ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಶನಿವಾರ, ಜನವರಿ 23, 2021

ಬುಧವಾರ, ಜನವರಿ 20, 2021

ಕವಿತೆಗಳು

ಇತ್ತೀಚೆಗೇಕೋ ಕವಿತೆಗಳು
ನನ್ನೊಂದಿಗೆ ಮುನಿಸು -ಮುಷ್ಕರಗಳ
ತಗಾದೆ ತೋರಿ, ಬೆವೆತು ನೀರಾಡಿ
ಮಾಸು ಮಾಸಾಗುತ್ತಿವೆ
ಕವಿತೆಗಳಲ್ಲಿ ಗುಳ್ಳೆಗಳ್ಳೆದ್ದು
ಚರ್ಮ ಸುಲಿದೇಳುತ್ತಿದ್ದರು
ಅಕ್ಷರಗಳು ಪದಗಳಾಗುತ್ತಿಲ್ಲ
ಪದಗಳು ಸಾಲುಗಳಾಗಿ ತೋರುತ್ತಿಲ್ಲ
ಕಲ್ಪನೆಗಳು ಕೂಸಾಗುತ್ತಿಲ್ಲ
ಗತಕಾಲ ಅರಸುತ್ತಿರುವ ಭಾಸ
ಬಾ ಎಂದರೂ ಬರಲಾರದೆ
ಸೆಡ್ಡು ಹೊಡೆದು ಹೆಪ್ಪುಗಟ್ಟಿ ನಿಂತು
ಸುಟ್ಟು ಬೇಯುತ್ತಿರುವ ಭಾವನೆಗಳೊಂದಿಗೆ 
ಕರಕಲಾದರೂ,  ರಾಜಿ ಸಂಧಾನಗಳ 
ತಗಾದೆಗಳು  ಏರ್ಪಡದಿದ್ದರು 
ಶರಣಾಗತಿಯ ಶಯನ ಬಯಸಿ 
ಖಿನ್ನತೆಯ ಲೋಕದಲ್ಲಿ ನಿಂತಾಗ ನಾ 
ಹರಿಯುತ್ತವೆ ಹನಿ ಹನಿಯಾಗಿ 
ಬಿಳಿಯ ಹಾಳೆಯ ಮೇಲೆ. 



ಬುಧವಾರ, ಜನವರಿ 13, 2021

ಸೂರ್ಯ

ಸೌರಮಂಡಲ ಶೋಭಿತ ನಕ್ಷತ್ರ ನಮ್ಮ ವೈವಸ್ವತ. ತಾನು ಉರಿದು ಜಗಕ್ಕೆಲ್ಲ ಬೆಳಕು ಕೊಡುವುದು ಅರ್ಕನ ಸ್ವಭಾವತಃ ಕರ್ತವ್ಯ ಒಪ್ಪುವ, ಆದರೆ ಆಯಾಸಗೊಂಡಾಗ, ಭೂಮಿ ಆತಂಕದ  ಭೂಕಂಪ, ಜ್ವಾಲಾಮುಖಿಯ  ಸೃಷ್ಟಿಯಲ್ಲಿ ಕರಗುತ್ತಿದೆ ಎಂಬುದನ್ನು ಅರಿತು ಬೆಳಗಿದರೆ ಸೌರಮಂಡಲದ ಒಡೆಯ ಮತ್ತಷ್ಟು ಶೋಭಿತನಾಗುತ್ತಾನೆ. 


ಮಂಗಳವಾರ, ಜನವರಿ 12, 2021

ಕೊಡಗಿನ ಗವಿಸಿದ್ಧೇಶ್ವರ ಬೆಟ್ಟ

ಭಾರತದ ಸ್ಕಾಟ್ಲ್ಯಾಂಡ್ ಎಂದು ಕರೆಸಿಕೊಳ್ಳುವ ಕರ್ನಾಟಕದ ಒಂದು ಪುಟ್ಟ ಜಿಲ್ಲೆ ಕೊಡಗು. ಕೊಡಗಿನ ಸೋಮವಾರಪೇಟೆ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮ ಆಗಳಿ. ಈ ಗ್ರಾಮವು ನಿಸರ್ಗ ರಮಣೀಯತೆಯಿಂದ ಕಂಗೊಳಿಸುತ್ತಿದೆ .ಈ ನಿಸರ್ಗ ಸೌಂದರ್ಯದ ಒಡಲಲ್ಲಿರುವುದೇ ಗವಿಸಿದ್ಧೇಶ್ವರ ಬೆಟ್ಟ. ಈ ಬೆಟ್ಟಕ್ಕೆ ಕಟ್ಟೆಪುರ ಮೀಸಲು ಅರಣ್ಯದ ನಡುವೆ ಹಾದು ಹೋಗಬೇಕು.

ಈ ಅರಣ್ಯವು ತುಂಬಾ ದಟ್ಟತೆಯನ್ನು,ಇಂದು ಉಳಿಸಿ ಕೊಂಡಿಲ್ಲವಾದರೂ ರಸ್ತೆಯಲ್ಲಿ ಸಾಗುವಾಗ ತಂಪಾದ ವಾತಾವರಣ ಮನಕ್ಕೆ ಹಿತನೀಡುತ್ತದೆ.   ಗವಿಸಿದ್ಧೇಶ್ವರ ಬೆಟ್ಟಕ್ಕೆ ಸಾಗುವ ಹಾದಿಯಲ್ಲಿ ಕಾಡುಬಸವ ಹೆಸರಿನಲ್ಲಿ ಕರಿಸಿಕೊಳ್ಳುವ ಚಿಕ್ಕದಾದ ದೇವರಗುಡಿ ಒಂದು ಕಾಣಸಿಗುತ್ತದೆ. ಈ ಗುಡಿಯು ತನ್ನದೆಯಾದ ವಿಶಿಷ್ಟ್ಯವನ್ನು ಹೊಂದಿದ್ದು,

ಇಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಪ್ರಕೃತಿಯ ಮಧ್ಯದಲ್ಲಿ ಮಲಗಿ ವಿಶ್ರಮಿಸಿರುವಂತೆ ಭಾಸವಾಗುವ ಮನೋಜ್ಞವಾದ ಕೆರೆಯೊಂದು ಕಾಣಸಿಗುತ್ತದೆ.

ದಂಡಿನ ಬಾವಿ ದಳವಾಯಿ ಕೆರೆ. ಹಿಂದೆ ಕೊಡಗಿನ ರಾಜನಾಗಿದ್ದ ವೀರರಾಜ ಮತ್ತು ಅವನ ಸೇನಾಧಿಕಾರಿಗಳು (ರಾಜನ ದಂಡು -ಸೇನೆ) ಸಿದ್ಧೇಶ್ವರ ದೇವರ ಆಣತಿಯಂತೆ ಒಂದು ರಾತ್ರಿಯಲ್ಲಿ ಕೆರೆಯನ್ನು ನಿರ್ಮಾಣ ಮಾಡಿದ್ದರಿಂದ, ಈ ಕೆರೆಗೆ ದಂಡಿನ ಬಾವಿ ದಳವಾಯಿ ಕೆರೆ ಎಂದು ಹೆಸರಾಗಿದೆ ಎಂದು ಇಲ್ಲಿನ ಹಿರಿಯ ಗ್ರಾಮಸ್ಥರು ಹೇಳುತ್ತಾರೆ. ಈ ಕೆರೆಯ ಸೌಂದರ್ಯವನ್ನು ಮನ ತುಂಬಿಕೊಂಡು ಮುಂದೆ ಸಾಗಿದರೆ, ರಸ್ತೆಯ ಬಲಭಾಗಕ್ಕೆ ಕಾಣುವ ಕವಲು ದಾರಿಯಲ್ಲಿ ಸ್ವಲ್ಪ ದೂರ ಪ್ರಯಾಣಿಸಿದರೆ, ನಮ್ಮನ್ನು ಎದುರ್ಗೊಳ್ಳುವುದೇ ಮನೋಹರವಾದ ಬಂಡೆಗಳಿಂದ ಕೂಡಿದ ಗವಿಸಿದ್ಧೇಶ್ವರ ಬೆಟ್ಟ .

ಅಲ್ಲಿನ ಸುತ್ತಲಿನ ಪ್ರದೇಶವೂ ದೇವರ ಕಾಡು ಎಂದು ಕರೆಸಿಕೊಳ್ಳುತ್ತದೆ. ಹೆಬ್ಬಂಡೆಗಳ ನಡುವಿರುವ ಈ ಬೆಟ್ಟವನ್ನು, ಅಲ್ಲಿಯ ಹಕ್ಕಿ -ಪಕ್ಷಿಗಳ ಕಲರವ, ಚಿಲಿಪಿಲಿ ನಾದವನ್ನು ಆಲಿಸುತ್ತಾ, ಪ್ರಕೃತಿ ಸೌಂದರ್ಯ ವನ್ನು ಆರಾಧಿಸುತ್ತಾ, ಬೆಟ್ಟವನ್ನು ಕಡಿದು ನಿರ್ಮಿಸಿರುವ ಮೆಟ್ಟಿಲುಗಳನ್ನು ಏರುತ್ತಾ ಹೋದರೆ ಕಾಣಸಿಗುವುದೇ ಸಿದ್ದೇಶ್ವರ ಸ್ವಾಮಿ ದೇವಾಲಯ. ದೇವಸ್ಥಾನದ ಗೋಡೆಗಳು ಪೂರ್ಣಪ್ರಮಾಣದಲ್ಲಿ ನೈಸರ್ಗಿಕವಾಗಿ ರಚನೆಯಾಗಿರುವ ಬಂಡೆಗಳಿಂದ ನಿರ್ಮಿಸಲ್ಪಟ್ಟಿವೆ.

ದೇವಾಲಯದ ಒಳಗೆ ಪ್ರವೇಶಿಸಿದಾಗ ಗವಿಸಿದ್ಧೇಶ್ವರ ಸ್ವಾಮಿ ಮಲಗಿರುವ ಭಂಗಿಯಲ್ಲಿ ಕಾಣಸಿಗುತ್ತದೆ. ಇಲ್ಲಿ ನಾಗದೇವತೆಯು ಹುತ್ತದ ರೂಪದಲ್ಲಿ ನೆಲೆಸಿದ್ದಾಳೆ.



      ದೇವಾಲಯದ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿದ್ದು,ಜನಗಳ ಸದ್ದು-ಗದ್ದಲವಿಲ್ಲದೆ ನಿಶಬ್ದವಾಗಿದ್ದು,  ಪ್ರಕೃತಿಯ ಸೌಂದರ್ಯವು ಮನಸ್ಸಿಗೆ ಮುದನೀಡುತ್ತದೆ. ದೇವಾಲಯದ ಹಿಂಬದಿಯಲ್ಲಿ ನಿಂತು ನೋಡಿದರೆ ಪ್ರಕೃತಿ ದೇವತೆಯೇ ಎದ್ದು ಬಂದಂತೆ ಭಾಸವಾಗುವ ಆ ಕ್ಷಣ ಮೈನವಿರೇಳಿಸುತ್ತದೆ. 

       ಇಲ್ಲಿ ಕಂಡುಬರುವ ಪುರಾತನ ಹೆಬ್ಬಂಡೆಗಳು ಇಲ್ಲಿಯ ಇನ್ನೊಂದು ವಿಶೇಷತೆಗಳಾಗಿವೆ. ಗ್ರಾಮಸ್ಥರ ಅಭಿಪ್ರಾಯದಲ್ಲಿ ಈ ದೇವಸ್ಥಾನದ ಐತಿಹ್ಯವನ್ನು ಹೇಳುವುದಾದರೆ  ಸುಮಾರು 500 ರಿಂದ 600 ವರ್ಷಗಳ ಹಿಂದೆ ಐದು ಜನ ಶರಣರು ಭಿಕ್ಷಾಟನೆ ಮಾಡಿಕೊಂಡು ಈ ಗ್ರಾಮದಲ್ಲಿ ನೆಲೆಸಿದ್ದು, ಈ ಬೆಟ್ಟವು ಹಿಂದೆ ದಟ್ಟಾರಣ್ಯವಾಗಿದ್ದು, ಧ್ಯಾನಕ್ಕೆ ಪ್ರಶಾಂತವಾಗಿದ್ದರಿಂದ ಶರಣರು ಕಾಲಕ್ರಮೇಣ  ಗ್ರಾಮಗಳನ್ನು ತೊರೆದು ಈ ಪ್ರದೇಶಕ್ಕೆ ಬಂದು ಗುಹೆಯಲ್ಲಿ   ನೆಲೆ ಕಂಡುಕೊಂಡರು. 

  ಶರಣರು ಲೋಕ ಕಲ್ಯಾಣಾರ್ಥವಾಗಿ ಈ ಪ್ರದೇಶದಲ್ಲಿ ಶಿವನು ನೆಲೆನಿಲ್ಲಬೇಕಾಗಿ ಶಿವನನ್ನು ಕುರಿತು ತಪಸ್ಸು ಮಾಡಿದಾಗ,  ಅವರ ತಪಸ್ಸಿಗೆ ಮೆಚ್ಚಿ ಸಿದ್ದೇಶ್ವರನ ರೂಪದಲ್ಲಿ ಗವಿ (ಗುಹೆ )ಯಲ್ಲಿ ಐಕ್ಯವಾಗುತ್ತಾನೆ. ಶರಣರು ಸಹ ಸಿದ್ದೇಶ್ವರನ ಸನಿಹದಲ್ಲಿ ಕಲ್ಲುಗಳ ರೂಪದಲ್ಲಿ ಐಕ್ಯವಾಗಿರುವುದನ್ನು ಕಾಣಬಹುದು. ಅಂದಿನಿಂದ  ಇದು ಗವಿಸಿದ್ಧೇಶ್ವರ ಬೆಟ್ಟವೆಂದು ಕರೆಯಲ್ಪಡುತ್ತದೆ. 

ಸಿದ್ಧೇಶ್ವರ ಸ್ವಾಮಿಯ ಮೂರ್ತಿ ಮತ್ತು ಬೆಟ್ಟ ಪ್ರತಿವರ್ಷ ರಾಗಿಕಾಳಿನಷ್ಟು ಬೆಳೆಯಲ್ಪಡುತ್ತಿದೆ ಎಂಬುದು ಗ್ರಾಮಸ್ಥರ ಹೇಳಿಕೆ ಮತ್ತು ನಂಬಿಕೆ. 

       ಪ್ರತಿವರ್ಷ ಶಿವರಾತ್ರಿಯ ಮಾರನೇ ದಿನ  ಎಲ್ಲಾ ಜನಾಂಗದವರು ಸೇರಿ ಜಾತ್ರೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.

           ಜನರು,  ಪಟ್ಟಣಗಳ ಕಿರಿಕಿರಿ ಗದ್ದಲ ಶಬ್ದಗಳಿಂದ ಯಾವಾಗಲೂ ದೂರವಿರುವ ಈ ಬೆಟ್ಟ ನಿಸರ್ಗ ಸೌಂದರ್ಯ ಮತ್ತು ನಿಶ್ಯಬ್ದತೆಯಿಂದ  ಮನಸ್ಸಿನ ಎಲ್ಲಾ ಜಂಜಾಟಗಳನ್ನು ಕ್ಷಣಕಾಲ ದೂರವಿಡಲು ಮತ್ತು ಪೋಟೋಗ್ರಫಿಯನ್ನು  ಅರಸಿ ಬರುವವರಿಗೆ ಒಂದು ಆಹ್ವಾನದಂತೆ ವ್ಯಕ್ತವಾಗುತ್ತದೆ.ಅಪರೂಪಕ್ಕೊಮ್ಮೆ ಎಂಬಂತೆ ಗಜರಾಜರ ದಂಡು ದಾಳಿಮಾಡುತ್ತದೆ ಎಂಬುದನ್ನು ಬಿಟ್ಟರೆ ಇಲ್ಲಿಗೆ ತೆರಳಲು ಬೇರೆ ಇನ್ನಾವುದೇ ಭಯವಿಲ್ಲ.
  
