನವ ಬಿಟ್ಟು
ಅಪ್ಪಿ ಬಿಡುವಾಸೆ
ನೀ ನಾನಾಗುವಾಗ ನಿನ್ನ ತನ ಮೆರೆದು
ನಾ ನೀನಾಗುವಾಗ ನನ್ನ ತನ ತೊರೆದು
ಇಬ್ಬರೂ ಕೂಡಿ ಒಂದಾಗುವಾಗ
ಜೀವನ ಹಸಿರಿನ ಪಸೆಯಾಗಲಿ
ದೀರ್ಘ ಉಸಿರು ನನ್ನ
ಅರಸುವ ಮುನ್ನ....
ಹಸಿರು ಮೆತ್ತಿ, ಮೊಳಕೆಯೊಡೆಸಿದ ನೀನೇ
ಮೊದಲಾಗಬೇಕು, ನನ್ನ ತನು ಮನವು
ಉಸಿರು ಬಿಟ್ಟಾಗ
ಮುತ್ತಿಕ್ಕಿ, ನಿನ್ನ ಹಸಿರು ಬನದಲಿ
ಅಂಗಾತ ಮಲಗಿಸಿ ಬಿಡು
ಸದಾ ಹಾತೊರೆದು ನಿರಾಸೆಯ
ನೀರನ್ನು ಸುರಿಸಿದ ನನ್ನ ಕಣ್ಣುಗಳಿಗೆ
ನಿನ್ನ ಮನಸ್ಸಿನಂತೆ ವಿಶಾಲ
ಬೊಗಸೆ ಕೈಗಳಿಂದ
ಹುಡಿ ಹುಡಿಯಾದ ಮಣ್ಣು
ಉದುರಿಸು, ಮುಂದೊಂದು
ಜನ್ಮದಲ್ಲಿ ನಿನ್ನ ಸಸಿಯಾಗುವೆ
ನನ್ನ ಕಣ್ಣುಗಳಿಂದ ಹರಿದು
ಪಸೆಯಾದ ನಿನ್ನಲ್ಲಿಯ
ಗುಡ್ಡವನ್ನು ಮುಚ್ಚಲು ನೀ
ಏನನ್ನು ಬಳಸುವೆ, ಯೋಚಿಸು...
ಆಗದು ಎಂದೂ ನಿನ್ನಿಂದ
ನೀ ಹುದುಗಿಸಿದಷ್ಟು ನಾ
ಚಿಗುರುವೆ, ಚಿಗುರುವೆ
ನಿನ್ನಯ ಮನದಲ್ಲಿ
ಸದಾ ಹಸಿರಾಗಿ ನಿನ್ನ ಉಸಿರಾಗಿ.
ಗುರುವಾರ, ಡಿಸೆಂಬರ್ 16, 2021
ತಾಳ್ಮೆ
ಹಿಡಿದ ತಾಳ್ಮೆಯ ಬತ್ತಿ
ಉರಿಯುತ್ತಲೇ ಇದೆ
ಆಗಾಗ ತಂಗಾಳಿ
ಆರಿಸಲೆಂದೋ ಉರಿಯನ್ನು
ಹೆಚ್ಚಿಸಲೆಂದೋ
ಬೀಸುತ್ತಲೇ ಇರುತ್ತದೆ
ಹಗಲು, ರಾತ್ರಿಗಳಲ್ಲೂ
ಬತ್ತಿ ಪ್ರಕಾಶಿಸುತ್ತಿತ್ತು
ವಾಯುರಾಯ ತನ್ನ ಪ್ರಭೆ
ಹೆಚ್ಚಿಸಿ ನಗುವಿನ ಅಲೆ
ಬೀರಿದ.
ಅದನ್ನೂ ಬಾಚಿ ತಬ್ಬಿ
ತನ್ನೊಳಗೆ ಬಚ್ಚಿಟ್ಟು
ಬತ್ತಿ ಇನ್ನಷ್ಟು ಪ್ರಜ್ವಲಿಸಿತು
ಬತ್ತಿಯಲ್ಲಿ ಬೆರೆತ
ಗಾಳಿ ತನ್ನಲ್ಲಿಯ ಗುಣ
ಬದಲಿಸಿ ಮತ್ತೆ ನಗುವಿನ
ಅಲೆ ಬೀರಿತು.
ಭಾವನೆಗಳು
ಕೊಳದಲ್ಲಿ ಭಾವನೆಗಳಿಗೆ
ಮುಳುಗಲು ಕಲಿಸುತ್ತಿದ್ದೇನೆ
ಮುಳುಗಿ ಮುಳುಗಿ
ಈಜ ಬಯಸಿದಾಗ
ಮತ್ತೆ ಮುಳುಗಿಸುತ್ತೇನೆ
ಮುಳುಗಿ ಮುಳುಗಿ
ಮತ್ತೆ ತೇಲ ಬಯಸಿದಾಗ
ಕತ್ತು ಹಿಸುಕಿ
ಉಸಿರುಗಟ್ಟಿಸಿದಾಗ
ಕಣ್ಣಂಚಿನ ನೀರಾಗಿ ಹರಿದು
ಅದೇ ಕೊಳವನ್ನು ಸೇರಿ
ಶಾಂತವಾಗುತ್ತವೆ.