        


ಮಂಗಳವಾರ, ಡಿಸೆಂಬರ್ 15, 2020

ಪ್ರೀತಿ

ನೀ ನನಗೇನಾದರು ಮಾಡಬೇಕೆಂದರೆ
ಯಮನು ನನ್ನ ಪ್ರೀತಿಸಿ ಅಪ್ಪಿದಾಗ
ನನಗೊಂದು ಗೋರಿ ಕಟ್ಟಿಸು
ಹಾ..! ಅದನ್ನು ನೀನು ಮಾತ್ರ ಕಟ್ಟಬೇಕು
ಗಾಜಿನ ಗೋಪುರ ಕಳಶವಾಗಿರಲಿ
ನನ್ನ ಉಸಿರು ನಿನ್ನ ಅದರಲ್ಲಿ ತಾಕುತಿರಲಿ
ಗೋರಿ ಮಾಡುವಾಗ ನನ್ನ ಬಿಟ್ಟು
ಬೇರೇನನ್ನೂ ನೆನೆಯಕೂಡದು, ನನ್ನ
ಪ್ರೀತಿಯ ಪರಿವಿದ್ದರೆ.
ಅದರ ಸುತ್ತ ರಜ ಬೆಳೆಯದಂತೆ ನೋಡಿಕೋ
ನೆನಪಿಟ್ಟುಕೋ ಒಂದು ಹನಿಯೂ ಕಣ್ಣಿಂದ
ಜಾರದಿರಲಿ ನನ್ನ ದಣಿವಾರಿಸಲು 
ನನ್ನನಿಡುವಾಗ ಗೋರಿಯೊಳಗೆ 
ನನ್ನ ಕಣ್ಣುಗಳಲ್ಲಿ ನಿನ್ನ ಪ್ರತಿಬಿಂಬ 
ಅಚ್ಚಾಗಿರಲಿ, ನಿನ್ನ ನಾ ಹಿಂಬಾಲಿಸುವಂತೆ 
ಸ್ಪರ್ಶಿಸಿರದ ಅಧರಗಳನ್ನು ಹಣೆಗೊತ್ತಿ 
ನುಡಿ, ನನ್ನಂಶವಾಗಿ  ಆವಿರ್ಭವಿಸು 
ಸಾಧ್ಯವಾಗದಿದ್ದರೆ ಮರುಗಬೇಡ 
ನಿನ್ನ ವಿಶಾಲ ಮನಸ್ಸಿನ ಆಲಯದಲ್ಲಿ 
ಶಾಶ್ವತವಾಗಿ ಗೋರಿ ಕಟ್ಟಿ ಬಚ್ಚಿಡು 
ಅದಕ್ಕೊಂದು ಜೀವಂತ ಸ್ಮಾರಕ 
ಕಟ್ಟು ನಿನ್ನ ಉಸಿರಿನಿಂದ 
ಹೆಸರಿಡು, ವಾಕ್ಯವನ್ನು ಕಾಣಿಸು 
ನನ್ನ ಕನಸಿನ ಮಗು 
ಗೋರಿಯಲಿ ಚಿರನಿದ್ರೆ ಅರಸಿದೆ. 




ಸೋಮವಾರ, ಡಿಸೆಂಬರ್ 7, 2020

ಹುಟ್ಟು

ಕಾಣದ ವರ್ಣ ಕುಂಚಗಳಲ್ಲಿ
ಅಡಗಿದ್ದ ಚಿತ್ರಕಾರ ಎಚ್ಚೆದ್ದು
ಹೊರ ಬರಲು ತವಕಿಸಿದ
ಇಳಿವಯಸ್ಸಿನ ಅವ್ವನೆಂದಳು
ನೀನಿನ್ನು ಎಳೆಮಿಡಿ ಕೂಸೆ
ಮೌನದಿ ಬಯಸಿ ವರ್ಣವ 
ತಬ್ಬಿ ತಾಳಿದನು 
ವರ್ಣಗಳ ಬಿಸಿ ಕುದಿ ಏರುತಲಿತ್ತು 
ಚಿತ್ರಕಾರ ಅವ್ವನಲ್ಲಿ ಆಹ್ವಾನಿಸಿದ 
ನಾನು ಹೊರಬರಲೇ...?? 
ಅಂತಃಕರಣದ ಮುದಿ ಮನ 
ಉಸುರಿತು ಬೆತ್ತಲೆ ಜಗತ್ತಿನೊಳು 
ಬಂದು ನೀನೇನು ಮಾಡುವೆ..?? 
ಬಿಸಿ ರಕ್ತದೋಕುಳಿ ಹರಿದು 
ಎದೆಯಲ್ಲಿ ಕೊರೆದು ಮೂಡಿರುವ 
ಸತ್ಯ -ಮಿಥ್ಯದ   ನೆರಳು 
ಬೆಳಕು  ಹುಣ್ಣಿನ ಉಬ್ಬು ತಬ್ಬಿನ 
ಚಿತ್ರವನ್ನು ಅಂಟಿಸಿ ಎಲುಬಾಗಿ 
ಜಗತ್ತಿನ ಅಸ್ಥಿಪಂಜರವಾಗುವ 
ಓಕುಳಿ ಖಾಲಿ ಹಾಳೆಯಲಿ ಎಲ್ಲೆಡೆ 
ಚಿಮ್ಮಿ ಹರಿಯುತಿತ್ತು   



ಸೋಮವಾರ, ನವೆಂಬರ್ 23, 2020

ಪಸೆ


ಒಂದು ಹುಳು
ಹಸಿ ಹಸಿಯಾಗಿ ಮಿಣುಕಿ
ಉಸಿರಾಡುತಿತ್ತು
ನುಣುಪು ನುಣುಪಾಗಿತ್ತು
ಪಸೆಯ ಹರಿಸಿ ಭ್ರಮಿಸುತಿತ್ತು
ಅದ ಕಂಡ ಕೊರಕಲು
ಅಭಿಮಾನದಿಂದ ಕುದಿಯಿತು 
ಹುಳುವೂ ಅದರಲಿ ಮಿಂದಿತು 
ದಿನ ದಿನಗಳು ಮೈತಳೆದವು 
ಹುಳುವು ತನ್ನ ಹಸಿ ಪಸೆಯನ್ನು 
ನಿಧಾನವಾಗಿ ಬಿಚ್ಚಿ 
ಬಿಸಿಲಿನ ಬೆಳಕಲ್ಲಿ ಬಿಸುಟಿ
ಏಕಾಂತದಲ್ಲಿ ಮೈ ಚಾಚಿತು 
ಕೊರಕಲು ಇದ ಕಂಡು ಹುಬ್ಬೇರಿಸಿತು 
ಲೋಕದ ಹಾಲ್ಬಣ್ಣವ ಅರಿತು 
ತಾನು ಕುಳಿತಲ್ಲೇ ಕುಸಿದು 
ನೀರಾಗಿ ಮಿಣುಕಿತು 
ಪಸೆಯ ಉಳಿಸಿ ಅಮರತ್ವವ ಕುಡಿಯಿತು 



ಭಾವ

ನನ್ನೊಳಗೆ ನಾ ಹೊಕ್ಕಿ
ನನ್ನೊಂದಿಗೆ ನಾ ಬದುಕಿಕೊಳ್ಳುವೆ
ಯಾರ ಹಂಗಿಲ್ಲ ನನಗೆ
ಮೆಚ್ಚುವ ಪರಿವೂ ಬೇಕಿಲ್ಲ
ಯಾರು ಏನಾದರೂ ಸವಿಯಲಿ
ಅವರವರ ಭಾವಕ್ಕೆ ಅದು ನುಸುಳಿ
ಹುಸಿಯಾಗುತ್ತಿರಲಿ 
ನಾ ಹೀಗೆ ಇರುವೆ 
ಏಕಾಂತರ ಮುಖಿಯಾಗಿ 
ಗೊತ್ತೇ... !
ಏಕಾಂಗಿಯಲ್ಲೂ ನಾ ಬಹುಮುಖಿ 
ಅದ ಅರಿವು ನನ್ನಿಂದ 
ನನಗೆ ಮಾತ್ರ ಸಾಧ್ಯ. 


ಏಕಾತ್ಮ

ನನ್ನೊಳಗಿನ ಕವಿತೆ ಏಕಾತ್ಮ
ಅರಿವಿನ ಪರಮಾತ್ಮ
ಕವಿತೆಯ ಒಡಲ
ಉಸಿರಿನಲ್ಲಿರುವ ಹಸಿರಾಂಶ
ಚಿಗುರೊಡೆಯುತ್ತಲೇ ಹಬ್ಬಿ
ವ್ಯಾಪಿಸಿ ಬಿರಿಯುತ್ತದೆ
ಶಯನದಲ್ಲಿದ್ದರೂ ಅರಸಿ
ರಮಿಸುವ ಸವಿಗನಸಿನ ಏಕಾಂತ
ಪ್ರಶಾಂತತೆಗೆ ಕೈ ಇಟ್ಟಾಗ ಲೇಖನಿಯ
ಶಾಹಿಯಲ್ಲಿ ಬರೆದುಕೊಳ್ಳುತ್ತಾ ಸಾಗಿ
ಕ್ಷಣಮಾತ್ರದಲ್ಲಿ ಸದ್ದಾದರೆ
ಮರೆವಿನ ಗುಳಿ ಹೊಕ್ಕಿ ಮಿಂಚಾಗಿ
ಆಗ-ಈಗ ಸ್ವಲ್ಪ ಇಣುಕಿದರೂ
ಭಾವನೆಗಳ ಭಾವಕ್ಕೆ ಬಿಗಿದಪ್ಪಿ
ತಿಳಿದು ಬಳಿದು ಬಣ್ಣ ಮೆತ್ತಿ
ರೂಪು ನೀಡಿ ಹಡೆಯದೆ 
ಮೈಯಿಳಿಯುತ್ತದೆ 
ಕವಿತೆಯೊಳಗೊಂದು ಕವಿತೆ 
ಉಸಿರಾಡಿ ಬಸಿರ ಅಡಗಿಸಿಟ್ಟ 
ಗ್ರಹಿಕೆಯ ಅರಿವ ಪರಿವು 
ಅವರವರ ಭಾವಾರ್ಥದಲ್ಲಿ 
ಮೇಳೈಸಿ ನಲಿಯುತ್ತಿರುತ್ತದೆ. 


ಶನಿವಾರ, ನವೆಂಬರ್ 21, 2020

ಕವಿತೆ ಭಾವ

ನಗುವೋ ಅಳುವೋ
ಉಸಿರಿಗೆ ಬಸಿರಿನ ಮುನ್ನುಡಿ
ಬಿರಿದ ಮೊಳಕೆ ಬಸರು ಹೊತ್ತು
ಜಗಿದು ಉಗಿದ ಕನಸು ತಿಂದು
ನಿತ್ಯ ನೂರು ಬವಣೆ ಸಹಿಸಿ
ಬಾಳ ಕೂಸು ಒದೆದ ಭಾಸ
ಕಷ್ಟ ಮಾಯವಾಗಿ ದಿವಸ
ಭಾವನೂರು ಉಕ್ಕಿ ಹರಿವ ಒಲವು
ಬಾಳ ದಿನದ ಕನಸು ಸವಿದು
ಬೆವರು ಬಸಿದು
ಉಸಿರು ನೀಡಿ
ರಕ್ತ ಪಸರಿ
ಮಾಂಸ ಹಂಚಿ
ಗಾಯ ಬಿರಿದು
ನೋವು ಚೀರಿ
ಜೀವ ಹಡೆವ, ದೈವ ಮಾತೃ 
ಆತ್ಮದಿಂದ ತಿದ್ದಿ ತೀಡಿ ರೂಪುಕೊಟ್ಟು 
ಅರಿವ ದಾರಿಯನ್ನೇ ತೋರಿ 
ತಾನು ಬತ್ತಿ, ಕಣ್ಣ ನೀರು ಎರೆದು
ಕಂಡ ಫಲದಿ ಜಗದ ಖುಷಿಯ ಮೆರೆವ  
ಸಾರ್ಥಕತೆಯ ಸತ್ತ್ವದಂತೆ 
ತಾಯಿ ಮನದ ನನ್ನ ಕವಿತೆ ಭಾವ. 



ಗುರುವಾರ, ನವೆಂಬರ್ 19, 2020

ಕಡಲ್ಲವ್ವ

ಅಕ್ಕರೆಯ, ಕಾಣದ ಕಡಲ್ಲವ್ವ...
ನನ್ನದೊಂದು ವಿನಮ್ರ ಬೇಡಿಕೆ...
ಕ್ಷಣಕಾಲ ಕೊಂಚ ಭೋರ್ಗರೆಯುವುದಾ.. ನಿಲ್ಲಿಸು
ಓಶಿಯೋಗ್ರಫಿ ಭಾಷೆ ತಿಳಿದಿಲ್ಲ, ಭಾಷೆ ಬಡವಿ
ಬಿಡುವೆಯಾ.. ಒಳಗಿನ ಪಸೆ ಹರಿಯಲು...
ಒರತೆ ಹರಿದಷ್ಟೂ ವಿಶಾಲ, ಹಸಿರು
ಒಡಲೆಲ್ಲ ಜೀವನಿಧಿ ಹೊತ್ತ ವಾರಿಧಿಯೇ...
ಅದೆಷ್ಟು ಹೊಳಪಿನ ನೀಲಿ -ತಿಳಿಯ ಮಿಶ್ರವರ್ಣ
ಉದರದ ವಿಷವನ್ನೆಲ್ಲ ಹೊತ್ತೊಯ್ದು
ತಂದು ಬಿಸಟು ಬೀರುವೆ ನಗೆಯನ್ನು
ನಿನ್ನ ಮಡಿಲಲ್ಲಿ ಗುಳು ಗುಳು ಗುಟ್ಟುತ್ತಿರುವ
ಜೀವರಾಶಿಯಾಗಿ ಬದುಕಿಕೊಳ್ಳಲೆ...?
ಭೋರ್ಗರೆವ ನಿನ್ನ ಶಬ್ದಕ್ಕೆ ದನಿಯಾಗಿ
ನಿನ್ನ ಅಲೆಯಲ್ಲಿ ತೇಲುವ ನೌಕೆಯಾಗಿ
ಇಲ್ಲವೆಂದರೆ ನಿನ್ನಲ್ಲಿನ ಉಪ್ಪಿನ ನಿಯತ್ತಾಗಿ
ನಿನ್ನ ಉಡಿ ಮೊಳಕೆಯಾಗಿ ತಲೆಯೆತ್ತಿ 
ಜಗದ ಮಾದರಿಯನ್ನು ಅರಸರಸಿ 
ನಿನ್ನಲ್ಲಿಯ ತಂಪೆರೆಯುವ ಮನೋಹರತೆ 
ಉಕ್ಕಿ ನಿನ್ನಲ್ಲಿಯ ತಂಗಾಳಿಯಾಗಿ  
ಹೊತ್ತು ಮೂಡುಗೆ, ಕಂತುಗೆಗಳಲ್ಲಿ 
ದಿನಾ  ಮುಳುಗೇಳುವ ಪರಿಯ ಧಿರಿಸು ಧರಿಸಿ 
ಕೊನೆಯವರೆಗೂ ನಾ... ನಿನ್ನಂತೆ 
ವಿಶಾಲ ಪರಿಧಿಯ ಅಲೆಗಳನ್ನು ಹೊತ್ತು 
ಸದಾ ಭೋರ್ಗರೆಯುತ್ತಾ ಮುನ್ನುಗ್ಗುವ
ಸೆಳೆವಿನ ಕುರುಹಾಗಿ, ಒಳವಿನ ಸೆಲೆಯಾಗಿ  
ಸದಾ  ಜನ ಮನದ ಬನಗಳೊಳಗೆ.                                     
                                  

ಮಂಗಳವಾರ, ನವೆಂಬರ್ 10, 2020

ನಂಬಿಕೆ

ನಂಬಿಕೆಯೊಳಗೊಂದು ಅಪನಂಬಿಕೆಯ 
ಗಿಡ ಬೆಳೆದು ಬೇರು ಬಿಟ್ಟಿಹುದು 
ಅದರ ತುಂಬೆಲ್ಲ ನನ್ನ ಹಸಿರಿನ 
ಉಸಿರು ತುಂಬಿದ್ದೇನೆ 
ಕಣ್ಣು ತುಂಡರಿಸೋಣವೆಂದರೆ 
ರಕ್ತ ಒಸರುತ್ತದೆ 
ಕಾಂಡ ಕತ್ತರಿಸಲು ಒಡಲು 
ಬರಿದಾಗಿ ಬತ್ತುತ್ತದೆ 
ರಕ್ತದಲ್ಲೆಲ್ಲಾ ಪಸರಿಸಿರುವ 
ಬೇರನ್ನೇ ಚಿವುಟಿ ಬಿಡಲು
ಜೀವವೇ ಅಳಿಯುತ್ತದೆ 
ಏನು ಮಾಡಲಿ.....?? 



ಅವ್ವ

ಅವ್ವ ಬೆಂಕಿ ಹಚ್ಚಿ ಬೇಯುತಿಹಳು 
ತನ್ನ ಗಂಟಲೇ ಹೊಗೆ ಕೊಳವೆಯಾಗಿಸಿ 
ತನ್ನವರಿಗಾಗಿ ಉಸಿರಾಗಿ ಊದಿ ಊದಿ 
ಬೆಂಕಿಯನ್ನು ಧಗ ಧಗನೇ ಹತ್ತಿಸಿರುವಳು 
ಆಸೆ ಆಕಾಂಕ್ಷೆಯ  ಕನಸುಗಳನು ಬೆಂಕಿಯಲ್ಲಿ 
ಬೇಯಿಸಿ, ಜ್ವಾಲೆಯಲ್ಲಿ ಕೆಂಪೇರಿಹಳು 
ಅಗ್ನಿಯೊಂದಿಗಿನ ಈಜಿ ಮೀಯುವಿಕೆಯಲ್ಲಿ 
ನನ್ನವ್ವ ಬೆಂಕಿಗೂ ಕಿಡಿಯಾಗಿಹಳು 
ಕೆಂಡವ ತನ್ನ ಬೆಂದ ಚರ್ಮಕ್ಕೆ ಅಂಟಿಸಿಕೊಂಡು 
ತನ್ನೊಳಗೆ ಉರಿದ ಅದೆಷ್ಟೋ ಬೆಳಕಿನ ಕಿಡಿಗಳನ್ನು 
ತನ್ನ ಸೆರಗೊಳಗೆ ಬಚ್ಚಿಟ್ಟು ತಾನು ಸುಡುವ 
ರೊಟ್ಟಿಗೆ ಭವಿಷ್ಯದ ತಾಳೆ ಹಾಕುತಿಹಳು 
ಮೂಗು -ಮೂಗುತಿಯರು ಹೊಗೆ ಗೂಡಿನ 
ಒಡೆಯ -ಒಡತಿಯರಾದರೂ 
ಪ್ರೇಮ ನಂದಿಲ್ಲ ಅವಳಲ್ಲಿ 
ನಂದುವುದೂ ಇಲ್ಲ, ಅವ್ವನ ಮಿಡಿತ 
ತನ್ನವರ ಭಾವವಷ್ಟೆ !
ಅವ್ವನ್ನಲ್ಲಿರುವ ಬೂದಿಯಂತೆ ಶಾಂತತೆಯ 
ಕೆದಕುತಿಹಳು ಮತ್ತೆ ಅದರಲ್ಲೆ ಬೆಂಕಿ 
ಮಾಡಿ ಮನೆ -ಮನವ ಹಚ್ಚಿ 
ಅವ್ವನ ಬೆಳಕಿನ ಅನಂತತೆ ಎಂದೆಂದಿಗೂ ಹೀಗೆ 
ಜಗದ -ಜನಮನಗಳಲ್ಲಿ ಹಬ್ಬಿ ಹರಡುವಲ್ಲಿ ಜಾಗೃತಗೊಳ್ಳುತ್ತಿರಲಿ. 




ಶುಕ್ರವಾರ, ನವೆಂಬರ್ 6, 2020

"ಗಾಯದ ಹೂವುಗಳು "



"ಗಾಯದ ಹೂವುಗಳು 2015 ರ  ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ" ಪಡೆದ ಕೊಡಗಿನ ಯುವಕವಿ  ಕಾಜೂರು ಸತೀಶ್ ರವರ ಮೊದಲ ಸಂಕಲನ ಎಂಬುದು ನಮ್ಮಲ್ಲರಿಗೂ ಹೆಮ್ಮೆಯ ವಿಷಯ.  ಫಲ್ಗುಣಿ ಪ್ರಕಾಶನದಲ್ಲಿ ಪ್ರಕಟಣೆಗೊಂಡು ಖ್ಯಾತ ಕವಿಗಳಾದ ಶ್ರೀ ವಾಸುದೇವ ನಾಡಿಗ್  ರವರ ಮುನ್ನುಡಿ ಬರೆಸಿಕೊಂಡು ಶ್ರೀ ಪ್ರವೀಣ ಕುಮಾರ ದೈವಜ್ಞಾಚಾರ್ಯ ರವರ ಭರವಸೆಯ ಬೆನ್ನುಡಿ ಲೇಪಿಸಿಕೊಂಡಿರುವ ಕವನ ಹೊತ್ತಿಗೆ. 
                                         ಕವಿತೆಯೆಂದರೇನೆಂದೇ 
                                                             ತಿಳಿಯದ, 
                         ನನ್ನನ್ನೇ ಉಸಿರಾಡಿಕೂಳ್ಳುತ್ತಿರುವ
                                                   ಅಪ್ಪ -ಅಮ್ಮನಿಗೆ.         ಎಂಬ ಕವಿಯ ಅರ್ಪಣಾಭಾವದಿಂದ ಅರ್ಪಿಸಿಕೊಳ್ಳುತ್ತ ಹೋಗುತ್ತದೆ. 

"ಒಂದು ದಿನ ನನ್ನೊಳಗಿನ ಬೇಗುದಿಗಳಿಗೆ ಬೇರುಹುಟ್ಟಿ ಕಾಲ್ಬೆರಳ ತುದಿಯಿಂದ ನೆತ್ತಿಗೆ ಹಬ್ಬಿಕೊಳ್ಳತೊಡಗಿದಾಗ, ಕವಿತೆಯ ತೆಕ್ಕೆಯೊಳಗೆ ಬಿದ್ದೆ "ಎಂದು  ಮುನ್ನುಡಿ ಬರೆದು ಕೊಳ್ಳುವ ಕವಿ, ಕವಿತೆಗಳನ್ನು ಹೆರುವ ಪರಿಯೇ ವಿಭಿನ್ನ. 

 ಇರುವೆ, ಒಂಟಿ, ಊದುಕೊಳವೆ, ಖಾಲಿಡಬ್ಬ, ಚಪ್ಪಲಿಗಳು, ಮಾತು, ಮೌನ ಮತ್ತು ಕವಿತೆ, ಮರಣದ ಹಾಡು, ಹಾವು, ಮೈಲಿಗೆ, ಬೀದಿಯ ಕವಿತೆ, ಕಿಟಕಿ ತೆರೆದು ಕುಳಿತೆ, ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ, ನೆಲವಿಲ್ಲದವನ ಉಯಿಲು, ಬೇಲಿ, ನದಿ, ಕಾಡು ಕವಿತೆ, ಮಿಕ್ಕವರಾರನ್ನೂ ಹೀರಕೂಡದು, ಒಂದು ಅರ್ಜಿ ಮತ್ತು ಹದಿನಾಲ್ಕು ತಿಂಗಳು, ನೀನು ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು, ಕಡಲಾಚೆಯ ಹುಡುಗಿಗೆ, ಈ ರಾತ್ರಿಗಳಲ್ಲಿ ನಿದ್ರಿಸಲಾರೆ, ನಾವಿಬ್ಬರು ತೀರಿಕೊಂಡ ಮೇಲೆ,ಒಲೆ ಮತ್ತು ಅವ್ವ, ಅರ್ಥವಾಗಿರಬಹುದು, ನೀನು ನನ್ನ  ಜೊತೆ ಬದುಕಿಕೊಳ್ಳಬಹುದು, ಬೋನ್ಸಾಯ್ ಸ್ವಗತ, ಭಿಕ್ಷುಕ ಕವಿಯ ಕವಿತೆಗಳಲ್ಲದ ಸಾಲುಗಳು, ಅಸ್ವಸ್ಥ ಕವಿತೆಗಳು, ನೋಟೀಸು, ಸಲಾಮು, ನನ್ನ ಕವಿತೆ, ಬಲಿ, ಆಕಾಶ ಧುಮ್ಮಿಕ್ಕುತ್ತಿದೆ ನೀರಾಗಿ, ಇರಲಿ, ಅಪ್ಪ ಮತ್ತವನ ಹತ್ಯಾರಗಳು, ಎಲ್ಲ ಅಮಾವಾಸ್ಯೆಗಳಲ್ಲೂ ಪದ್ಯವೊಂದಿರಲಿ ಬೆಳಕಿಗೆ, ಸಾವು, ಗಾಯದ ಹೂವುಗಳು, ಆಲ್ಬಮ್, ಯಾರದಿದು? ಇನ್ನೂ ಬದುಕಿರುವ ಕವಿತೆಗಳು, ಮೊದಲ ರಾತ್ರಿಯಂದು, ನನ್ನ ಮಿತ್ರರೆಲ್ಲಾ ಹಾಯಾಗಿದ್ದಾರೆ, ನಿನಗೆ, ಕೊಳದ ಬಳಿಯ ಮರ, ಹಸಿಮೀನು ಮತ್ತು ನನ್ನ ಕವಿತೆ, ಎಡ ಮತ್ತು ಬಲ, ಮಧ್ಯರಾತ್ರಿಯ ನಂತರದ ಮಳೆ, ಶಬ್ದ ಸಮರ, ಮರ, ಕಸದ ತೊಟ್ಟಿಯ ಕಾಗದದ ಲೋಟಗಳು, ಪರೀಕ್ಷೆ, ಉಯಿಲು. 

ಈ ಮೇಲಿನ 53 ಹೂವುಗಳಿರುವ ಹೂಗುಚ್ಛ "ಗಾಯದಹೂವುಗಳು".ಪ್ರತಿಯೊಂದು ಹೂವುಗಳೂ ಗಾಯದ ಹೂವುಗಳಾಗಿ ಅರಳಿ, ಸುತ್ತೆಲ್ಲಾ ಪರಿಮಳ ಸೂಸುತ್ತಾ ಎಲ್ಲರನ್ನು ಆಕರ್ಷಿಸಿ ಘಮಘಮಿಸುತ್ತಿರುವ ಪ್ರೀತಿಯ ಪಾರಿಜಾತಗಳಾಗಿವೆ.

ಕೇಳಿಸಿಕೊಳ್ಳಿ 
ಒಂದು ಇರುವೆ ಸತ್ತಿದೆ 
ನನ್ನ ಕಾಲ ಬುಡದಲ್ಲಿ 
        
      ಎನ್ನುವ ಕವಿಯು ಸಮಾಜದ ವ್ಯವಸ್ಥೆ, ಶ್ರೀಮಂತವರ್ಗ,ಹತಾಶೆಗಳನ್ನು ಕಡಿಮೆ ಪದಗಳಲ್ಲಿ ಅತಿಸೂಕ್ಷ್ಮವಾಗಿ ಶಬ್ಧ ಸಂವೇದನೆಯಿಂದ  ಪ್ರಸವಿಸಿದ್ದಾರೆ. 

 ಸತೀಶ್  ರವರ ಕವಿತಗಳನ್ನು ಓದುತ್ತಾ ಹೋದರೆ ಅವು ಬರಿ ಕವಿತೆಗಳಾಗಿ ಅಭಿವ್ಯಕ್ತವಾಗುವುದಿಲ್ಲ. ಅವುಗಳು ಅವರು ಬದುಕಿಕೊಳ್ಳಲು ಹಡೆದ ಮಕ್ಕಳಾಗಿವೆ. ಕವಿಗೆ ಕವಿತೆಗಳೇ ಬದುಕಿನ ಭರವಸೆಯ ಮೌಲ್ಯಗಳು. 

ಚಪ್ಪಲಿಗಳು ನಾವು ಎಂದೆಂದೂ ಬಹಿಷ್ಕ್ರತರು 
ಮಸೀದಿ ಮಂದಿರ ಇಗರ್ಚಿಗಳಿಗೂ ಅಸ್ಪೃಶ್ಯರು 
ಇತಿಹಾಸದ ಚರ್ಮ ಸುಲಿದು ಒಣಗಿಸಿ ನಮ್ಮ ಸೃಷ್ಟಿ 
  
    ಈ ಕವಿತೆಯಲ್ಲಿ ಮೌಢ್ಯ, ಜಾತೀಯತೆ, ಮೇಲು -ಕೀಳು ಮನೋಧೋರಣೆ, ಅಸಹಾಯಕತೆ, ಬಡತನ, ಅಸ್ಪೃಶ್ಯತೆ, ಸಮಾಜದ ವ್ಯವಸ್ಥೆಯ ಬಗ್ಗೆ ಇರುವ ಅತೃಪ್ತಿಯನ್ನು ಚಪ್ಪಲಿಗಳು ಕವಿತೆಯ ಮೂಲಕ ಧನ್ಯತಾ ಭಾವದಲ್ಲಿ ಕವಿತೆಯಾಗಿ ಹಡೆದಿದ್ದಾರೆ. 

ಕಡಲಿನ ಆಚೆ ಬದಿಯಲ್ಲಿ 
ನಿನ್ನದೊಂದು ತೊಟ್ಟು ರಕ್ತ 
ಈಚೆಬದಿಯಲ್ಲಿ ನನ್ನದೊಂದು ತೊಟ್ಟು ರಕ್ತ 
ಚೆಲ್ಲಿ ಬಿಡೋಣ 
 
ಕವಿ ಕವಿತೆಗಳಲ್ಲಿ ಬಳಸಿರುವ ರೂಪಕಗಳು, ಪ್ರತಿಮೆ, ಸಾಂಕೇತಿಕ ಭಾಷೆ ಪ್ರತಿಯೊಂದು ಅವರು ಕವನ ಹೆರುವ ರೀತಿಗೆ ಉದಾಹರಣೆ. 

ಹಸಿದ ಜಿಗಣೆಯೇ 
ಬಾ ಹೀರು ನನ್ನನ್ನು 
ಸ್ವಲ್ಪದರಲ್ಲೇ ನೀನು 
ದ್ರಾಕ್ಷಿಯಾಗಿ ಉದುರುತ್ತೀ 

  ಕವಿಯ ಜಿಗಣೆಯೊಂದಿಗೆ ನಿಜಕ್ಕೂ ಸೋಜಿಗವೆನ್ನಿಸುತ್ತದೆ.ಮಿಕ್ಕವರಾರನ್ನೂ ಹೀರಕೂಡದು ಎಂದು ಹೇಳುವ ಪರಿ, ಕವಿಗೆ ಇತರರ ಮೇಲಿರುವ ಉದಾರತೆ, ಕಾಳಜಿ, ವಿಶಾಲ ಮನೋಭಾವವನ್ನು ಗೋಚರಿಸುತ್ತದೆ.

ಸತೀಶ್ ರವರ ಕವಿತೆಗಳು ಹಸಿವು, ಬಡತನ, ಸಮಾಜದ ಅವ್ಯವಸ್ಥೆ, ಮೋಸ, ವಂಚನೆ, ಭ್ರಷ್ಟಾಚಾರ, ಹತಾಶೆ, ಜಾತೀಯತೆ, ಅಸಮಾನತೆ, ಪ್ರೀತಿ -ಪ್ರೇಮ, ಪ್ರಕೃತಿಯ ಬಗ್ಗೆ ಕಾಳಜಿ, ಪ್ರಕೃತಿ ವಿನಾಶದ ಬಗ್ಗೆ ಅಸಮಾಧಾನ ಹೀಗೆ ಸುಗಂಧ ಬೀರುತ್ತಾ ಒಂದೊಂದು ಕವಿತೆಯು ಸೂಕ್ಷ್ಮ ಸಂವೇದನೆಯೊಂದಿಗೆ ಮೊಗ್ಗಾಗಿ ಜೀವನದ ಆಳವಾದ ಅನುಭವದೊಂದಿಗೆ ಅರಳುತ್ತಾ ಹೋಗಿವೆ. 

ಕವಿತೆಗಳು ರೋಷದಿಂದ ತಲ್ಲಣಿಸುವಂತೆ  ಭಾಸವಾದರೂ ಆರೋಗ್ಯಯುತ ಸಮಾಜ ರೂಪುಗೊಳ್ಳಲು ಬದಲಾವಣೆಗಳಿಗಾಗಿ ಮಿಡಿಯುವ ತುಮುಲವೆನಿಸುತ್ತದೆ ನನಗೆ.

ಕವಿತೆಗಳನ್ನು ವ್ಯಾಖ್ಯಾನಿಸುವುದಕ್ಕಿಂತ  ಅವುಗಳನ್ನು ಸವಿದರೆ ಅವುಗಳಲ್ಲಿನ ಕವಿಯ ಸಾಹಿತ್ಯ ಅಭಿವ್ಯಕ್ತಿಯ ಪರಿಚಯವಾಗುತ್ತದೆ. 

ಮಲೆಯಾಳಂ,ಇಂಗ್ಲೀಷ್ ಭಾಷೆಗಳ ಸಾಹಿತ್ಯದ ರುಚಿವುಂಡು ಅನುವಾದಗಳಲ್ಲಿ  ತೊಡಗಿದ್ದರೂ(ಮಲಯಾಳಂ ಅನುವಾದಿತ ಕವಿತೆಗಳ ಸಂಕಲನ" ಕಡಲ ಕರೆ"ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟವಾಗಿದೆ) ಕನ್ನಡವನ್ನು ಹೆಚ್ಚು ಪ್ರೀತಿಸಿ ಗುರುತಿಸಿಕೊಂಡಿರುವುದು ಸತೀಶ್ ರವರ ಹೆಚ್ಚುಗಾರಿಕೆ. 

  'ದೊಡ್ಡವರ ಶಿಫಾರಸ್ಸಿಲ್ಲದೆ ಬಹುಮಾನ ದಕ್ಕುವುದಿಲ್ಲ'
 ಎಂಬ ಕವಿಯ ನಿಲುವನ್ನು ಹುಸಿಯಾಗಿಸಿ ಅವರ ಕವಿತ್ವ ಜ್ಞಾನಕ್ಕೆ ಪ್ರಶಸ್ತಿಯನ್ನು ದಕ್ಕಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಹೀಗೆ ಅವರ ಸಾಹಿತ್ಯದ ತೇರು ಗಾಯದ ಹೂವುಗಳಿಂದ ಅರಳಿ ದೊಡ್ಡ ಹೆಮ್ಮರವಾಗಿ ಹಲವರಿಗೆ ಆಶ್ರಯವಾಗುವ ದೀವಿಗೆಯಾಗಲಿ ಎಂಬುದೇ ಸಾಮಾನ್ಯ ಓದುಗರಾಗಿ ನಮ್ಮೆಲರ ಹೃದಯತುಂಬಿದ ಹಾರೈಕೆ💐💐.
  