ನನ್ನ ದಿನ
ಆಸೆಗಳು ಸತ್ತ ದಿನ
ನಾನು ಹುಟ್ಟಿದ ದಿನ
ನಿರೀಕ್ಷೆಗಳು ನೀರು ಕುಡಿದ ದಿನ
ನಾನು ಮರುಜನ್ಮವೆತ್ತಿದ ದಿನ
ಸ್ವತಂತ್ರವನ್ನು ಕಂಡುಕೊಂಡ ದಿನ
ನಾನು ನಾನಾದ ದಿನ
ಏಕಾಂತಕ್ಕೆ ಜೋತುಬಿದ್ದ ದಿನ
ನನ್ನಲ್ಲಿಯ ಬೆಳಕು ಸ್ಫೋಟಿಸಿದ ದಿನ
ಭಾವನೆಗಳನ್ನು ಮೆಟ್ಟಿನಿಂತ ದಿನ
ಸಮಸ್ತವನ್ನು ಗೆದ್ದು ನಿಂತ ನನ್ನ ದಿನ
ಶುಕ್ರವಾರ, ಡಿಸೆಂಬರ್ 3, 2021
ಹೆಣ್ಣು
ಹೆಣ್ಣು
ಆದರೆ ಕುಂಕುಮವಿರಬೇಕಂತೆ
ಹೆಣ್ಣಂತೆ ಅವಳು
ಜೇಡರ ಬಲೆಯ ಜಡೆ ಇರಬೇಕಂತೆ
ಹೆಣ್ಣಂತೆ ಅವಳು
ನರಿಗೆಗಳೆಲ್ಲ ಮಣ್ಣಾಗುವವರೆಗೂ
ಬಾಗುತ್ತಿರಬೇಕಂತೆ
ಹೆಣ್ಣಂತೆ ಅವಳು
ಜನ್ಮ ಸಾರ್ಥಕತೆಯ
ಮಕ್ಕಳಿರಬೇಕಂತೆ
ಹೆಣ್ಣಂತೆ ಅವಳು
ನೌಕರಿ, ಸೌಕರ್ಯಗಳ
ಉಸಾಬರಿ ಬೇಕಿಲ್ಲವಂತೆ
ಹೆಣ್ಣಂತೆ ಅವಳು
ಮನೆಯೊಳಗೆ ಆಕಾಶ ನೇಯ ಬೇಕಂತೆ
ಹೆಣ್ಣಂತೆ ಅವಳು
ಬಯಕೆ ಬಾಣಲೆ ಬೇಯಿಸಿ
ಮನಸ್ಸು, ಕನಸುಗಳ
ಅಡುಗೆ ಮಾಡಿ ಬಡಿಸಬೇಕಂತೆ
ಹೆಣ್ಣಂತೆ ಅವಳು
ಅಧೀನತೆ ಅವಳ ಆ ಜನ್ಮಸಿದ್ಧ ಹಕ್ಕಂತೆ
ಹೆಣ್ಣಂತೆ ಅವಳು
ಸದಾ ನಗುತ್ತಿರಬೇಕಂತೆ
ಕತ್ತಲ್ಲಲ್ಲಿರುವ ಹಣತೆಯಂತೆ
ಹೆಣ್ಣು ಹೂವಂತೆ
ನೋವಲ್ಲೂ ನಗಬೇಕಂತೆ
ಹೆಣ್ಣು ಕೋಮಲೆಯಂತೆ
ಸ್ವಾತಂತ್ರ್ಯ ಬಳಿ ಸುಳಿಯಬಾರದಂತೆ
ಈ ಹೂವು, ಹಾವುಗಳ
ಲೆಕ್ಕಾಚಾರವೆಲ್ಲ ಎಷ್ಟು ದಿನ?
ಶರಣೆಂಬ ಅಸ್ತ್ರ
ಕತ್ತರಿಸಿ, ಧೈರ್ಯ ವೆಂಬ
ಅಸ್ತ್ರಕ್ಕೆ ಕೈ ಚಾಚುವವರೆಗೆ.
ಹೆಣ್ಣು
ಹೆಣ್ಣು
ಆದರೆ ಕುಂಕುಮವಿರಬೇಕಂತೆ
ಹೆಣ್ಣಂತೆ ಅವಳು
ಜೇಡರ ಬಲೆಯ ಜಡೆ ಇರಬೇಕಂತೆ
ಹೆಣ್ಣಂತೆ ಅವಳು
ನರಿಗೆಗಳೆಲ್ಲ ಮಣ್ಣಾಗುವವರೆಗೂ
ಬಾಗುತ್ತಿರಬೇಕಂತೆ
ಹೆಣ್ಣಂತೆ ಅವಳು
ಜನ್ಮ ಸಾರ್ಥಕತೆಯ
ಮಕ್ಕಳಿರಬೇಕಂತೆ
ಹೆಣ್ಣಂತೆ ಅವಳು
ನೌಕರಿ, ಸೌಕರ್ಯಗಳ
ಉಸಾಬರಿ ಬೇಕಿಲ್ಲವಂತೆ
ಹೆಣ್ಣಂತೆ ಅವಳು
ಮನೆಯೊಳಗೆ ಆಕಾಶ ನೇಯ ಬೇಕಂತೆ
ಹೆಣ್ಣಂತೆ ಅವಳು
ಬಯಕೆ ಬಾಣಲೆ ಬೇಯಿಸಿ
ಮನಸ್ಸು, ಕನಸುಗಳ
ಅಡುಗೆ ಮಾಡಿ ಬಡಿಸಬೇಕಂತೆ
ಹೆಣ್ಣಂತೆ ಅವಳು
ಅಧೀನತೆ ಅವಳ ಆ ಜನ್ಮಸಿದ್ದ ಹಕ್ಕಂತೆ
ಹೆಣ್ಣಂತೆ ಅವಳು
ಸದಾ ನಗುತ್ತಿರಬೇಕಂತೆ
ಕತ್ತಲ್ಲಲ್ಲಿರುವ ಹಣತೆಯಂತೆ
ಹೆಣ್ಣು ಹೂವಂತೆ
ನೋವಲ್ಲೂ ನಗಬೇಕಂತೆ
ಹೆಣ್ಣು ಕೋಮಲೆಯಂತೆ
ಸ್ವಾತಂತ್ರ್ಯ ಬಳಿ ಸುಳಿಯಬಾರದಂತೆ
ಈ ಹೂವು, ಹಾವುಗಳ
ಲೆಕ್ಕಾಚಾರವೆಲ್ಲ ಎಷ್ಟು ದಿನ?
ಶರಣೆಂಬ ಅಸ್ತ್ರ
ಕತ್ತರಿಸಿ, ಧೈರ್ಯ ವೆಂಬ
ಅಸ್ತ್ರಕ್ಕೆ ಕೈ ಚಾಚುವವರೆಗೆ.
ಹಠ
ಹಠ
ಕುಳಿತ ಮರದ ಮಣ್ಣಿನಲ್ಲಿ
ಹಸಿರು ಭಾವ ಮಿಂಚಿದಂತಾಗಿ
ಮನವು ಅಗೆದು ತೆಗೆಯ ಬಯಸಿತು
ಬಿಸಿಲ ಝಳದಿ ಬರಡು
ಭಾವನೆಗಳ ಅಗೆತ
ಬಿಡದ ಛಲದಿ ಹಠಕ್ಕೆ
ನೇತು ಬಿದ್ದು
ತೂರಿ ತೂರಿ ಅಗೆದೆ
ಗುಂಡಿ ಆಳವಾಗಿ ಇಣುಕಿ
ಹಠವು ಮಣ್ಣಿನಲ್ಲಿ ಮಲಗಿ,
ನಕ್ಕು ನುಡಿಯಿತು
ಬರಡು ಬರಡು ಮಡಿಲಿನಲ್ಲಿ
ಸಿಗುವುದುಂಟೆ ಹಸಿರ ಪಸೆಯು
ಕಣ್ಣನೀರೆ ನಿನಗೆ ಬುತ್ತಿ
ಗಟ್ಟಿ ಮಾಡು ನಿನ್ನತನವ
ಎಂದು ಬತ್ತದಂತೆ
ನಿನ್ನ ಭಾವ ಸ್ಫೂರ್ತಿ.
ಬುಧವಾರ, ಅಕ್ಟೋಬರ್ 6, 2021
ಬಾಪುವಿನೊಂದಿಗೆ, ನನ್ನ ಕೆಲವು ಮನದಾಳದ ಮಾತುಗಳಿವೆ.
ನೀವೇನೋ ಸ್ವಾತಂತ್ರ್ಯಕ್ಕೆ ಹೋರಾಡಿ, ಸ್ವಾತಂತ್ರ್ಯದ ಬೀಜ ಬಿತ್ತು ಹೋದಿರಿ, ಆದರಿಂದು ಸ್ವಾತಂತ್ರ್ಯವೇ ಅರ್ಥ ಕಳೆದುಕೊಂಡು, ಕೆಲವು ವಿಷಯಗಳಿಗೆ ಹಾಗೂ ಕೆಲವರಿಗೆ ಮಾತ್ರ ಸೀಮಿತವಾಗಿದೆ.
ಅಹಿಂಸೆಯ ದಾರಿ ತೋರಿದಿರಿ, ಆದರೆ ನೀವು ಜನಗಳಿಗೆ ಮಾನಸಿಕವಾಗಿ ಹಿಂಸಿಸುವುದೂ ಮಹಾಪಾಪವೆಂದು ತೋರಿಸಿಕೊಡಲಿಲ್ಲ
ಮಾನವೀಯ ಮೌಲ್ಯಗಳಿರಬೇಕೆಂದೇನೂ ಹೇಳಿದಿರಿ, ಆದರಿಂದು ಜನಗಳಲ್ಲಿ ಪ್ರೀತಿ, ಕರುಣೆ, ತ್ಯಾಗ, ಅನುಕಂಪ, ಸಹಾನುಭೂತಿ, ತಾಳ್ಮೆಗಳೆಲ್ಲವೂ ಬುಡಸಮೇತ ಕಿತ್ತು ಬಿದ್ದುಕೊಂಡಿವೆ.
ಪ್ರಚಾರ, ಹೊಗಳಿಗೆ, ಅನ್ಯಾಯ, ಭ್ರಷ್ಟತೆ, ಮೋಸ, ವಂಚನೆಗಳಿಗೆ ಆಶ್ರಯ ನೀಡಿವೆ.
ನೀವೇ ಯೋಚಿಸಿ..... ನಿಮ್ಮ ಕನಸಿನ ದೇಶದ ವ್ಯವಸ್ಥೆಯು, ಸ್ವಲ್ಪ ಮಟ್ಟಿಗಾದರೂ ಸರಿಯಾಗಲು , ಜನ ಮನಗಳಲ್ಲಿ ನೀವು ಮತ್ತೆ ಮೊಳಕೆಯಾಗಿ ಚಿಗುರೊಡೆಯಬೇಕಾದ ಅನಿವಾರ್ಯತೆ ಎಷ್ಟಿದೆ ಎನ್ನುವುದನ್ನು ಬಾಪು.
ಕೆಲಸಬೇಕಾಗಿದೆ
ಕಸಗುಡಿಸುವ
ಕೆಲಸಬೇಕಾಗಿದೆ, ಆ ಕಚೇರಿಯಲಿ
ಆ ಒಲವ ನೋಡಲು
ಅದರ ಚೆಲುವ ಸವಿಯಲು
ಅಂತರ್ಯ ಸ್ವಚ್ಛವಾಗಲು
ಆ ಒಂದು ಕಚೇರಿಯಲಿ
ಒಲವಿಂದ ಉಸಿರಾಡುತ್ತಿರುವ
ಹಸಿರಿನ ಅರಿವನ್ನು
ನಾ ಉಸಿರಾಡಲು
ಕೆಲಸ ಬೇಕಾಗಿದೆ, ಆ ಕಚೇರಿಯಲಿ
ಒಲವು ಮೌನದಲಿ
ಪ್ರತಿಭಟಿಸುತ್ತಿರುವ
ಶಿಷ್ಟತೆಯ , ಮಾರ್ದನಿಯಾಗಿ
ಧ್ವನಿಸಲು ಕೆಲಸಬೇಕಾಗಿದೆ
ಆ ಕಚೇರಿಯಲಿ
ಒಲವಲ್ಲಿ ತುಂಬಿರುವ
ಗಾಂಭೀರ್ಯವನು ಅಳೆದು
ಕುಡಿದು ಹೊರಹೊಮ್ಮಿದ ಹೂವಾಗಲು
ಕೆಲಸಬೇಕಾಗಿದೆ, ಆ ಕಚೇರಿಯಲಿ
ಒಲವಿನ ಕಣ್ಣಲ್ಲಿ ಕಣ್ಣಾಗಿ
ಮಾತಲ್ಲಿ ಮಾತಾಗಿ
ಸುತ್ತಲಿನ ಸಾಂಗತ್ಯವಾಗಿ
ಅದರ ಚಪ್ಪಲಿಯ ಧೂಳಾಗಿ
ಅದರಂತೆ ಶಾಂತಿ ಸೌಹಾರ್ದದ
ಮೂರ್ತಿಯಾಗಲು
ಕೆಲಸಬೇಕಾಗಿದೆ, ಆ ಕಚೇರಿಯಲ್ಲಿ
ಕಸಗುಡಿಸುವ ಕೆಲಸಬೇಕಾಗಿದೆ.