ಮಂಗಳವಾರ, ನವೆಂಬರ್ 3, 2020

ಮಹಾಕಾದಂಬರಿ

ನನಗೆ ಜೀವನದಲ್ಲಿ ದೊರೆತದ್ದು ಅಮೂಲ್ಯವಾದ ಬೃಹತ್ 

ಕಾದಂಬರಿ. ಓದುತ್ತಲೇ ಇರುವೆನು. ಅರ್ಥೈಸಿಕೊಂಡಿರುವೆ 

ಎನ್ನುವಾಗಲೇ, ಅದು ಅರ್ಥವಾಗದೇ ತೋರುತ್ತದೆ. ಪ್ರತಿ 

ಪುಟಗಳಲ್ಲು ವಿಶೇಷತೆಯಿಂದ ಕೂಡಿರುವ ಕಾದಂಬರಿಯನ್ನು 

ಓದುತ್ತಾ ಸಾಗಿದಷ್ಟು ತಿಳಿಯುವ ಹಂಬಲ, ಸಂತೋಷ, 

ಮನಸ್ಸಿಗೆ ನೆಮ್ಮದಿ, ಸಾರ್ಥಕ ಮನೋಭಾವ. 

ಕಾದಂಬರಿಯನ್ನು ನಾನಿರುವವರೆಗೂ ಓದುತ್ತಾ ಇರುವಾಸೆ. 

ಕಾದಂಬರಿಯ ಪಾತ್ರದಲ್ಲಿ ಗೊಂದಲವಿದ್ದರು ಅದರಲ್ಲಿರುವ 

ಒಳಹಂದರ ಬಲುವಿಶಾಲ. ಕಾದಂಬರಿ ನನಗೆ ಓದುವ ಸವಿ 

ಉಣಿಸಲು ದಕ್ಕಿದ್ದು ನನ್ನ ಅದೃಷ್ಟವೇ ಸರಿ. ನಾನು ಬಹಳ 

ಇಷ್ಟಪಟ್ಟು ಓದಿದ ಏಕೈಕ ಆತ್ಮೀಯ ಕಡೆಯ ಜ್ಞಾನ ಹೊತ್ತಿಗೆ. 

ಅದನ್ನೀಗ ಹಿಂದಿರುಗಿಸುವ ಸಮಯ ಸನ್ನಿಹಿತವಾಗಿದೆ.                                                         
 ಆದರೆ  ಹಿಂದಿರುಗಿಸುವ ಮನಸ್ಸಿಲ್ಲದಿದ್ದರೂ ಭಾರವಾದ 

ಮನಸ್ಸಿನಿಂದ ಅದನ್ನು ನೀಡಿದವರಿಗೆ ಕೊಡುತ್ತಿದ್ದೇನೆ. ಆದರೆ 

ಆ ಕಾದಂಬರಿ ನನ್ನ ಭಾರವಾದ ಮನಸ್ಸಿನೊಂದಿಗೆ ಅಸ್ತಿತ್ವ 

ಮತ್ತು ಅಕ್ಷರ ಜ್ಞಾನವನ್ನು ತನ್ನೊಂದಿಗೆ ಹೊತ್ತೊಯ್ಯುತ್ತಿದೆ 

ಎಂಬುದು ಅದಕ್ಕೂ ತಿಳಿಯದ ಒಳಅರ್ಥವಾಗಿದೆ. 

ಸೋಮವಾರ, ನವೆಂಬರ್ 2, 2020

ಹುಡುಗಿ

ನನಗೊಂದು ದಿನ ಬೈಸಿಕಲ್ಲಿನ ಕೆಳಗೆ 
ಒಬ್ಬಳು ಹುಡುಗಿ ಸಿಕ್ಕಿದ್ದಳು 
ಹೇಗಿದ್ದಳು ಹುಡುಗಿ...??? 
ನಯವಾಗಿ, ಮೃದುವಾಗಿ ತಕ್ಕಮಟ್ಟಿಗೆ 
ಸುಂದರವಾಗಿ 
ಚಕ್ರ ಅವಳ ಮೇಲೆ ಸ್ವಲ್ಪ ಸ್ವಲ್ಪವೇ 
ಉರುಳುತಲಿತ್ತು 
ಹೇಗಿದ್ದಳು ಹುಡುಗಿ...??
ಹುಡುಗಿ ನಗುತ್ತಲೇ ಇದ್ದಳು 
ನನಗೂ ಆಶ್ಚರ್ಯ... !!
ಆದರೆ ಅಲ್ಲೊಂದು ಹೆಪ್ಪುಗಟ್ಟಿ ಉಕ್ಕುವ 
ಶಬ್ಧ ಹೊರಡುತಿತ್ತು 
ಹೇಗಿದ್ದಳು ಹುಡುಗಿ..? 
ಆಗಲೂ ಹುಡುಗಿ ಸ್ವಲ್ಪವೇ ನಗುತ್ತಿದ್ದಳು 
ಶಬ್ಧ ಹಾಗೆಯೇ ಮುಂದುವರೆದಿತ್ತು 
ಇನ್ನೇನು ಸಂಪೂರ್ಣವಾಗಿ ಚಕ್ರ ಅವಳ 
ಮೇಲೆ ಉರುಳುವುದರಳಿತ್ತು ಅಷ್ಟರಲ್ಲಿ 
ಕಾಲಚಕ್ರವಾಗಿ ಅವಳೇ ಅದರ ಮೇಲೆ ಹತ್ತಿ 
ಸವಾರಿ ಮಾಡಿದ್ದಳು. 


ಕಚೇರಿ

ಆ ಕಚೇರಿಗೆ ಹೋಗುವುದೆಂದರೆ ನನಗೆ ಈಗಲೂ ಏನೋ 

ಒಂದು ತರದ ಭಯ. ಸ್ವಲ್ಪ ಇಬ್ಬನಿ ಮಿಶ್ರಿತ ಬೆವರು. 

ಮೊದಲೇ ಹಿಂಜರಿಕೆ ಸ್ವಭಾವದ ನನಗೆ, ಅಲ್ಲಿ 

ಕಾಲಿಡುವುದೆಂದರೆ ದಿನಗಳ ಮೊದಲೇ ಚಿಂತೆ ಮೇಳೈಸುತ್ತದೆ. 

ನನ್ನ ಕೆಲಸ ಆಗದಿದ್ದರೂ ಪರವಾಗಿಲ್ಲ, ನನಗೆ ಅಲ್ಲಿಗೆ 

ಹೋಗುವುದೆಂದರೆ ಆಗದ ಮಾತು. ಕಾರಣವಿಷ್ಟೆ... ಅಲ್ಲಿಯ 

ಕೆಲಸ ನಿಮಿತ್ತ ನೇಮಕಗೊಂಡವರ ಮದವೇರಿದ ನಡವಳಿಕೆ. 

ಸ್ವಲ್ಪವೂ ಸೌಜನ್ಯ, ಸಭ್ಯತೆ, ಶಿಷ್ಟಾಚಾರಗಳನ್ನು ಅವರಲ್ಲಿ 

ನಾನೆಂದು ಕಾಣೆ. ಹಾ!!... ಹಾಗೆಂದ ಮಾತ್ರಕ್ಕೆ ಈ 

ನಡವಳಿಕೆಗಳು ಶಾಶ್ವತ ವಲ್ಲ, ಬೆಲೆಯುಳ್ಳ ಕಾಗದಗಳನ್ನು 

ನೀಡಿದರೆ ಬಲುದೂರದ ಮಾತು. ಆಗ ಭೂತವೂ... 

ವರ್ತಮಾನ, ಭವಿಷ್ಯಗಳ ದೇವರಾಗಿ ಕಾಣಸಿಗುತ್ತದೆ. ನನಗೆ 

ಹೀಗೆಯೋ.. ಬೇರೆಯವರಿಗೂ ಹೀಗೆಯೋ ಅರಿವಿಗೆ 

ಅರಿಯುತ್ತಿಲ್ಲ.



ಸೋಮವಾರ, ಅಕ್ಟೋಬರ್ 19, 2020

ಭಾವನೆಗಳು (ಭಾವನೆಗಳಿರುವವರ ಭಾವಕ್ಕೆ.... )


ಭಾವನೆಗಳು ನಮ್ಮನ್ನು ಬರಸೆಳೆದು ಬಂಧಿಸುತ್ತವೆಯೋ ಅಥವಾ ನಾವೇ ಅವುಗಳಲ್ಲಿ ಮೋಹಗೊಂಡು ಬಂಧಿಯಾಗುತ್ತೇವೆಯೋ ತಿಳಿಯದು. ನಿರ್ಭಾವ ವ್ಯಕ್ತಿಗಳು ಇದ್ದಾರೆಂದು ಹೇಳಲಾಗುವುದಿಲ್ಲವಾದರೂ ನಮ್ಮ ಆಚಾರ -ವಿಚಾರ, ಕೆಲಸ ನಮ್ಮ ಭಾವನೆಗಳೊಂದಿಗೆ ವಿಲೀನಗೊಂಡಿರುತ್ತವೆ. ಕನಸು, ಕಲ್ಪನೆಗಳು, ಭಾವನೆಗಳು ಹಡೆಯುವ ಕೂಸುಗಳೆಂದರೆ ತಪ್ಪಾಗಲಾರವು.

ಒಬ್ಬ ವ್ಯಕ್ತಿಯ ಪರಿಪೂರ್ಣತೆ ಎಂಬುದು ಕೇವಲ ಜ್ಞಾನ, ತಿಳುವಳಿಕೆ, ಗೌರವಾಧಾರಗಳು, ಪ್ರಶಂಸೆ, ಬುದ್ಧಿವಂತಿಕೆ, ಪ್ರಶಸ್ತಿಗಳಲ್ಲಿ ಅಡಕವಾಗಿರುವುದಿಲ್ಲ. ವ್ಯಕ್ತಿಯ ಭಾವನಾತ್ಮಕ ಅಂಶಗಳನ್ನೂ ಅವಲಂಬಿಸಿರುತ್ತವೆ.ಭಾವನೆ ಮತ್ತು ಬುದ್ಧಿವಂತಿಗೆ ಪರಸ್ಪರ ಸಂಬಂಧ ಹೊಂದಿರುವ ನಮ್ಮ ನರನಾಡಿಗಳಿದ್ದಂತೆ. ಬುದ್ಧಿವಂತಿಕೆಯೇ ಎಲ್ಲಕ್ಕಿಂತ ಮೇಲಾದುದ್ದಲ್ಲ,. ಒಂದು ವೇಳೆ ಬುದ್ಧಿ ಮಾತ್ರದಿಂದಲೇ ಆಕಾಂಕ್ಷೆ, ಚಿಂತನೆಗಳು, ಹುಟ್ಟುತ್ತವೆಯೆಂದರೂ, ಅವುಗಳಿಗೆ ನೀರೆರೆದು ಪೋಷಿಸುವುದು ವ್ಯಕ್ತಿಯ ಭಾವಧಾರೆ.
ಭಾವನೆಯು ತೀರ ನೇರವಾಗಿ ಸಂಬಂಧ ಹೊಂದಿರುವ ಅಂಶಗಳೆಂದರೆ ಸ್ನೇಹ, ಪ್ರೀತಿ, ದಾಂಪತ್ಯ, ಕುಟುಂಬಗಳಲ್ಲಿ. ಕುಟುಂಬದಲ್ಲಿ ಬುದ್ಧಿಗಿಂತ ಭಾವನೆಯ ಪಾತ್ರ ಹಿರಿದಾಗಬೇಕು. ಹೆಚ್ಚು ಆತ್ಮೀಯತೆಯ ನಡವಳಿಕೆಯು ಸಂಬಂಧವನ್ನು ಹೆಚ್ಚು ಗಟ್ಟಿಯಾಗಿ ಬೆಸೆದುಕೊಳ್ಳುತ್ತವೆ.

ಭಾವನೆಗಳು ವಿಸ್ತ್ರುತವಾಗಿ ತೆರೆದುಕೊಳ್ಳುವ ಮತ್ತೊಂದು ವಲಯವೆಂದರೆ ಹೃದಯವಂತಿಕೆ. ಹೃದಯವಂತಿಕೆ ಎಂಬುದು ಕೆಲವರಿಗೆ ಸಾಮಾನ್ಯ ಭಾವನಾತ್ಮಕ ಅಂಶವಾಗಿ ಕಾಣಬಹದು. ಹೃದಯವಂತಿಕೆ ಬಹು ವಿಶಾಲವಾದ ಎಲ್ಲರಲ್ಲೂ ಇರದ, ಎಲ್ಲರಿಂದಲು ತೋರಲಾರದ ಭಾವನಾತ್ಮಕತೆಯಲ್ಲಿ ಅತ್ಯಂತ ವಿರಳವಾದ ಒಂದು ವ್ಯಕ್ತಿತ್ವ.
 
  ಕೆಲವರ ಪ್ರಕಾರ ಭಾವನಾತ್ಮಕ ಅಂಶಗಳಾದ ಪ್ರೀತಿ, ಕಾಳಜಿ, ಭಾತೃತ್ವ, ಮಮತೆಗಳು ಗೋಪ್ಯತೆಯ ವಿಷಯ ವಸ್ತುಗಳಾಗಿದ್ದು, ಕಾಲಯಮನನ್ನು ತಿಂದು ಹಾಕುವ ಅಂಶಗಳಾಗಿ ಕಾಣಸಿಗುತ್ತವೆ. 
 
 ಹಾಗೆಯೇ ಇನ್ನೊಂದು ಮುಖ್ಯವಾದ ಅಂಶವೆಂದರೆ ಭಾವನೆಯೇ ಬದುಕಾದರು ಕಷ್ಟ. ಹಾಗೆ ಎಲ್ಲವನ್ನು ಬುದ್ಧಿಗೆ ಮೀಸಲಿಟ್ಟರೂ ಕಷ್ಟ.  ಇಂದಿನ ಸ್ವಾರ್ಥ ಜಗತ್ತಿನಲ್ಲಿ ಪ್ರೀತಿಯ, ಸ್ಪಂದನೆಯ ಭಾವನೆಗಳೆಂದರೆ ಬೆಲೆ ಇಲ್ಲದವುಗಳಾಗಿವೆ. ಭಾವನೆಗಳಿಗೆ ಈ ದಿನಗಳಲ್ಲಿ  ಬೆಲೆಕೊಡುವವರು ಅತ್ಯಲ್ಪರು ಹಾಗು ಅತ್ಯಲ್ಪರಲ್ಲಿ ಅಲ್ಪರು. ಭಾವನೆಯನ್ನು ಬದುಕಾಗಿಸಿ ಕೊಂಡು ಅದರ ವೇದನೆಯಲ್ಲಿ ಹಪಹಪಿಸಿ ನರಳುತ್ತಿರುವ ಅದೆಷ್ಟೋ ಮನಸ್ಸುಗಳು, ಸ್ವಾರ್ಥ ಮನಸ್ಸುಗಳ ಅರ್ಥೈಸಿ ಬೇರೊಂದು ಅಸ್ಮಿತೆಯನ್ನು ಒಪ್ಪಿ ಬಾಳುವ ಅನಿವಾರ್ಯತೆ ಬಂದೊದಗಿದೆ. 
 
  ಇಂದಿನ ದಿನಗಳಿಗೆ ಸಮಯವಿಲ್ಲವೋ ಅಥವಾ ನಮಗೆ ನಮ್ಮ ಕೆಲಸದ ಒತ್ತಡ, ಜವಾಬ್ಧಾರಿಗಳಿಂದ ಬಿಡುವು ಸಿಗುತ್ತಿಲ್ಲವೋ... ಒಮ್ಮೆ ಎಲ್ಲರು , ಅವರವರ ಯೋಚನಾಲಹರಿಗೆ ಹೊಕ್ಕಬೇಕಾಗುತ್ತದೆ.  ಜ್ಞಾನ (ಬುದ್ಧಿ ವಂತಿಕೆ )ಮನಸ್ಸಿನ ದೀಪವಿದ್ದಂತೆ, ಪ್ರೀತಿ ಅದರ ಪ್ರಕಾಶದಲ್ಲಿ ಬೆಳಗುವ ಬೆಳಕಾಗ ಬೇಕೇ ಹೊರತು, ಒಬ್ಬ ವ್ಯಕ್ತಿಯ ಮನಸ್ಸಿನ ಭಾವನೆಗಳನ್ನು ಅರಿಯುವಲ್ಲಿ ಜ್ಞಾನವು ನಂದಿದಾಗ,  ಹೃದಯವಂತಿಕೆ ಇಲ್ಲದ ಮೇಲೆ... ಬುದ್ಧಿವಂತಿಗೆ(ಜ್ಞಾನ )ಎಷ್ಟಿದ್ದರೇನು..? ಅನ್ನಿಸದೆ ಇರಲಾರದು. 