ಅಮ್ಮ
ಪಾಪ ಅಮ್ಮ , ಎಂದು
ಅನ್ನಿಸಲೇ ಇಲ್ಲ
ಉರಿಮುಖದ ಸಹಾನುಮೂರ್ತಿಯ
ಒಳಗಿನ ಭಾವ ಎಂದೂ
ಅರಿಯಲೇ ಇಲ್ಲ, ಅರಿತ್ತದ್ದು ಒಂದೇ
ವಟ ವಟ ಎನ್ನುವ ಬೈಗುಳ
ರೋಗಕ್ಕೆ ನಂಟು ಬಿದ್ದು
ಬೆವರಲ್ಲೇ ಉಣ ಬಡಿಸಿದರೂ
ಕಂಡಿದ್ದು ನನ್ನ ಹಸಿವಷ್ಟೆ
ಮೊಳಕೆಯೊಡೆದ ಅದೆಷ್ಟೋ
ತನ್ನೊಳಗನ್ನು ಸಂಸಾರದ
ಕೆನ್ನಾಲಗೆಯಲ್ಲಿ ಅದ್ಹೇಗೆ
ಚಿವುಟಿರಬಹುದು?
ಸೊರಗಿ ಮೂಡಿದ ಸೀರೆಯ
ನೋವಿನ ನೆರಿಗೆಗಳನು
ಅಮ್ಮ, ಎಂದಿಗೂ ಬಿಚ್ಚಿ
ಹರಡಲಿಲ್ಲ
ನಕ್ಕು ಹರಡಿದರೂ ಅದ
ಅರಿಯುವ ಗೋಜು
ಯಾರಿಗಿರಲಿಲ್ಲ
ಒಮ್ಮೆ ಅಲ್ಲಿಂದ ಕಾಲ್ಕಿತ್ತರೆ
ಸಾಕೆನ್ನುತ್ತಿದ್ದ ಮನವಿಂದು
ಘಾಸಿಗೊಂಡು ಉರಿವ
ಅದೇ ಕರಿನೆರಳ
ಪಾಪ ಪ್ರಜ್ಞೆಯ ಭಾಸದಲಿ.
ಸ್ವಾತಂತ್ರ್ಯ
ನಿನಗೊಂದು ಸ್ವಇಚ್ಚೆಯ ಪ್ರಶ್ನೆ
ಉತ್ತರಿಸುವೆಯ ಅಪ್ಪಿ...
ಸ್ವಾತಂತ್ರ್ಯಕ್ಕೆ ರೆಕ್ಕೆ ಬರುವುದು
ಯಾವಾಗ...?
ಪ್ರತಿ ಮನೆ -ಮನಗಳು
ಮಸಣದಿಂದೆದ್ದು ಹೊರಬರುವುದು
ಯಾವಾಗ...?
ಕಳ್ಳಗಿಂಡಿಯಲ್ಲಿ ಸದಾ ಬಗ್ಗಿ ನೋಡುವ
ಸ್ವಾತಂತ್ರ್ಯ, ಮುಖಾಮುಖಿಯಾಗುವುದು
ಯಾವಾಗ..?
ತಳ್ಳುವಿಕೆ, ನೂಕುವಿಕೆಗೆ ನಾಚುವ ಸ್ವಾತಂತ್ರ್ಯ
ರಾರಾಜಿಸುವುದು ಯಾವಾಗ...?
ಹೆಣ್ಮಕ್ಕಳ ಹಣೆಯಗಲದ ಕುಂಕುಮದಲಿ
ಮಾತಾಗುವುದು ಯಾವಾಗ...?
ಹೆಂಗಳೆಯರ ಕಾಲ್ಗೆಜ್ಜೆಯಲಿ
ನಲಿದಾಡುವ ದನಿಯಾಗುವುದು
ಯಾವಾಗ...?
ಕಂಬಗಳಲಿ ಮುಗಿಲ್ನೋಡುತ
ಪಟ ಪಟನೆ ಕೈ ಬೀಸಿ ಕರೆಯುವ
ಬಾವುಟಕ್ಕೆ ಅರ್ಥದ ಗಾಳಿ
ಸ್ಪರ್ಶಿಸುವುದು ಯಾವಾಗ..?
ಸ್ವಾತಂತ್ರ್ಯಕ್ಕೂ ಸ್ವಾತಂತ್ರ್ಯ
ಮುತ್ತಿಕ್ಕುವುದು ಯಾವಾಗ..?
ನನ್ನ ದೇಶ, ಬಾಪು ಬಯಸಿದ
ಸ್ವಾತಂತ್ರ್ಯ ಕೊಡುವುದು ಯಾವಾಗ..?
ಉತ್ತರಿಸುವೆಯ ಅಪ್ಪಿ.....?
ತೂತು
ಬಚ್ಚಲ ತೂತು ದೊಡ್ಡದಾಯಿತೆಂದು
ಚಿಕ್ಕದು ಮಾಡಲು ಪ್ರಯತ್ನಿಸಿದೆ
ಮರುದಿನ ಅದರ ಸುತ್ತೆಲ್ಲಾ ಬಿರುಕುಗಳು
ಅದನ್ನೂ ಮುಚ್ಚಿ, ಉಸಿರು ಬಿಡುವಲ್ಲಿಗೆ
ಇಲಿರಾಯ ಒಂದು ಚಿಕ್ಕ
ಬಿಲ ಕೊರೆದು ಓಡಾಡಿದ
ಮಗನ ಬೆರಳು ಸಿಕ್ಕಿಕೊಂಡರೆಂದು
ಮಣ್ಣು ಹಾಕಿ ಸಮ ಮಾಡಿದೆ
ಕಣ್ಣು ಮುಚ್ಚಿ ಬಿಡುವುದರೊಳಗೆ
ಇರುವೆಗಳು ಸಾಲು ಸಾಲು
ಇದರ ಗೋಜೆ ಬೇಡೆಂದು
ಅಲ್ಲಿಗೊಂದು ಬೋರ್ಡು
ನೇತುಹಾಕಿದೆ
ಎಲ್ಲಾ ಕ್ರಿಮಿಗಳಿಗೂ
ಇಲ್ಲಿ ಸ್ಥಳಾವಕಾಶವಿದೆ
ಸವಾಲುಳ್ಳ ದೊಡ್ಡ ಕ್ರಿಮಿಗಳಿಗೆ
ಹೆಚ್ಚು ಪ್ರಾಶಸ್ತ್ಯ
ಹಾಗೂ ಸತ್ಕರಿಸುವಿಕೆಯೇ
ಉತ್ತರವಾಗಿರುವುದೆಂದು.
ಸೋಮವಾರ, ಸೆಪ್ಟೆಂಬರ್ 20, 2021
ಗ್ರಾಮೀಣ ಸಮುದಾಯ
"ಗ್ರಾಮೀಣ ಸಮುದಾಯ " ಎಷ್ಟೊಂದು ವಿಶಾಲ ಅರ್ಥಕೊಡುವ ಪದ. ಪದದಷ್ಟೇ ವಿಶಾಲ ಮನಸ್ಸಿನ, ಚಿಂತನಾಶೀಲ, ಪ್ರಜ್ಞಾವಂತ ಜನಗಳಿದ್ದರೆ ಸಮಸ್ಯೆಗಳು ಸುಲಭವಾಗಿ ಪರಿಹಾರ ಕಾಣುತ್ತವೆ.
ಎಲ್ಲಿ ಜನರ ಆಲೋಚನೆಗಳು, ಚಿಂತನೆಗಳು, ಕಾರ್ಯ ಚಟುವಟಿಗಳು, ಆಚಾರ, ವಿಚಾರಗಳು ಉನ್ನತ ಮಟ್ಟದಲ್ಲಿರುತ್ತವೆಯೋ , ಅಲ್ಲಿಯ ಶಾಲೆ, ಶಾಲೆಯ ವಾತಾವರಣವೂ ಸಹ ಉನ್ನತಮಟ್ಟದಲ್ಲಿರುತ್ತವೆ . ಒಂದು ಸಮುದಾಯ ಶಾಲೆಯ ಸಮಸ್ಯೆ /ಕೊರತೆಯನ್ನು ನೀಗಿಸುವಂತಿರಬೇಕೇ ಹೊರತು, ಹುಟ್ಟು ಹಾಕುವಂತಿರಬಾರದು.
ಶಾಲೆಗಳ ವಿಷಯದಲ್ಲಿ ಸಮುದಾಯಗಳ ಪಾತ್ರ ಮಹತ್ವದ್ದು, ಅದರ ಅರಿವು ಅಲ್ಲಿಯ ಜನಸಮುದಾಯಕ್ಕಿರಬೇಕು. ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ದ್ವೇಷ, ಒಳರಾಜಕೀಯ, ಒಳಸಂಚು, ಜಾತೀಯತೆ, ಸ್ವ ಪ್ರತಿಷ್ಠೆ ಗಳಿಗೆ ಶಾಲೆ ಒಳಗಾಗುತ್ತಿರುವುದು ಖಂಡಿಸಲಸಾದ್ಯವಾದ ಶೋಚನೀಯ ವಿಷಯ. ಎಲ್ಲಿ ಸಮುದಾಯದ ಜನ ಪ್ರಜ್ಞಾಹೀನರಾಗಿರುತ್ತಾರೋ, ಅಲ್ಲಿ ಅರಾಜಕತೆ ಹಾಗು ಮೂರ್ಖತನದ ಕಾರ್ಯಗಳು ಮೈತುಂಬಿ ಕುಣಿದಾಡುತ್ತವೆ.
ಸ್ವ ಪ್ರತಿಷ್ಠೆಗಳನ್ನು ಶಾಲೆಗಳಲ್ಲಿ ಬೇಯಿಸಿಕೊಳ್ಳಲು ಅವಕಾಶ ನೀಡುವ ಅಥವಾ ತಮ್ಮ ಮೂರ್ಖತನದ ಅಮಲಿನ ನಶೆಯನ್ನು ಶಾಲೆಯಲ್ಲಿ ಪ್ರದರ್ಶಿಸಲು, ಕೈ ಬೀಸಿ ಕರೆಯುವ ಮಟ್ಟಿಗೆ ಶಿಕ್ಷಕ ವರ್ಗವೂ ಬುದ್ಧಿಹೀನವಾಗಬಾರದು.
ಶಾಲೆ ವಿದ್ಯಾದೇಗುಲ. ಅದನ್ನು ವಿದ್ಯಾದೇಗುಲವಾಗಿಯೇ ನೋಡುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು.
ಜನರು, ಸಮುದಾಯ /ಶಾಲೆಯ ಹಿತಚಿಂತಕರಾಗಬೇಕೇ ವಿನಃ ಘಾತುಕರಾಗಬಾರದು.
ತಿಳಿದೋ, ತಿಳಿಯದೆಯೋ ಪ್ರೋತ್ಸಾಹಿಸುತ್ತಿರುವ ಪೋಷಕರು ಒಳಸಂಚುಗಳ ಬಗ್ಗೆ ಸ್ವಲ್ಪ ಚಿಂತಿಸಿದರೆ ಅದರಲ್ಲಿರುವ ಮರ್ಮಗಳು ಅರಿಯುತ್ತವೆ.