   ನಮ್ಮನು ಪ್ರೀತಿಸುವ, ನಮ್ಮ ಬರುವಿಕೆಗಾಗಿ ಹಾತೊರೆಯುವ, ನಮ್ಮನ್ನೇ ಜೀವವೆಂದು ಆಶಿಸಿ, ಭಾವಿಸಿ ಬದುಕುತ್ತಿರುವ ಜೀವಗಳ ಭಾವನೆಗಳಿಗೆ ಅಸಡ್ಡೆ ತೋರಿ ಬದುಕುವುದು ನಮ್ಮ ಇಂದಿನ ನವೀಕರಣಗೊಂಡು ರೂಪುಗೊಂಡಿರುವ ಭಾವನೆಗಳಾಗಿವೆ.   ಭಾವನೆಗಳಿಗೆ ಬೇಲಿ ಹಾಕಿ, ಸುತ್ತ  ನೀರೆರೆಯುವ ಬದಲು,   ಪರಸ್ಪರ ಹಂಚಿ ತೆಗೆದುಕೊಳ್ಳುವುದರಿಂದ ಸಂಬಂಧಗಳು ಗಟ್ಟಿಗೊಳ್ಳುತ್ತವೆ.

 ಭಾವನೆಗಳನ್ನು hidden context ಆಗಿ ಮಾಡದೆ, share context ಆಗಿಸಿ, ಭಾವನೆಗಳು, ಬುದ್ಧಿವಂತಿಕೆ, ಕಾರ್ಯನಿರ್ವಹಣೆಯಲ್ಲಿ ಭಾವನಾತ್ಮಕ ಬುದ್ಧಿ ವಂತಿಕೆಯನ್ನು ಸರಿದೂಗಿಸಿಕೊಂಡು ಬದುಕುವತ್ತ, ಯೋಚಿಸುವ ಚಿಂತನೆ ಮಾಡಿ ಬದುಕನ್ನು ಕಟ್ಟಿಕೊಳ್ಳುವ ಬುದ್ಧಿವಂತಿಕೆಯ ಭಾವನಾಜೀವಿಗಳಾಗೋಣ. ಭಾವನೆಗಳೆಂಬ  ಸುಂದರವಾದ  ಅಂತರಂಗದ  ಅಲೆಗಳನ್ನು 
ಗೌರವಿಸೋಣವೆಂಬುದು ನನ್ನ ಭಾವಾಂತರಂಗದ ಅನಿಸಿಕೆ. 
        


      

ಮಂಗಳವಾರ, ಸೆಪ್ಟೆಂಬರ್ 29, 2020

ಮಂಜಕ್ಕ

ಮಂಜಕ್ಕ ಹೆಸರಂತೆ ಬಲು ಮನೋಹರೆಯು,  ಮುಗ್ದೆಯು, 

ಅನಾಥೆಯಾದರು, ಅನೇಕ ಕನಸು ಹೊತ್ತು,ಬಡತನದಲ್ಲಿ 

ಅರಳಿದ ಹೂ ಕುಸುಮ.

ಮಂಜಕ್ಕನ ವಿಧಿಬರಹದಲ್ಲಿ ಅವಳ ಅಪ್ಪ -ಅಮ್ಮನ

 ಮುಖ ನೋಡುವ ಭಾಗ್ಯವೇ ಬರೆದಿರಲ್ಲಿಲ್ಲ.ಅಜ್ಜಿಯ 

ಆಶ್ರಯದಲ್ಲಿ ಬೆಳೆದ ಅವಳಿಗೆ ಅಪ್ಪ-ಅಮ್ಮನ ದೈವ ಸ್ವರೂಪಿ,

 ಅಜ್ಜಿ ಸುಂದ್ರಮ್ಮ. ಮಂಜಕ್ಕನನ್ನು ಸುಂದ್ರಮ್ಮ (ಚಿಕ್ಕ 

ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡಿದ್ದಳು. ಮಕ್ಕಳು ಸಹ

 ಇರಲ್ಲಿಲ್ಲ)ಹಸುಗೂಸಿನಲ್ಲೇ ಆಸ್ಪತ್ರೆಯಿಂದ ತಂದು, 

ಇಳಿವಯಸ್ಸಿನಲ್ಲಿ  ಊರುಗೋಳಾಗುತ್ತಾಳೆಂದು      

ತನ್ನಿಂದಾದ ಮಟ್ಟಿಗೆ ಸಾಕಿ ಸಲಹಿದ್ದಳು. ಹೀಗೆ ನೋಡಿದರೆ 

ಸುಂದ್ರಮ್ಮ ಒಬ್ಬಳು ಆದರ್ಶ ಮಹಿಳೆಯಂತೆ ಕಾಣಸಿಗುತ್ತಾಳೆ.


ಬೇಸಿಗೆ ಕಾಲವಾದರು ಅಂದು ಮೋಡಕವಿದ ತಂಪಾದ 

ವಾತಾವರಣ. ಹಿತವಾಗಿ ಬೀಸುವ ಗಾಳಿ. ಆದರೂ ಸುಂದ್ರಮ್ಮ

 ಚಿಂತಾಮಗ್ನಳಾಗಿ, ತನ್ನ ಮನೆಯ ಹಳೆಯ ದೊಡ್ಡ ಮರದ 

ಕಂಬವನ್ನು ಒರಗಿ ಕುಳಿತ್ತಿದ್ದಳು. ಎಂದಿನಂತೆ ಮನೆಯ 

ಕೆಲಸಗಳನ್ನು ಮುಗಿಸಿ ಹೊರಬಂದ ಮಂಜಕ್ಕ, ಅಜ್ಜಿಯನ್ನು 

ಸೂಕ್ಷ್ಮವಾಗಿ ಗಮನಿಸಿ ಎಂದಿನಂತೆ ಇಲ್ಲದೆ ಏನೂ ಚಿಂತಿಸುತ್ತ

 ಕುಳಿತಿರುವ ಅಜ್ಜಿಯನ್ನು ಕಂಡು, ಅಜ್ಜಮ್ಮ....ಏಕೆ? ಹೀಗೆ 

ಕುಳಿತಿರುವೆ? ಎಂದು ಕೇಳಲು, ನೋಡೇ ಮಂಜು... ನಾನೊ 

ಹಣ್ಣಾದ ತರಗೆಲೆ. ನನಗೆ ನಾಡು ಹೋಗು ಅನ್ನತ್ತೆ, ಕಾಡು ಬಾ 

ಅನ್ನತ್ತೆ, ಅಷ್ಟರೊಳಗಾಗಿ ನಿಂಗೊಂದು ಮದುವೆ ಮಾಡಿದರೆ 

ನಾನು ನಿಶ್ಚಿಂತೆಯಿಂದ ಕಣ್ಣು ಮುಚ್ಚಬಹುದು ಎಂದು 

ಹೇಳುತ್ತಿರುವಾಗ, ಅದೇ ಊರಿನವನಾದ ಕಾಂತಣ್ಣನು ತನ್ನ 

ಮಗನ ಮದುವೆಗೆ ಕರೆಯಲು ಬರುತ್ತಾನೆ. ಆಗ ಅಜ್ಜಿಯು 

ಮಂಜುವಿಗೊಂದು ಹುಡುಗನನ್ನು ನೋಡೆಂದು ಹೇಳಿದಾಗ, 

ಕಾಂತಣ್ಣನು... ಅಲ್ಲ ! ಸುಂದ್ರಜ್ಜಿ , ಅಂಗೈಯಲ್ಲೇ ಬೆಣ್ಣೆ 

ಇಟ್ಕೊಂಡು, ಊರೆಲ್ಲಾ ಅಲೆದ್ರಂತೆ ಹಾಗಾಯಿತು ನಿನ್ನ 

ಕಥೆ.ಅದೇ ನಿನ್ನ ದೂರದ ಸಂಬಂಧಿ  ಆಷಾಡಮ್ಮನ ಮಗ 

ಸುಬ್ಬೇಗೌಡ ಇದ್ದಾನಲ್ಲ,ಅವನಿಗೆ ಕೊಡಬಹುದಲ್ಲ ನಿಮ್ಮ 

ಮಂಜುನಾ ಎಂದನು. ತಕ್ಷಣ ಸುಂದ್ರಜ್ಜಿ, ಹೌದಲ್ವಾ !ನನ್ನ 

ಹಾಳು ತಲೆಗೆ ಹೊಳೆದೇ ಇರಲ್ಲಿಲ್ಲ 

ನೋಡು,ವಯಸ್ಸಾಯಿತ್ತಲ್ಲಪ್ಪ ಬುದ್ಧಿ ಮಂಕು.ನೀನೇ ಅವರಿಗೆ 

ಈ ವಿಷಯವಾಗಿ ಕೇಳಿನೋಡೆಂದು ಹೇಳುತ್ತಾಳೆ ಸುಂದ್ರಮ್ಮ.

ಸುಬ್ಬೇಗೌಡನಿಗೆ ತಂದೆ ಇರಲ್ಲಿಲ್ಲ.ಒಂದು ಕಾರ್ಖಾನೆಯಲ್ಲಿ 

ಕೆಲಸಕ್ಕೆ ಹೋಗುತ್ತಿದ್ದ. ಹೊಟ್ಟೆ ಬಟ್ಟೆಗೆ ಯಾವ ತೊಂದರೆ 

ಇರಲ್ಲಿಲ್ಲ.ಸುಂದ್ರಮ್ಮಗಿಂತ ಆರ್ಥಿಕವಾಗಿ ಎತ್ತರದಲ್ಲೇಇದ್ದರು. 

ಹೀಗೆ ಹಲವು ದಿನಗಳ ನಂತರ ಕಾಂತಣ್ಣನ ಮಗ 

ಸುದೀಂದ್ರನ ಮದುವೆಗೆ ಹೋದ ಸುಂದ್ರಜ್ಜಿಗೆ, ಆಷಾಡಮ್ಮ 

ಸಿಕ್ಕಿ ತನ್ನ ಮಗನಿಗೆ ಮಂಜಕ್ಕನನ್ನು ಮದುವೆ ಮಾಡಿಕೊಳ್ಳಲು

 ಇಷ್ಟವಿರುವ ವಿಷಯ ತಿಳಿಸಿ, ಮರುದಿನವೇ ನಿಶ್ಚಯದ 

ಶಾಸ್ತ್ರವು ಮುಗಿಯುತ್ತದೆ. ಸುಂದ್ರಜ್ಜಿ ತನ್ನ ಜವಾಬ್ದಾರಿಯನ್ನು

 ಮೆರೆದಳೆ ಹೊರತು,  ಮಂಜಕ್ಕನಿಗೆ ಮದುವೆಯ ಇಷ್ಟ 

-ಕಷ್ಟಗಳ ಬಗ್ಗೆ ಏನನ್ನು ಕೇಳುವ ಗೋಜಿಗೆ ಹೋಗಲಿಲ್ಲ. 

ನರಿಬುದ್ಧಿಯ ಆಷಾಡಮ್ಮನ ಉದ್ದೇಶ ಅಜ್ಜಿ ಸತ್ತರೆ ಇರುವ 

ಮನೆಯು ಮಂಜಕ್ಕನ ಮೂಲಕ ನಮಗೆ ಸೇರುವುದೆಂದು, ಈ

 ವಿಷಯವಾಗಿ ಅಜ್ಜಿಯೊಂದಿಗೆ ಪ್ರಸ್ತಾಪಿಸಿಯೂ ಇದ್ದಳು.


ನಿಶ್ಚಯಿಸಿದ ದಿನದಂದು ಮಂಜಕ್ಕ -ಸುಬ್ಬೇಗೌಡನ 

ಮದುವೆಯು ಆಗುತ್ತದೆ. ಸುಬ್ಬೇಗೌಡ ಹೊಸದರದಲ್ಲಿ 

ತಕ್ಕಮಟ್ಟಿಗೆ ಇದ್ದನಾದರೂ, ತೀರ ಏಕಾಂತ ಸ್ವಭಾವ, ಒರಟು 

,ಜಡತ್ವ ಬುದ್ಧಿಯ ಅವನಲ್ಲಿ ಪ್ರೀತಿ, ಕಾಳಜಿಗಳಿಗೆ 

ಜಾಗವಿರಲ್ಲಿಲ್ಲ.  ಮಂಜಕ್ಕ ತನ್ನ ಗಂಡನನ್ನು ದೈವವೆಂದು 

ಬಗೆದು ಅವನ ಪ್ರೀತಿ, ವಾತ್ಸಲ್ಯ, ಅಕ್ಕರೆಗಾಗಿ ಪರಿ 

ತಪಿಸುತ್ತಾಳೆ. ತನ್ನ ಅಪ್ಪ -ಅಮ್ಮ, ಅಜ್ಜಿಯ ಪ್ರೀತಿಯನ್ನು 

ಗಂಡನಲ್ಲಿ ಕಾಣಬಯಸಿದ ಅವಳಿಗೆ, ದಕ್ಕಿದ್ದು ಬರಿ ನಿರಾಶೆಯ

 ಗೋಪುರ . ಅತ್ತೆಯಲ್ಲಿ, ತಾಯಿ ಪ್ರೀತಿ ನಿರೀಕ್ಷೆಯಲ್ಲಿದ್ದ 

ಮಂಜಕ್ಕನ ಪಾಲಿಗೆ ಅದುವೇ ನೀರಿನ ಮೇಲಿನ 

ಗುಳ್ಳೆಯಾಗಿತ್ತು. ಮಂಜಕ್ಕ, ವಾಸ್ತವಕ್ಕೆ ಹೊಂದಿಕೊಳ್ಳುತ್ತಲ್ಲಿ 

ದ್ದರೂ... ಮಾನಸಿಕವಾಗಿ ಕೃಶಳಾಗುತ್ತ ಸಾಗಿದ್ದಳು.


 

ದಿನಗಳು ತಮ್ಮ ಆಯಸ್ಸನ್ನು ಕಳೆಯುತ್ತಿರಲು, 

ಕಷ್ಟ -ಸುಖ ಹೇಳಿಕೊಳ್ಳಲು ಇದ್ದ, ಅಜ್ಜಿಯು ಒಂದು ದಿನ 

ಅನಾರೋಗ್ಯದಿಂದ ತೀರಿಕೊಂಡಾಗ, ಮಂಜಕ್ಕನಿಗೆ ತನ್ನ 

ಅಸ್ತಿತ್ವವೇ ಕಳಚಿ ಬಿದ್ದಂತ್ತಾಗಿತ್ತು.ಅಷ್ಟರಲ್ಲೇ ನವ ಮಾಸ 

ತುಂಬಿದ ಮಂಜಕ್ಕ ಒಂದು ಹೆಣ್ಣು ಮಗುವಿಗೆ ಜನ್ಮವಿತ್ತಳು.