ಎಲ್ಲಕ್ಕಿಂತ ಹೆಚ್ಚಾಗಿ ಪೋಷಕರಲ್ಲಿ ಒಡೆದು ಮೂಡಬೇಕಾದ ಜ್ಞಾನೋದಯ.... ಇವೆಲ್ಲದುದರ ದುಷ್ಪರಿಣಾಮ ಯಾರ ಮೇಲೆ..?
ಮಂಗಳವಾರ, ಸೆಪ್ಟೆಂಬರ್ 14, 2021
ಸೋಮವಾರ, ಜುಲೈ 12, 2021
ಸ್ನೇಹಿತೆ
ಸ್ನೇಹಿತೆಯ ಕೈಯಲ್ಲಿದ್ದ
ಬೆಂಕಿಯನ್ನು ಕುರಿತು ಕೇಳಿದೆ
ಎಲ್ಲಿಂದ ತಂದಿರುವೆ..?
ಪಕ್ಕದ ಮನೆಯಿಂದ
ಎಂದಳವಳು ನಗುನಗುತ
ನನ್ನ ನಿನ್ನ ಮೈಯ
ಕಾವು ಆ ಬೆಂಕಿಯನ್ನು
ಕ್ಷಣಮಾತ್ರದಲ್ಲಿ
ನಂದಿಸಿಬಿಡುವಷ್ಟಿದೆ
ಎಂದೆನವಳಿಗೆ
ಕಣ್ಣೊಳಗಿನ ಕಾವು ಹೊರ
ಹಾಕುತ್ತಾ ಬಿಟ್ಟ ಕಣ್ಣು,
ಬಾಯಿ ಬಿಟ್ಟಂತೆ
ಸ್ನೇಹಿತೆ ಸ್ತಬ್ಧ.
ಶನಿವಾರ, ಜೂನ್ 19, 2021
ಅಂಶ
ನೀ ನನ್ನೊಳಗೆ ಬೆಳೆಯಬೇಕಿತ್ತು
ಬೊಜ್ಜಾಗಿಯೋ
ತ್ಯಾಜ್ಯವಾಗಿಯೋ ಅಲ್ಲ
ನನ್ನಾತ್ಮದ ಬುದ್ಧನಾಗಿ
ಪ್ರತಿ ಉಸಿರಾಡದಲಿ
ನಿನ್ನಂಶದ ತಾಳ್ಮೆಯಾಗಿ
ಕಸಿವಿಸಿ ಮೊಳಕೆಗಳ
ಹಸಿರಂಶವಾಗಿ
ದೃಢತೆ ಕಾಯದ ಹೆಮ್ಮರವಾಗಿ
ಹಾರಾಡಿ, ಕಾಲ್ಕಿತ್ತು ಓಡುವ
ನನ್ನೊಳಗಿಗೆ ಲಗಾಮುದಾರನಾಗಿ.
ಶುಕ್ರವಾರ, ಜೂನ್ 11, 2021
ಕನಸುಗಳು
ನಾ ಕಂಡ ಕನಸುಗಳಲಿ
ನೇವರಿಸುವ ನೆತ್ತಿಗಳಿರಬೇಕಿತ್ತು
ಕನಸುಗಳಿಗೆ ಬಲೆ ಹೆಣೆದು
ದಾರಿ ತೋರುವ ಕಲ್ಪನೆಯ
ಹೊತ್ತಿಗೆಗಳಿರಬೇಕಿತ್ತು
ಮಾತುಗಳಿಗೆ ಹಿತ ತುಂಬುವ
ತುಟಿಗಳಿರಬೇಕಿತ್ತು
ವಾಸ್ತವಕ್ಕೆ ಚಿಮ್ಮಿ ನಿಲ್ಲುವ
ಪಾದಗಳ ಸ್ಪರ್ಶವಿರಬೇಕಿತ್ತು
ಸೂಕ್ಷ್ಮಕ್ಕೆ ಸೂಕ್ಷ್ಮ ತಿಳಿಸುವ
ಅರಿವುಗಳಿರಬೇಕಿತ್ತು
ಭಾವಕ್ಕೆ ನಂಟು ಬೆಸೆಯುವ
ಮಿಡಿತಗಳಿರಬೇಕಿತ್ತು
ರಾಗಕ್ಕೆ ಲಯ ಬೆಸೆಯುವ
ತಾಳ ಸಿಗುವಂತಿರಬೇಕಿತ್ತು
ಸುಮ್ಮನೆ ಕೂತಾಗ ಸ್ಪರ್ಶಿಸಿ
ಛೇಡಿಸಿ ಹೋಗುವ ತಂಗಾಳಿಯ
ಸಾಂಗತ್ಯವಿರಬೇಕಿತ್ತು
ಏನಿಲ್ಲದಿದ್ದರೂ
ನಿನ್ನಲ್ಲಿಯ ಬುದ್ಧನ ಸಾಮರಸ್ಯದ
ಹಿತ ಸ್ಪರ್ಶ ಸ್ವಲ್ಪವಾದರೂ
ಇರಬೇಕಿತ್ತು.
ಹೆಪ್ಪು
ನೀ ಅಂದು ನಕ್ಕೆ.. !
ಗಾಣದಲ್ಲಿ ಸಿಕ್ಕಿದ ನಗು ಹೆಪ್ಪುಗಟ್ಟಿ ತಿರುಗಿತು
ಗಾಣ ನಿಂತರೂ ಸವೆದ ದಾರಿಗಳು ಮಾಸಿಲ್ಲ
ತಿರುಗುತ್ತಲೇ ಇವೆ
ಒಳಗಿಳಿದ ಅದರ ಬೇರುಗಳು
ನಾ ನಕ್ಕು ಚಿಗುರೊಡೆಯಲು
ಇಂದೂ ಕಾಯುತ್ತಲೇ ಇವೆ.
ಗುರುವಾರ, ಜೂನ್ 3, 2021
ಎಲ್ಲರು ಅವನನ್ನು ಹುಚ್ಚನೆಂದೇ ಕರೆಯುತ್ತಿದ್ದರು, ನೋಡಲು ಸರಿಸುಮಾರು ಹಾಗೆಯೇ. ಎಣ್ಣೆ ಕಂಡು ವರ್ಷಗಳೇ ಕಳೆದಿದ್ದ ಕೂದಲು, ಎಂದೂ ತೆಗೆಯದ ಆ ಕಪ್ಪು ಬಿಳಿ ಗಡ್ಡ, ಚರಂಡಿಯ ಕೊಳಚೆಯೂ ನಾಚುವಂತ ಕೊಳಕಲು ಬಟ್ಟೆ, ಸ್ನಾನ, ಏನೆಂಬುದನ್ನೇ ಅರಿಯದ ದೇಹ,ಎಣ್ಣೆಯ ವಾಸನೆಯನ್ನು ಕಂಡಿರದ ಕೂದಲು, ಹೆಗಲ ಮೇಲೆ ಸದಾ ಸಂಗಾತಿಯಾಗಿದ್ದ ಒಂದು ಚೀಲ, ಹೀಗೆ ಆ ವ್ಯಕ್ತಿ ಕಾಣಸಿಗುತ್ತಿದ್ದ ದೈನಂದಿನ ಚಿತ್ರಣ.
ಸಿಕ್ಕ ಸಿಕ್ಕಲ್ಲಿ ವಸ್ತುಗಳನ್ನು ಚೀಲಗಳಲ್ಲಿ ತುಂಬುವುದು, ಕಂಡ ಕಂಡ ಮನೆಯ ಹೊರಗೆ ಸಿಕ್ಕಿದ್ದನ್ನೆಲ್ಲಾ ಕದಿಯುವುದು, ಕೆಟ್ಟ ಕೆಟ್ಟ ಮಾತುಗಳಲ್ಲಿ ಜನರನ್ನು ಬೈಯುತ್ತಾ ನಡೆದಾಡುತ್ತಿದ್ದ ಆ ವ್ಯಕ್ತಿಯನ್ನು ನೋಡಿ ಜನ, ವ್ಯಕ್ತಿಯನ್ನು ಹುಚ್ಚನೆಂದು ಕರೆಯುತ್ತಿದ್ದರು. ಹಾಗೆಯೇ ಕಳ್ಳತನ ಮಾಡುತ್ತಿದ್ದ ಕಾರಣಕ್ಕಾಗಿ, ಆಗಾಗ್ಗೆ ಜನಗಳಿಂದ ಹೊಡೆತದ ರುಚಿಯನ್ನು ಕಂಡಿದ್ದರೂ ಕಳ್ಳತನ ಬಿಡುತ್ತಿರಲಿಲ್ಲ. ಬಹುಶಃ ಹಸಿವಿನ ದಾಹ ಮತ್ತು ಕುಡಿತದ ಚಟವನ್ನು ನೀಗಿಸಲು.
ನಾನು ಆ ವ್ಯಕ್ತಿಯನ್ನು ಗಮನಿಸಿದ ಹಾಗೆ ಸಂಬಂಧಿಗಳಿದ್ದು, ಮದುವೆಯ ಗೋಜಿರಲಿಲ್ಲವಾದ್ದರಿಂದ ಏಕಾಂಗಿಯಾಗಿದ್ದರು. ಸಣ್ಣ ಪಟ್ಟಣವೆಂದು ಗುರುತಿಸಿಕೊಳ್ಳುವ , ತಾರಸಿ, ಬಹುಅಂತಸ್ತಿನ ಮನೆಗಳ ಮಧ್ಯೆ ಇದ್ದ, ತನ್ನ ಪಾಳುಮನೆಯಲ್ಲಿ ವಾಸ. ಆ ಮನೆಯೊಳಗೋ ಕದ್ದು ತಂದಿದ್ದ ಏನೇನೋ ವಸ್ತುಗಳು, ಬಟ್ಟೆ, ಪಾತ್ರೆ, ದೊಡ್ಡ ಕಲ್ಲುಗಳು, ಮೂಟೆಗಳು ಕಾಫಿ ಬೀಜ, ಮೆಣಸು, ಶುಂಠಿ, ಹೀಗೆ ಏನೇನೋ. ಈ ಕದ್ದು ತಂದ ವಸ್ತುಗಳನ್ನು ಅಂಗಡಿಯಲ್ಲಿ ಮಾರುವುದು, ಅವರು ಕೊಟ್ಟ ಅಲ್ಪ -ಸ್ವಲ್ಪ ಹಣದಲ್ಲಿ ಕುಡಿದು, ಆ ಪಾಳು ಮನೆಯೊಳಗೆ ಶವಾಸನ ಹಾಕಿ ಮಲಗುವುದು.
ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಎದ್ದು ಅವರಿವರ ಮನೆಯ ಹಿತ್ತಲು ಹುಡುಕುವುದು, ಆ ವ್ಯಕ್ತಿಯ ದಿನಚರಿಯಾಗಿತ್ತು.ಈ ದಿನಚರಿ ಕೊರೋನಾ ಲಾಕ್ಡೌನ್ ದಿನಗಳಲ್ಲೂ ಮುಂದುವರೆದಿತ್ತು. ಆದರೆ ಎಂದೂ ಆ ವ್ಯಕ್ತಿ ಮಾಸ್ಕ್ ಮೊರೆ ಹೋದವರಲ್ಲ. ಹಾಗೆ ಕೊರೋನಾ ಸಹ ಅವರ ಬಳಿ ಬಂದಿದ್ದಿಲ್ಲ. ಆದರೆ ಮೂರು ದಿನಗಳಿಂದ ಸದಾ ಬೀದಿಯಲ್ಲಿ ಸುತ್ತಾಡುತ್ತಿದ್ದ ಆ ವ್ಯಕ್ತಿ ಕಾಣುತ್ತಿರಲಿಲ್ಲ. ಅಂತಹ ವ್ಯಕ್ತಿಯ ಬಗ್ಗೆ ಯಾರು ತಾನೇ ತಲೆಕೆಡಿಸಿ ಕೊಂಡಾರು?