 ಇಷ್ಟವೋ -ಕಷ್ಟವೋ ಅತ್ತೆಯ  ಬಾಣಂತನವೆಂಬ ಮೈ 

ಒರೆಸುವ ಶಾಸ್ತ್ರವೂ ಒಂದೇ ತಿಂಗಳಿಗೆ ಮುಗಿದು, ಇರಲಿರದ 

ಖಾಯಿಲೆಯನ್ನು ಇದೆ ಎಂದು ಹೇಳಿ, ವಿಶ್ರಾಂತಿಗಾಗಿ ನೆಂಟರ 

ಮನೆಗೆ ಹೋದ ಆಷಾಡಮ್ಮ ತಿಂಗಳುಗಳೇ ಕಳೆದರು ಇತ್ತ ತಲೆ

 ಹಾಕಲೇ ಇಲ್ಲ. ಇದ್ದರೂ.. ಇಲ್ಲದಂತ್ತಿದ್ದ ಗಂಡನೊಂದಿಗೆ, 

ಎಳೆಕೂಸನ್ನು ಕಟ್ಟಿಕೊಂಡು ಪಡಬಾರದ ಪಾಡುಪಟ್ಟು 

ಮಗಳನ್ನು ಸಾಕಿ ಅದಕ್ಕೆ ಒಂದು ವರ್ಷವಾದಾಗ ತನ್ನ 

ಮನಸ್ಸಿನ ಇಚ್ಚೆಯಂತೆ 'ಆರತಿ '(ತನ್ನ ಮಗಳು 

ಕಷ್ಟದಲ್ಲಿರುವವರ ಬಾಳನ್ನು ಬೆಳಗುವ 

ದೀಪವಾಗಲೆಂದು)ಎಂದು ಹೆಸರಿಡುತ್ತಾಳೆ. ಒಂದು 

ಅಮಾವಾಸ್ಯೆಯ ಬೆಳಗ್ಗೆ, ಕೆಲಸಕ್ಕೆಂದು ಹೊರಟು ನಿಂತ 

ಸುಬ್ಬೇಗೌಡ... ಏಯ್...ಮಂಜು, ನಾನು ಕೆಲಸಕ್ಕೆ 

ಹೋಗಿಬರುತ್ತೇನೆ ಎಂದು ಹೇಳಿ ಹೋದವನು ಸಂಜೆ, ರಾತ್ರಿ,

 ದಿನ, ವಾರ, ತಿಂಗಳುಗಳೇ ಕಳೆದರು ಮನೆಗೆ 

ಬರಲ್ಲಿಲ್ಲ.ಮಂಜಕ್ಕ ಅವಳಿಗೆ ತಿಳಿದಿರುವ ಎಲ್ಲಾ ಕಡೆ ಹಾಗು 

ಕಂಡಕಂಡವರಲ್ಲಿ ತನ್ನ ಗಂಡನ  ಬಗ್ಗೆ ವಿಚಾರಿಸುತ್ತಾಳೆ, ಆದರೆ 

ಎಲ್ಲೂ, ತನ್ನ ಗಂಡನ ಪರವಾಗಿ ಯಾವ ವಿಷಯವು 

ತಿಳಿಯುವುದಿಲ್ಲ. ಅವರಿವರು ಹೇಳುವಂತೆ, 

ಜೀವಕಳೆದುಕೊಂಡಿರಬೇಕೆಂಬ, ಊರುಬಿಟ್ಟು ಹೋದನೆಂದು,

 ಇನ್ನೊಂದು ಮದುವೆ ಆದನೆಂದು, ತನ್ನ ತಾಯಿಯೊಂದಿಗೆ 

ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಾನೆಂದು... ಹೀಗೆ ಇಲ್ಲ 

-ಸಲ್ಲದ ಊಹಾಪೋಹಗಳನ್ನು ನಂಬುವ ಅನಿವಾರ್ಯತೆ 

ಮನಸ್ಸಿಗೆ. ಸಿಡಿಲ್ಲಬ್ಬರದಂತೆ ಅಪ್ಪಳಿಸಿದ ಈ ಪರಿಸ್ಥಿತಿಗೆ 

ಮಂಜಕ್ಕ ಹತಾಶಳಾಗಿ ಹೋದಳು.ನನ್ನನ್ನು ಹೊತ್ತಿರುವ ಭೂ

 ತಾಯಿ ಇಬ್ಬಾಗವಾಗಿ ನನ್ನನ್ನು ಅದರ ಒಡಲಿನೊಳಗೆ 

ಸೇರಿಸಿಕೊಂಡುಬಿಡಬಾರದೇ ಎನ್ನುವಷ್ಟು ದುಃಖ ಉಮ್ಮಳಿಸಿ

 ದಿಕ್ಕೇ ತೋಚದಾದಾಗ ತನ್ನ ಮಗಳು 'ಆರತಿ 'ಬದುಕಿನ 

ಆಸರೆಯಾಗಿ ಗೋಚರಿಸುತ್ತಾಳೆ. ತನಗೆ ಒದಗಿದ ಈ 

ಪರಿಸ್ಥಿತಿಯಿಂದ, ಮನೆಯ ಬಾಡಿಗೆ ಕಟ್ಟಲು ಸಾಧ್ಯವಾಗದೆ 

ಹೋದಾಗ, ಆ ಮನೆಯನ್ನು ಬಿಟ್ಟು ತನ್ನ ಅಜ್ಜಿ ಬಿಟ್ಟು 

ಹೋಗಿದ್ದ ಮನೆಗೆ, ಮಗಳೊಂದಿಗೆ ಬಂದು ನೆಲೆಸುತ್ತಾಳೆ. 

ಮಂಜಕ್ಕ ಮೃದು ಸ್ವಭಾವದವಳಾದರು, ದೃಢ ವ್ಯಕ್ತಿತ್ವದವಳು. 

ಚಿಕ್ಕಂದಿನಲ್ಲೆ ಅಪ್ಪ -ಅಮ್ಮನ ಕಳೆದುಕೊಂಡ ಕೊರಗು, 

ಸಮಾಜದ ಆಗು -ಹೋಗು, ಆಚಾರ -ವಿಚಾರಗಳಿಂದ 

ಬೇಸತ್ತು, ತಾನು ಮದುವೆ ಆಗಬಾರದೆಂಬ ನಿಲುವು  

ತಳೆದಿರುತ್ತಾಳೆ. ಆದರೆ ಅಜ್ಜಿಯ ಜವಾಬ್ಧಾರಿ ಕಳೆದು 

ನೆಮ್ಮದಿಯ ಉಸಿರು ಬಿಡಬೇಕೆಂಬ ಆಸೆಗೆ, 

ಹತಾಶಳಾಗಿ,ತನ್ನನ್ನು ಸಾಕಿಬೆಳೆಸಿದ  ಕೃತಜ್ಞತಾ    

ಮನೋಭಾವದಿಂದಾಗಿ ಒಪ್ಪಿರುತ್ತಾಳೆ. ಅಜ್ಜಿಯು ಮದುವೆ 

ವಿಷಯದಲ್ಲಿ ಮಂಜಕ್ಕನ ಇಷ್ಟ -ಅನಿಷ್ಟಗಳನ್ನು ಕೇಳುವ 

ಗೋಜಿಗೆ ಹೋಗಿರುವುದಿಲ್ಲ. ಹಾಗೆ ಕೇಳಿದ್ದರೆ ಅವಳು 

ಮದುವೆ ಆಗದೆ,  ನನ್ನಂತ ಅನಾಥರ ಸೇವೆಯನ್ನು 

ಮಾಡಿಕೊಂಡು ಜೀವನ ಕಳೆಯಬೇಕೆಂದಿರುವ ಮಹಾ 

ದಾಸೆಯನ್ನು ತಿಳಿಸಿರುತ್ತಿದ್ದಳೋ ಏನೋ. ತನ್ನ ಅಜ್ಜಿ, ಗಂಡ, 

ಅತ್ತೆ ಇಲ್ಲದೆ ಒಬ್ಬಳು ಹೆಣ್ಣು ಮಗಳಾಗಿ ಈ ಅಮಾನುಷ, 

ನಿರ್ದಯ ಸಮಾಜದಲ್ಲಿ ಸಣ್ಣ ಮಗುವನ್ನು ಕಟ್ಟಿಕೊಂಡು 

ಜೀವನಕ್ಕಾಗಿ ಏನು ಮಾಡುವುದು ಎಂಬುದು ಒಂದು ದೊಡ್ಡ

 ಸವಾಲಾದಾಗ, ಅಲ್ಪ -ಸ್ವಲ್ಪ ಮಟ್ಟಿನ ಓದನ್ನು ಕಲಿತ್ತಿದ್ದ 

ಮಂಜಕ್ಕ,  ತನ್ನ ಗಂಡ ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿ 

ಹೇಗೋ ಕೆಲಸಕ್ಕೆ ಸೇರಿಕೊಂಡು ತನ್ನ ಮಗಳನ್ನು ಸಾಕುವ  

 ದೊಡ್ಡ ಜವಾಬ್ದಾರಿ ಹೊತ್ತು ನಿಲ್ಲುತ್ತಾಳೆ. ಮಂಜಕ್ಕನಿಗೆ 

ಪ್ರಪಂಚವೇ ಮಗಳು. ಮಗಳ ವಿನಾ ಬೇರೇನೂ ಕಾಣದು. 

ತನ್ನ ಪ್ರತಿಯೊಂದು ಸುಖವನ್ನು ತನ್ನ ಮಗಳ ಸುಖ, ಓದಿಗಾಗಿ

 (ತನ್ನ ಭರವಸೆಗಾಗಿ )ಮೀಸಲಿಡುತ್ತಾಳೆ.



ಮಗಳು ವೈದ್ಯಳಾಗಿ ಬಡರೋಗಿಗಳ ಶುಶ್ರೂಷೆ 

ಮಾಡಬೇಕೆಂಬ ಅವಳ ಸಾಗರದಂತಹ ಕನಸು, 

ಮಂಜಕ್ಕನಂತಹ ಬಡ, ಒಬ್ಬಂಟಿ ಮಹಿಳೆಗೆ ಆ ಕಾಲಕ್ಕೆ 

ಅಸಾಮಾನ್ಯವಾದುದಾಗಿರುತ್ತದೆ. ಆದರೆ ಮಂಜಕ್ಕ ತನ್ನ 

ದೌರ್ಬಲ್ಯವನ್ನೇ ಅಸ್ತ್ರವಾಗಿಸಿ,  ಅವಳ ಛಲದ ನಿಲುವಿಂದ 

ಹಿಂದೆ ಸರಿಯದೆ ತನ್ನ ಮಗಳ ಓದಿಗಾಗಿ ಟೊಂಕಕಟ್ಟಿ 

ನಿಲ್ಲುತ್ತಾಳೆ. ಮಗಳು ' ಆರತಿ ' ಮಂಜಕ್ಕನಂತೆ ಚೆಲುವುಳ್ಳ, 

ಚುರುಕು ಬುದ್ಧಿಯ ಹುಡುಗಿ. ಅಮ್ಮನ ಪ್ರೀತಿ, ಛಲ, ನನಗಾಗಿ 

ಅಮ್ಮ ಒಬ್ಬಂಟಿಯಾಗಿ ಪಡುತ್ತಿರುವ ಯಾತನೆ ಎಲ್ಲವೂ 

ತಿಳಿದ ಅವಳು ಚೆನ್ನಾಗಿ ಓದುತ್ತಿರುತ್ತಾಳೆ. ಓದುವುದು ಅವಳ

 ಆಸಕ್ತಿಯ ಹವ್ಯಾಸವೂ ಆಗಿರುತ್ತದೆ.


ಮಂಜಕ್ಕನಿಗೆ ಕೆಲಸ ಸಿಕ್ಕ ಹೊಸದರಲ್ಲಿ, ಹೊರ ಪ್ರಪಂಚವೇ 

ತಿಳಿಯದಿದ್ದ ಅವಳಿಗೆ ಕಾರ್ಖಾನೆಯ ಪರಿಸರ, ಸಹ 

ಕೆಲಸಗಾರರೊಂದಿಗೆ ಹೊಂದಾಣಿಕೆ,  ಹೊಸ ಲೋಕದಂತೆ 

ಕಂಡರೂ ಹೊಂದಾಣಿಕಾ ಮನೋಭಾವದ ಮಂಜಕ್ಕ 

ಎಲ್ಲರೊಂದಿಗೆ ಬೆರೆಯುವಲ್ಲಿ ಹೆಚ್ಚು ಸಮಯ ಬೇಕಾಗಲಿಲ್ಲ. 

ಅಲ್ಲಿ ಅವಳಿಗೆ ಸರೋಜಳೆಂಬ ಉತ್ತಮ ಸ್ನೇಹಿತೆಯು 

ಸಿಗುತ್ತಾಳೆ. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಹೆಗಲಾಗುವಷ್ಟು 

ಜೀವನ ಗೆಳತಿಯರಾಗುತ್ತಾರೆ. ಮಂಜಕ್ಕನಿಗೆ ಅಜ್ಜಿಯ ನಂತರ 

ಜೀವನದಲ್ಲಿ ಸಿಕ್ಕ ಅಪೂರ್ವ ವ್ಯಕ್ತಿ ಸರೋಜ. ಕೆಲಸ 

ಮಾಡುವಲ್ಲಿ, ಅಕ್ಕ -ಪಕ್ಕದ ಮನೆಯವರು ತನ್ನ 

ಸ್ನೇಹಿತೆಯೊಂದಿಗೆ,  ಗಂಡನಿಲ್ಲದ ಹೆಣ್ಣೆಂದು 

ನಡೆದುಕೊಳ್ಳುತ್ತಿದ್ದ ರೀತಿ -ನೀತಿಗಳನ್ನು ಹತ್ತಿರದಿಂದ 

ಬಲ್ಲವಳಾಗಿದ್ದ ಮತ್ತು ಮಂಜಕ್ಕನಿಂದ ಕೇಳಿಯೂ ತಿಳಿದಿದ್ದ 

ಸರೋಜ, ಮಂಜಕ್ಕ ಕಷ್ಟ ಪಡುವುದನ್ನು ನೋಡಿ, ಏ.. 

ಮಂಜು.. ನಿನ್ನ ಮಗಳಿಗಾಗಿ ನೀ ಪಡುವ ಕಷ್ಟವನ್ನು ನಾನು 

ನೋಡಲಾರೆ. ಅರು.... ಹೇಗೂ ಚೆನ್ನಾಗಿ ಓದುತ್ತಿದ್ದಾಳೆ. 

ನೋಡಲು ಗೊಂಬೆಯಂತಿರುವ, ನಮ್ಮ ಅರೂಗೆ ಒಂದೊಳ್ಳೆ

 ಹುಡುಗನನ್ನು ನೋಡಿ ಮದುವೆ ಮಾಡಿಬಿಟ್ಟರೆ, ನಿನ್ನ 

ಜವಾಬ್ದಾರಿಯು ಕಳೆಯುತ್ತದೆ, ನಿಮ್ಮ ಕುಟುಂಬಕ್ಕೆ ಒಂದು 

ಗಂಡು ದಿಕ್ಕು ಸಿಗುತ್ತದೆ. ಅದನ್ನ ಬಿಟ್ಟು ಏನೋ, ಡಾಕ್ಟರ್ 

-ಗೀಕ್ಟರ್ ಓದುಸ್ತೀನಿ ಅಂತ, ಇಲ್ಲ -ಸಲ್ಲದೆಲ್ಲ ಮೈಮೇಲೆ 

ಎಳೆದುಕೊಂಡು ಹೆಣಗೋದು ನನ್ನಿಂದ ನೋಡೋದಿಕ್ಕೆ 

ಆಗ್ತಿಲ್ಲಪ್ಪ ಎಂದು ಬುದ್ಧಿ ಮಾತು ಹೇಳುತ್ತಾಳೆ. ಮಂಜಕ್ಕ ಚಿಂತೆ

 (ಚಿತೆ )ಯಲ್ಲಿ ಬಿದ್ದ ಹುಳುವಾಗುತ್ತಾಳೆ. ಆದರೂ ತನ್ನ ಛಲ

 ಬಿಡದೆ ಅವಳಲ್ಲಿನ ದೃಢತೆಯ ಸಂಕಲ್ಪ ಸೆಟೆದು ನಿಲ್ಲುತ್ತದೆ. 

ದಿನ ಕಳೆದಂತೆ 'ಆರತಿ ' ಬೆಳೆಯುತ್ತಾ,  ತಾಯಿಯ 

ಮಹಾದಾಸೆಗೆ ನೀರೆರೆಯುತ್ತಾ ತುಂಬಾ ಚೆನ್ನಾಗಿ 

ಓದುತ್ತಿರುತ್ತಾಳೆ. ಮಂಜಕ್ಕ ಹಗಲಿರುಳೆನ್ನದೆ 

ದುಡಿಯಲಾರಂಭಿಸುತ್ತಾಳೆ. ಸಂಘ, ಸಂಸ್ಥೆ,ಬ್ಯಾಂಕ್ ಗಳಿಂದ 

 ಮತ್ತು ತಾನು ಕೂಡಿಟ್ಟ 

 ತನ್ನಲ್ಲಿದ್ದ ಅಲ್ಪ -ಸ್ವಲ್ಪವೇ ಚಿನ್ನ ಎಲ್ಲವನ್ನು ಮಾರಿ ಮಗಳನ್ನು

 ವೈದ್ಯಕೀಯ ಕೋರ್ಸ್ ಓದಿಸುವಲ್ಲಿ ಯಶಸ್ವಿಯಾಗುತ್ತಾಳೆ.

 ಹಾಗೆಯೇ ಮಗಳು ವೈದ್ಯಳೂ ಆಗುವಲ್ಲಿ, ಮಂಜಕ್ಕ ಒಂದು

 ದಿನ ಗೆಲ್ಲುತ್ತಾಳೆ. ಅವಳ ಮಹಾದಾಸೆಯಂತೆ 'ಆರತಿ' ಗೆ 

ವೈದ್ಯಳಾಗಿ  ಕೆಲಸವು ಸಿಗುತ್ತದೆ. ಮಂಜಕ್ಕನ ಆ ದಿನದ 

ಸಂತೋಷಕ್ಕೆ ಮಿತಿಯೇ ಇರುವುದಿಲ್ಲ.


'ಆರತಿ'ಯು,  ಕೆಲಸ ಸಿಕ್ಕ ಮೊದಲ ದಿನ ಕರ್ತವ್ಯಕ್ಕೆ 

ಹಾಜರಾಗಲು ಮಂಜಕ್ಕಳನ್ನು ಕರೆದುಕೊಂಡು ಹೋದಾಗ, 

ಮಂಜಕ್ಕ ನೋಡಿದ ದೃಶ್ಯ ! ಗುಡುಗಿಗೂ ದಿಗಿಲು 

ಬಡಿಸುವಂತಿತ್ತು. ಆದರೆ ಅವಳು ಯಾವುದನ್ನು

 ತೋರುಗೊಡದೆ ಆಸ್ಪತ್ರೆಯಿಂದ ವಾಪಸ್ಸಾಗಿದ್ದಳು. ಊಟ

 ಮಾಡಿ ಮಲಗಿದ ಮಂಜಕ್ಕನಿಗೆ ಎಷ್ಟು ಸಮಯವಾದರೂ

 ನಿದ್ರೆ ಹತ್ತಿರ ಸುಳಿದಿರಲಿಲ್ಲ. ಅವಳ ಆ ಯಾತನೆಗೆ 

ಕಾರಣವಾಗಿದ್ದು, ಆಸ್ಪತ್ರೆ ಯಲ್ಲಿ ನೋಡಿದ ಆ ವ್ಯಕ್ತಿಗಳು. ಆ 

ವ್ಯಕ್ತಿಯ ತಾಯಿ, ಉಡುಪು, ಮಾತುಗಾರಿಕೆ, ವರ್ತನೆಗಳಲ್ಲಿ 

ಹೇಳಬಹುದಾಗಿದ್ದ,   ಶ್ರೀಮಂತ ಹೆಂಡತಿ, ಅವರ ಮಕ್ಕಳು. 

ಅವರ ನಡುವೆ ನಡೆಯುತ್ತಿದ್ದ ಸಂಭಾಷಣೆಯಿಂದಲೇ ಅವರ 

ನಡುವಿನ ಸಂಬಂಧಗಳ ನಂಟನ್ನು ಊಹಿಸಿದ್ದಳು ಸೂಕ್ಷ್ಮೆ 

ಮಂಜಕ್ಕ. ಅವಳ ಮನಸ್ಸಿನಲ್ಲಿ ಹಲವಾರು ಗೊಂದಲ, 

ಪ್ರಶ್ನೆಗಳು ತೂಗುಯ್ಯಾಲೆ ಆಡಿ, ಹಲವಾರು ವರ್ಷಗಳ 

ಅಮೂರ್ತ ಕಲ್ಪನೆ, ಮೂರ್ತ ರೂಪ ತಾಳಿ ಮನಸ್ಸಲ್ಲಿ ದುಃಖ

 ಉಮ್ಮಳಿಸಿ, ಕಣ್ಣೀರ ಹನಿಗಳಾಗಿ ಇಳಿದು ತುಸು 

ಸಮಾಧಾನವಾದಂತಾಗಿ, ತನ್ನ ದುರ್ವಿಧಿಯನ್ನು ನೆನೆಯುತ್ತ 

ಯಾವಾಗ ನಿದ್ದೆ ಸುಳಿದವೋ ಅವಳಿಗೆ ತಿಳಿಯದು.


'ಆರತಿ' ವೈದ್ಯಳಾಗಿ ಏಳೆಂಟು ತಿಂಗಳುಗಳು ಕಳೆದಿರಲು, 

ಅವಳು ಕೆಲಸ ಮಾಡುವಲ್ಲಿ ಆದರ್ಶ ನೆಂಬ ವೈದ್ಯನಿರುತ್ತಾನೆ.

 ಹುಟ್ಟಿನಿಂದಲೂ ಶ್ರೀಮಂತ ಮನೆತನದವನಾಗಿದ್ದು, 

ಆರತಿಗಿಂತ ಎರೆಡು -ಮೂರು ವರ್ಷಕ್ಕೆ 

ದೊಡ್ಡವನಿರಬಹುದಾದ ಸುಂದರ ಯುವಕನಾಗಿದ್ದನು. 

ಸರಳತೆಯ ಪ್ರತೀಕದಂತಿದ್ದ ಆರತಿಗೆ ಮನಸೋತು, ಒಂದು 

ದಿನ ಆರತಿಯ ಬರುವಿಕೆಗಾಗಿಯೇ ಕಾದು, ಆರತಿ 

ಬಂದೊಡನೆಯೇ, ಆರತಿಯವರೇ... ನಾವು ಇಷ್ಟು ದಿನ 

ಉತ್ತಮ ಸ್ನೇಹಿತರಾಗಿ ಒಬ್ಬರನ್ನೊಬ್ಬರು ಅರ್ಥ 

ಮಾಡಿಕೊಂಡಿದ್ದೇವೆ. ನೀವು ಒಪ್ಪುವುದಾದರೆ, ಮುಂದೆ ನಾವು

 ಮದುವೆ ಆಗಿ,ಹೆಚ್ಚಿನ ಓದಿಗಾಗಿ ಮುಂದಿನ ತಿಂಗಳು 

ಅಮೇರಿಕಾಕ್ಕೆ  ಹೋರಾಡಲಿರುವ ಮತ್ತು ನೀವೂ ಹೆಚ್ಚಿನ 

ಓದಿಗಾಗಿ ನನ್ನೊಂದಿಗೆ ಬರಬಹುದೆಂದು, ಇದಕ್ಕೆ ನಿಮ್ಮ 

ಅಭಿಪ್ರಾಯವನ್ನು ಆದಷ್ಟು ಬೇಗ ತಿಳಿಸಬೇಕೆಂದು 

ಹೇಳಿಹೋಗುತ್ತಾನೆ. ಆದರ್ಶನಲ್ಲಿ ಆರತಿಗೂ ಒಲವಿದ್ದ ಕಾರಣ

 ತನಗೆ ಏನು ಮಾಡಬೇಕೆಂದು ಗೊತ್ತಾಗದೇ ಅವನು ಹೋದ

 ದಾರಿಯಲ್ಲಿ ನೋಡುತ್ತಾ,  ನಿಂತ ಅವಳಿಗೆ ಕೊನೆಗು 

ಗಟ್ಟಿಮನಸ್ಸು ಮಾಡಿ ಅಮ್ಮನಲ್ಲಿ ನನ್ನ ಇಷ್ಟವನ್ನು ಹೇಳಿ 

 ಬಿಡಬೇಕೆಂದು ತೀರ್ಮಾನಿಸಿ ಮನೆಗೆ ಬರುತ್ತಾಳೆ.


ಆಗ ತಾನೇ ಕೆಲಸದಿಂದ ಬಂದು ಕಾಫಿ ಮಾಡುವ 

ಕಾರ್ಯದಲ್ಲಿ ಮಗ್ನಳಾಗಿದ್ದ ಮಂಜಕ್ಕ, ಮಗಳು ಬಂದದ್ದನ್ನು 

ಕಂಡು ಅವಳಿಗು  ಕಾಫಿ ಹಾಕಿ ತಂದು ಕೊಡುತ್ತಾಳೆ. ತಾನು 

ಅಲ್ಲೇ ಕಂಬ ಒರಗಿ ಕಾಫಿ ಕುಡಿಯಲು ಕುಳಿತ ಮಂಜಕ್ಕನ 

ಕಾಲ ಕೆಳಗೆ ಕುಳಿತ ಮಗಳು... ಅಮ್ಮ, ನೀನು, ನನ್ನನ್ನು ಎಷ್ಟು

 ಕಷ್ಟ ಪಟ್ಟು ಒಬ್ಬಳೇ ಸಾಕಿ, ನನ್ನನ್ನು ಜವಾಬ್ದಾರಿಯುತ 

ವೈದ್ಯಳನ್ನಾಗಿ ಮಾಡಲು ಪಟ್ಟ ಕಷ್ಟಗಳು,  ನನ್ನೊಂದಿಗಿನ ನಿನ್ನ ಆಸೆಗಳು  

 ನನಗೆ ಅರಿವಿದೆ ಎನ್ನಲು, ಮಂಜಕ್ಕ....ಮಗಳ ತಲೆ ಮೇಲೆ ಕೈ

 ಆಡಿಸುತ್ತಾ, ಅವಳನ್ನೇ ನೋಡುತ್ತಾ.. ಈಗೇಕೆ?? ಆ ಮಾತು

 ಅರು ಎಂದು ಕೇಳುತ್ತಾಳೆ. ನಾನು ಕೆಲಸ ಮಾಡುವಲ್ಲಿ 

ಆದರ್ಶನೆಂಬ ಸಹ ವೈದ್ಯನಿರುವುದನ್ನು, ಬೆಳಗ್ಗೆ ಅವನು 

ಹೇಳಿದ ವಿಷಯವನ್ನೆಲ್ಲ ತಿಳಿಸಿ, ನನಗೆ ಅವನು 

ಇಷ್ಟವಿದ್ದು,ಅವನನ್ನು ಮದುವೆಯಾದರೆ ಅಮೇರಿಕಾದಲ್ಲಿ 

ಇನ್ನೂ ಹೆಚ್ಚಿನ ಓದು ಓದಬಹುದೆಂದು ಮತ್ತೆ ಭಾರತಕ್ಕೆ 

ಬಂದು ಕೆಲಸ ಮಾಡಬಹುದೆಂದು ಹಾಗೂ ನನ್ನ ಜೀವನವು 

ಚೆನ್ನಾಗಿರುತ್ತದೆ ಎಂಬ ಮಗಳ  ಮಾತು ಕೇಳಿ, ಸಿಡಿಲು ಬಡಿದು,

ಆಕಾಶವೇ ಕಳಚಿ ಬಿದ್ದ ಅನುಭವವಾಗಿ, ಪ್ರಜ್ಞೆಯೇ ಇಲ್ಲದಂತೆ

 ಕುಳಿತುಬಿಡುತ್ತಾಳೆ. ಮಗಳ ಬಗ್ಗೆ ನೂರಾರು ಕನಸು ಕಟ್ಟಿ, 

ಕೊನೆಗಾಲದಲ್ಲಿ ಊರುಗೋಳಾಗುತ್ತಾಳೆಂಬ  ಕನಸಿನ  

ಆಶಾಗೋಪುರ ಕುಸಿದು, ಏನು ಹೇಳಬೇಕೆಂದೇ  

ತಿಳಿಯುವುದಿಲ್ಲ. ಸ್ವಲ್ಪ ಸಮಯದ ನಂತರ 

ಸುಧಾರಿಸಿಕೊಂಡು (ತನಗೆ ಇಷ್ಟವಿಲ್ಲದಿದ್ದರು ಮಗಳ ಇಷ್ಟದ 

ವಿರುದ್ಧ ಹೋಗಲು ಆಗದೆ)ನಿನ್ನಿಷ್ಟದಂತೆ ಆಗಲಿ ಅರು ಎಂದು ಹೇಳುತ್ತಾಳೆ.


ಅಂತೆಯೇ ಸ್ವಲ್ಪ ದಿನಗಳಲ್ಲಿ ಆರತಿ -ಆದರ್ಶರ ಮದುವೆ 

ಸರಳವಾಗಿ ನಡೆದು, ಹೆಚ್ಚಿನ ಓದಿಗೋ, ಅಲ್ಲಿಯ 

ನಿವಾಸಿಗಳಾಗುವುದಕ್ಕೋ ಮಗಳು -ಅಳಿಯನನ್ನು 

ಮನಸ್ಸಿಲ್ಲದ ಮನಸ್ಸಿಂದ ಬೀಳ್ಕೊಟ್ಟ ಮಂಜಕ್ಕನಿಗೆ, 

ಮಗಳಿಲ್ಲದ ಮನೆ ಮಸಣದಂತೆ ತೋರಿತು. ಬದುಕಿನ 

ಭರವಸೆಗೆ ದೊಡ್ಡ ಬರಸಿಡಿಲು ಬಡಿದಿತ್ತು. ತನ್ನ ಸುಖವನ್ನೇ 

ಮಗಳ ಸುಖವೆಂದು ಬಗೆದು ಹಗಲಿರುಳು ಸಾಕಿದ ತಾಯಿಯ 

ಬಗ್ಗೆ ಮಗಳು ಸ್ವಲ್ಪವೂ ಯೋಚಿಸದೇ ತನ್ನ ಜೀವನ, ಸುಖ, 

ಸ್ವಾರ್ಥ ಯೋಚಿಸಿದ್ದು ಮಂಜಕ್ಕನ ಮನಸ್ಸಿನಲ್ಲಿ ಅಗಾದ 

ಗಾಯ ಮಾಡಿತ್ತು. ಇಲ್ಲಿಯವರೆಗೆ ಮಂಜಕ್ಕನಿಗೆ ಮಗುವಾಗಿದ್ದ

 ಅರು ಈ ದಿನ ಬೆಳೆದು ನಿಂತ 'ಆರತಿ'ಯಾಗಿ ಕಂಡಳು. ನನ್ನ 

ಮಗಳು ಇಷ್ಟು ಸ್ವಾರ್ಥಿಯಾಗಲು ಹೇಗೆ ಸಾಧ್ಯವೆಂಬುದನ್ನು 

ಜೀರ್ಣಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾಯಿತು ಮಂಜಕ್ಕನಿಗೆ.


ಮಗಳಿಲ್ಲದ ದುಃಖ ಅತಿಯಾಗಿ ಕಾಡುತ್ತಿರಲು.. ಒಂದು ದಿನ 

ಹೀಗೆ ಅಜ್ಜಿ ಒರಗಿ ಕುಳಿತುಕೊಳ್ಳುತ್ತಿದ್ದ ಹಳೆಯ ಮರದ 

ಕಂಬವನ್ನು ಒರಗಿ ಕುಳಿತಿರುವಾಗ, ಹೊರಗಡೆ ಸಿಡಿಲು, 

ಮಿಂಚು, ಗುಡುಗುಗಳಿಂದ ಭೋರ್ಗರೆದು ಸುರಿಯುವ ಮಳೆ.

 ಮಂಜಕ್ಕನ ಮನಸ್ಸಲ್ಲಿ ಮತ್ತೊಮ್ಮೆ ಸಿಡಿಲು ಬಡಿದಂತಾಗಿತ್ತು. 

ಅವಳ ಮನಸ್ಸಲ್ಲಿ ಅದೇನೋ ಹೊಳೆಯಿತು, ಆಶಾದೀಪ 

ಬೆಳಗಿದಂತಾಯಿತು, ಅನಾಥೆಯನ್ನು ಸಾಕಿ ಸಲಹಿದ ಅಜ್ಜಿ ಆ 

ಬೆಳಕಿನಲ್ಲಿ ಕಂಡಿದ್ದಳು. ಹಿಂದಿನ ಮಹಾದಾಸೆ, ತನ್ನಂತೆ 

ಅನಾಥರ ಸೇವೆ ಮಾಡುವ ಯೋಚನೆ ಗುಡುಗಿತ್ತು. ಅಜ್ಜಿಯ 

ಮನೆಯನ್ನೇ ಅನಾಥರನ್ನು ಸಲಹುವ ಅನಾಥಾಲಯ 

ಮಾಡುವ ಮಿಂಚು ಮಿಂಚು ಮರೆಯಾಗಿತ್ತು.









ಬುಧವಾರ, ಸೆಪ್ಟೆಂಬರ್ 23, 2020

ಬೀಜ

 ನಾನು ಅರಿವಿದ್ದ ದಿನಗಳಲ್ಲಿ ಮನೆಯ ಮುಂದೆ ಪ್ರಾಮಾಣಿಕತೆಯ 

ಬೀಜ ಬಿತ್ತಿದ್ದೆ. ಅದು ಸಸಿಯಾಗಿ  ಬೆಳೆದು ಬೆಳೆದು 

ಹೆಮ್ಮರವಾಗುವುದರಲ್ಲಿದೆ ಎಂದು ಹಗಲುಗನಸು ಕಂಡಿದ್ದೆ.ಆದರೆ 

ಅದು ಕವಲೊಡೆದು, ಕಾಣದ ಅಸ್ಮಿತಕ್ಕೆ ಬಾಗಿದೆ. ನಾನೀಗ ಮತ್ತೆ 

ಅದೇ ಬೀಜಬಿತ್ತಿದ ಜಾಗದಲ್ಲಿ ನೀರಿಕ್ಷೆಯಲ್ಲಿದ್ದೇನೆ. 