ಯಾವಾಗ ಆ ಪಾಳುಮನೆಯಿಂದ ಕೆಟ್ಟ ವಾಸನೆ ಅಕ್ಕ ಪಕ್ಕದ ಮನೆಗೆ ಬಡಿಯಿತೋ,ಅನುಮಾನಾಸ್ಪದದಿಂದ ಒಳ ಹೊಕ್ಕು ನೋಡಿದಾಗ ಎಲ್ಲರ ಅನುಮಾನ ನಿಜವಾಗಿತ್ತು, ಹುಚ್ಚನೆಂದು ಕರೆಸಿಕೊಳ್ಳುತ್ತಿದ್ದ ವ್ಯಕ್ತಿ ಸತ್ತು ದಿನಗಳು ಕಳೆದಿದ್ದವು.
ಸಂಬಂಧಿಕರು, ಬೆಲೆಬಾಳುವ ಆಸ್ತಿ, ಹಲವಾರು ಲಕ್ಷಗಳನ್ನು ಇಟ್ಟಿದ್ದ( ಜನಗಳ ಮಾತು ), ಇಷ್ಟೆಲ್ಲಾ ಇದ್ದಾರು, ಆ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆದದ್ದು, ಗ್ರಾಮ ಪಂಚಾಯಿತಿಯಿಂದ ಒಂದು ಗೂಡ್ಸ್ ಆಟೋ ನಲ್ಲಿ ತೆಗೆದುಕೊಂಡು ಹೋಗಿ ಹೂತರು.
ಆ ವ್ಯಕ್ತಿಯ ದುರ್ದೈವ ಅಷ್ಟೆಲ್ಲಾ ಬೆಲೆಬಾಳುವ ಆಸ್ತಿ ಇದ್ದರೂ ವಿದ್ಯೆ, ಸಾಮಾನ್ಯ ತಿಳುವಳಿಕೆ ಇಲ್ಲದೆ, ಒಂದು ದಿನವೂ ಸಾಮಾನ್ಯ ಜನಗಳಂತೆ ಬಾಳದೆ ಅನಾಥ ಶವವಾಗಿ ಜೀವಬಿಟ್ಟಿದ್ದು.
ಹುಚ್ಚನಿಗೆ ಕೊರೋನಾ, ಕುಡಿದ ಮತ್ತಿನಲ್ಲಿ ಬಿದ್ದು ತಲೆಗೆ ಪೆಟ್ಟು ಬಿದ್ದಿದೆ, ಹೀಗೆಲ್ಲ ಸತ್ತ ಕೆಲವು ದಿನಗಳ ನಂತರ ಜನಗಳು ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದರು. ಆದರೆ ಆ ವ್ಯಕ್ತಿ ಜನಗಳು ಹೇಳುವಂತೆ ಹುಚ್ಚನಾಗಿರಲಿಲ್ಲ. ಅವನ ವೇಷ ಭೂಷಣಗಳಷ್ಟೇ ಹುಚ್ಚಾಗಿದ್ದವು.
ಬುಧವಾರ, ಜೂನ್ 2, 2021
ಉಯಿಲು
ಕೊಟ್ಟು ಬಿಡಿ ನಿಮ್ಮಲಿ
ಚಾಚುತ್ತಿರುವ ಕೆನ್ನಾಲಿಗೆಯ ಕಿಚ್ಚುಗಳಿಗೆ
ನನ್ನ ವಿಳಾಸವನು
ದೇವರು ನನ್ನ ಹೆಸರಿಗೆ ಉಯಿಲು
ಬರೆದು ಅದರ ಮೇಲೆ ನನ್ನ
ಹೆಸರು ಅಂಟು ಹಾಕಿದ್ದಾನೆ ಎನ್ನಲಾಗಿದೆ
ನುಂಗಲು |ನೀರು ಕುಡಿಯಲು
ದಣಿವಾರಿಸಿ ಕೊಳ್ಳಲು |ತಿಂದು ತೇಗಲು
ಹಾ....., ಮರೆಯದಿರಿ
ನಿಮ್ಮ ಅಕ್ಕ ಪಕ್ಕದವರು, ಪರಿಚಿತರಿಗೆ
ನನ್ನ ವಿಳಾಸ ಕೊಡಲು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...
-
ನನ್ನನ್ನು ದೀರ್ಘವಾಗಿ ಓದಿಸಿದ ಪ್ರೀತಿಯ ಪುಸ್ತಕ ಕುವೆಂಪುರವರ "ಮಲೆಗಳಲ್ಲಿ ಮದುಮಗಳು " ಕಾದಂಬರಿ. 712 ಪುಟಗಳಿರುವ ಈ ಬೃಹತ್ ಕಾದಂಬರಿಯಲ್ಲಿ ಪಾತ್ರವ...
-
ಕ್ಷಮಿಸು ಎಂಬುದು ಆಗಾಗ್ಗೆ ಮರುಕಳಿಸುವ ಮಾರ್ದನಿ ನಮ್ಮ ಮನುಕುಲದೊಳಗೆ ಹಿಂಜರಿಕೆ, ಮುಗ್ಗರಿಕೆಗಳಿಲ್ಲ ಕ್ಷಮಿಸುವಿಕೆಯ ಅರಿವು ಪರಿವಿನ ಪಟ್ಟಿಯಲ್ಲಿ ಮುಲಾಜು ರಿಯಾಯಿತಿಗಳಿಲ...
-
ನೀ ಅಂದು ನಕ್ಕೆ.. ! ಗಾಣದಲ್ಲಿ ಸಿಕ್ಕಿದ ನಗು ಹೆಪ್ಪುಗಟ್ಟಿ ತಿರುಗಿತು ಗಾಣ ನಿಂತರೂ ಸವೆದ ದಾರಿಗಳು ಮಾಸಿಲ್ಲ ತಿರುಗುತ್ತಲೇ ಇವೆ ಒಳಗಿಳಿದ ಅದರ ಬೇರುಗಳು ನಾ ನಕ್ಕು ಚಿಗ...
