ಮಂಗಳವಾರ, ಸೆಪ್ಟೆಂಬರ್ 22, 2020

ಮಲೆಗಳಲ್ಲಿ -ಮದುಮಗಳು






 


    ನನ್ನನ್ನು ದೀರ್ಘವಾಗಿ ಓದಿಸಿದ ಪ್ರೀತಿಯ ಪುಸ್ತಕ ಕುವೆಂಪುರವರ "ಮಲೆಗಳಲ್ಲಿ ಮದುಮಗಳು " ಕಾದಂಬರಿ. 712 ಪುಟಗಳಿರುವ ಈ ಬೃಹತ್ ಕಾದಂಬರಿಯಲ್ಲಿ ಪಾತ್ರವರ್ಗ, ಸ್ಥಳಗಳು, ಜಾತಿ, ಪಂಗಡಗಳ ವಿವರಣೆಗಳ ಸುತ್ತ ಹೆಣೆದುಕೊಳ್ಳುತ್ತಾ ಅಂದಿನ ಮೇಲುಜಾತಿ, ಕೀಳುಜಾತಿಯ ವಿಡಂಬನೆ, ಕೂಲಿ ಆಳುಗಳನ್ನು ನಡೆಸುಕೊಳ್ಳುತಿದ್ದ ಹೀನಾಯ ಸ್ಥಿತಿ, ಬ್ರಾಹ್ಮಣ ವರ್ಗದವರೇ ಶ್ರೇಷ್ಠರೆಂದು, ಉಳಿದ ವರ್ಗದವರನ್ನು ಹೀನಾಯವಾಗಿ ಕಾಣುತ್ತಾ ಅವರ ಮೂಢಾಚಾರಗಳನ್ನು ಜೀವನೋಪಾಯ ಸಂಪಾದನೆಗೆ ಬಂಡವಾಳ ವಾಗಿಸಿದ್ದ ಬ್ರಾಹ್ಮಣರ ಮನೋಧರ್ಮ, ಪುರುಷ ಪ್ರಾಧಾನ್ಯತೆಯ ಸಮಾಜ, ಮಹಿಳೆಯ ಅಸಮಾನತೆ, ಮೂಢನಂಬಿಕೆ, ಬಡತನ, ಕ್ರೈಸ್ತಧರ್ಮದ ಪ್ರಚಾರದ ವಿವಿಧ ರೀತಿಗಳು, ಮಲೆನಾಡಿನ ವರ್ಣನೆ, ಸಹ್ಯಾದ್ರಿಯ ಬೆಟ್ಟಗಳ ವರ್ಣನೆ, ದಟ್ಟ ಕಾಡಿನ ರಮಣೀಯತೆಯ ಭವ್ಯವಾದ ಕಣ್ಣುಕಟ್ಟುವ ವರ್ಣನೆ, ಕಾಡಿನ ಭೀಕರತೆ, ಕೃಷಿ, ತೋಟಗಾರಿಕೆ, ಅಂದಿನ ಆಚಾರ -ವಿಚಾರ, ಹಳ್ಳಿಯ ಸೊಗಡು, ನುರಿತ ಗ್ರಾಮ್ಯ ಭಾಷೆಯ ಸುತ್ತ ಒಂದರೊಳಗೊಂದು ಹೆಣೆದುಕೊಳ್ಳುತ್ತಾ ಸಾಗುತ್ತದೆ.

ಕಾದಂಬರಿಯಲ್ಲಿನ ಊರುಗಳಾದ ಸಿಂಬಾವಿ, ಲಕ್ಕುಂದ, ಮೇಗರವಳ್ಳಿ, ಬೆಟ್ಟಳ್ಳಿ, ಕೋಣೂರು, ತೀರ್ಥಹಳ್ಳಿ, ಕಾಗಿನಹಳ್ಳಿ ಹೂವಳ್ಳಿ, ಕಾನೂರು... ಇತ್ಯಾದಿ ಹಾಗೂ ಪ್ರಸ್ತಾಪವಾಗಿರುವ ವ್ಯಕ್ತಿಗಳಾದ ಭರಮೈಹೆಗ್ಗಡೆ, ಜಗ್ಗಮ್ಮ, ಸುಬ್ಬಣ್ಣಹೆಗ್ಗಡೆ, ಮುಕುಂದಯ್ಯ, ಚಿನ್ನಮ್ಮ, ನಾಗತ್ತೆ, ನಾಗಕ್ಕ, ವೆಂಕಟಣ್ಣ ಗೌಡ್ರು, ಲಕ್ಕಮ್ಮ, ತಿಮ್ಮಪ್ಪಹೆಗ್ಗಡೆ, ಮಂಜಮ್ಮ, ಶಂಕರಹೆಗ್ಗಡೆ, ರಂಗಮ್ಮ(ಹುಚ್ಚು ಹೆಗ್ಗಡತ್ತಿ ), ಸೀತಮ್ಮ, ಕಲ್ಲಯ್ಯಗೌಡ್ರು,   ದೇವಯ್ಯಗೌಡರು, ದೇವಮ್ಮ, ರಂಗಪ್ಪಗೌಡರು, ದೊಡ್ಡಣ್ಣಹೆಗ್ಗಡೆ, ಧರ್ಮು, ಕಾಡು, ತಿಮ್ಮು, ರಾಮು, ಗುತ್ತಿ, ತಿಮ್ಮಿ, ಐತ, ಪಿಂಚಲೂ, ಬಚ್ಚ, ಕರಿಸಿದ್ದ, ಸಣ್ಣತಿಮ್ಮ,ಚಿಂಕ್ರ, ದೇಯಿ, ಅಕ್ಕಣ್ಣಿ..ಇತ್ಯಾದಿ ಪಾತ್ರಗಳೊಂದಿಗೆ ಕಾದಂಬರಿ ಬೆರೆದು ಅದ್ಭುತ ಲೋಕಕ್ಕೆ ಕರೆದೊಯ್ಯುತ್ತದೆ.

ನನ್ನನ್ನು ಅತಿಯಾಗಿ ಕಾಡಿದ ಪಾತ್ರಗಳೆಂದರೆ ಒಡಯರಿಗೆ ನಿಷ್ಠ ಆಳುಗಳಾದ (ಸ್ವಾಮಿ ನಿಷ್ಠರು )ಗುತ್ತಿ, ಐತ, ಚೊಚ್ಚಲ ಬಸಿರು ಹೊತ್ತಿದ್ದರು, ಮುಕುಂದಯ್ಯ -ಚಿನ್ನಮ್ಮರನ್ನು ಒಂದಾಗಿಸುವುದಕ್ಕಾಗಿ ಸರ್ವಸ್ವವನ್ನು ಲೆಕ್ಕಿಸದೆ ಶ್ರಮವಹಿಸುವ ಪಿಂಚಲು. 
 
ಚಿನ್ನಮ್ಮಳಿಗೋಸ್ಕರ ಸೀರುಡಿಕೆಯಾದ ತಾಯಿ ಸ್ವರೂಪಿ ನಾಗಕ್ಕ.                                                                                                                                                                                   ಚಿಂಕ್ರ ಮತ್ತು ದೇಯಿಯ ಮಕ್ಕಳನ್ನು   ತನ್ನ  ಮಕ್ಕಳಾಗಿ ಪ್ರೀತಿ ತೋರುವ ಅಕ್ಕಣ್ಣಿ. 

ಸ್ವಾಮಿಭಕ್ತ ಹುಲಿಯ (ಗುತ್ತಿಯ ನಾಯಿ )ತನ್ನ ಒಡೆಯನಿಗಾಗಿ ಭೋರ್ಗರೆದು ಹರಿಯುತ್ತಿರುವ ತುಂಗೆಯನ್ನು ಲೆಕ್ಕಿಸದೆ ನದಿಗೆ ಹಾರಿ ಪ್ರವಾಹದ ವಿರುದ್ಧ ಈಜಿದ ಗುತ್ತಿಯ ಪ್ರೀತಿಯ ಕುನ್ನಿ. 

ಮುಕುಂದಯ್ಯ -ಚಿನ್ನಮ್ಮರ ಪ್ರೀತಿ, ಪ್ರಲಾಪ, ಅಕ್ಕರೆಯ ನಡವಳಿಕೆ. 

ವೇಷ -ಭೂಷಣ, ಆಚಾರ -ವಿಚಾರಗಳಲ್ಲಿ ಕ್ರೈಸ್ತಧರ್ಮದ ಅನುಸರಿಸುತ್ತಿದ್ದ ದೇವಯ್ಯಗೌಡರು. 

ದೊಡ್ಡ ವಿದ್ವಾಂಸರಾಗಿ, ಪವಾಡಪುರುಷರಾಗಿ, ಸಂನ್ಯಾಸಿಯಾಗಿ ಗೋಚರವಾದ ಗಡ್ಡದಯ್ಯ. ಗಡ್ಡದಯ್ಯ ಹೇಳಿದ ಸ್ವಾಮಿ ವಿವೇಕಾನಂದರು ಭರತಖಂಡವನ್ನು ಸಂಚರಿಸಿ, ಭೋದಿಸಿ ಹೊಸದೊಂದು ಯುಗಶಕ್ತಿಯನ್ನು ಉದ್ಬೋದನಗೊಳಿಸುವ ವಿಚಾರ. 

ಸಾಬಾರುಗಳ ಮೋಸ -ವಂಚನೆಯ ವ್ಯಾಪಾರ, ಕೊಲೆ -ಸುಲುಗೆ, ಹೊಡೆತಗಳು. 

ಕೆಲವೊಂದು ಪಾತ್ರಗಳ ವರ್ತನೆ  ನಮ್ಮನ್ನು ಕಲ್ಪನೆಗೂ ಮೀರಿ ಯೋಚನಾಲೋಕಕ್ಕೆ ತಳ್ಳಿ ಮತ್ತೆ ವಾಸ್ತವಕ್ಕೆ ಕರೆತರುತ್ತವೆ. ಈ ಕಾದಂಬರಿಯನ್ನು ಓದುತ್ತಾ ಅದರೊಳಗಿನ ಒಂದು ಪಾತ್ರವಾಗಿ, ಅಲ್ಲಿದ್ದ ಪಾತ್ರಗಳೆಲ್ಲ ನನ್ನ ಸುತ್ತಮುತ್ತಲಿನವರಂತೆ ವಿಜೃಂಭಿಸಿ ಖುಷಿ ದೊರೆತು,ಅನಘ್ಯ ಅನುಭವ ಮೈ ಹೊಕ್ಕಿತು. 

ಕುವೆಂಪುರವರ ಕಲ್ಪನೆಯಲ್ಲಿ ಮೂಡಿಬಂದಿರುವ ಪ್ರತಿಯೊಂದು ಪಾತ್ರಗಳು ಅನನ್ಯ ಹಾಗೂ ಅದಮ್ಯವಾಗಿವೆ. ಕುವೆಂಪುರವರ ವಿಸ್ತೃತ ಕಲ್ಪನೆಗೆ ಪ್ರತಿಯೊಂದು ಪಾತ್ರಗಳು ಶರಣಾಗಿವೆ. 
ಇಂತಹ ಬೃಹತ್ ಕಾದಂಬರಿಯಲ್ಲಿಯ ಅದ್ಭುತವಾದ ಸಾಹಿತ್ಯವನ್ನು ಸವಿಯುವಂತೆ ಮಾಡಿದ  ಆತ್ಮಕ್ಕೆ ನಾ ಸದಾ ಚಿರಋಣಿ. 




ಸೋಮವಾರ, ಆಗಸ್ಟ್ 24, 2020

ನನ್ನಪ್ಪ

ಹಂಗಿಲ್ಲದ ಅಪ್ಪನ ಗುಡಿಸಲಿನ ಅರಮನೆಯಲ್ಲಿ 
ನನ್ನಪ್ಪ ಮಲಗಿ ಏರುಸಿರು ಬಿಡುತ್ತಿದ್ದ 
ಮಂಚವಿಂದು ಒಂಟಿಕಾಲ ಕೊಕ್ಕರೆಯಾಗಿದೆ 
ಅಪ್ಪನ ಉಸಿರಂತೆ ಇಂದು ಸೊಳ್ಳೆಗಳು ಸುಯ್ಗುಡುತ್ತಿವೆ 
ಮೂಗಿಗೆ ಆಗಾಗ್ಗೆ ಬಡಿಯುತ್ತಿದ್ದ ಮೋಟು ಬೀಡಿಯ 
ಘಾಟು ಹೊಗೆಯ ರೂಪ ಕಳಚಿ, ಹೊಸಬಟ್ಟೆ ಧರಿಸಿ 
ಊರು ಸುತ್ತಲು ಹೋಗಿದೆ. 
ಚರ್ಮ ಸವೆದು ಸವಕಳಿಯಾಗಿ, ಜಗತ್ತಿಗೆ ಅನ್ನನೀಡುವ 
ನಾಡ  ಬೆನ್ನೆಲುಬಿನ, ಅಸ್ಥಿಪಂಜರದ  ಸಾಹುಕಾರ ನನ್ನಪ್ಪ. 
ಕೆನ್ನೀರ ಹನಿಗಳನ್ನು ಬೆವರಾಗಿಸಿ ಬಸಿದು 
ಜಳಕ ಮಾಡಿ ನುಣುಪಾಗಿ ನರಳುತ್ತಿದ್ದ ನನ್ನಪ್ಪ. 
ಹೊಟ್ಟೆಯಲ್ಲಿ ಗಾಳಿಚೀಲ ಹೊಕ್ಕಿಸಿ ವಿಚಾರ -ಪ್ರಚಾರಗಳ 
ಬಾಗಿಲು ಕಿಟಕಿಗಳ ಕದ ಮುಚ್ಚಿ ಬಿಟ್ಟಿದ್ದ ನನ್ನಪ್ಪ. 
ತನ್ನ ಜಿಡ್ಡಿಲ್ಲದ  ರಕ್ತದಿಂದ ಗುಳ್ಳೆನರಿಗಳನ್ನು ಕೊಬ್ಬಿಸಿ 
ಮಲಗಿಸಿ, ಹರಕು -ಮುರುಕಿನ ಧೋತರ ಪೇಟವಾಗಿಸಿ 
ಜೈ ಜವಾನ್, ಜೈ ಕಿಸಾನ್ ನಂತೆ ಮಿಂದೇಳುತ್ತಿದ್ದ ನನ್ನಪ್ಪ.
ತಾಳ್ಮೆ -ಶಾಂತಿಗಳ ಸಸಿ ಬಿತ್ತಿ ಹೊತ್ತಿದ್ದ ಭಾವ ಮೂರ್ತಿ ನನ್ನಪ್ಪ
ಅದೆಷ್ಟು ತಾಳ್ಮೆ ಅಪ್ಪನಿಗೆ..?ಜಿಗಣೆಗಳು 
ಉಸಿರಾಡುತ್ತಿದ್ದದ್ದು ಅಪ್ಪನಿಂದ,ಅಪ್ಪನ ಮುದ್ದಿನ ರಕ್ತ ಬೀಜಾಸುರಗಳು 
ಅಸಲಿಯೆಂದರೆ ಈಗೀಗ ಅವುಗಳಿಗೂ ಅಪ್ಪನ 
ಬತ್ತಿದ ದೇಹದ ಮೇಲೆ ವೈರಾಗ್ಯದ ಮುನಿಸು 
ಎತ್ತುಗಳಂತೆ ನೇಗಿಲು ಹೊರುವ ಅಪ್ಪನಿಗೆ 
ಕಪಟ, ಕುಟಿಲ ಕುಯುಕ್ತಿಯ ತೇರು -ಬೇರಿನ 
ಅರ್ಬುತ ರೋಗಗಳ ಅರಿವಿಲ್ಲ 
ತನ್ನ ಛಲ -ಬಲದ ಬೇರು ಬತ್ತಿದ್ದರು ನಗುತ್ತಿದ್ದ, 
ಅಮಾವಾಸ್ಯೆಯ ಹೂವಂತೆ 
ಸಾಲವೆಂಬುದು ಅವನ ಜೇಬಿನಲ್ಲಿರುವ ತೂತುಗಳ 
ಹಾಹಾಕಾರದ ಹಾಲಿನ ಸಮಾಧಿಯ 
ಮೇಲೆ ತೂಗುತ್ತಿರುವ ನೇಣುಗತ್ತಿ 
ದಿನ ಅಂಗಳದಲ್ಲಿ ಬಣಗುಡುತ್ತಿದ್ದ ನನ್ನಪ್ಪ 
ಇಂದು ಯಾವ ದಾರಿ ಹಿಡಿದ್ದಿದ್ದಾನೋ? 
ತನ್ನ ಶ್ರಮದ ಭಾರದ ಫಲಗಳ ಹೊರಲಾರದೇ 
ಯಾವ ತಾಯಿ ನೆಟ್ಟ ಮರದ ರೆಂಬೆಗೆ 
ತನ್ನ ನೊಗದ ಕೊರಳ ಕೊಟ್ಟಿದ್ದಾನೋ? 
ನನ್ನಪ್ಪನಂತೆ ಅದೆಷ್ಟೋ ಅಪ್ಪಂದಿರ 
ಕರುಳ ರೋದನಕ್ಕೆ ಬಲಿಯಾಗಿದ್ದಾನೋ..? 
ಶೃಂಗರಿಸುತ್ತಿದ್ದ ಭೂತಾಯಿಯನ್ನೇ ಎಲ್ಲಿ 
ಹೊದ್ದು ನೆಮ್ಮದಿಯ ನಿದ್ದೆಯ ಕನಸು ಅರಸಿ 
ಅಂಗಾತ ಮಲಗಿರುವನೋ ತಿಳಿದಿಲ್ಲ 
ಆದರೆ ಅಪ್ಪ ಹೆಮ್ಮೆಯ ಬೀಜ ಬಿತ್ತಿದ್ದಾನೆ
ಅದೀಗ ಮೊಳಕೆಯೊಡೆದು ನೆರಳಿನ ಅರಳಿ ಮರವಾಗಿದೆ
ನಾನು ರೈತ ಪುತ್ರಿ, ಅನ್ನದಾತನ ಹೆಮ್ಮೆಯ ಜೀವ ಪುತ್ರಿ. 






ಗುರುವಾರ, ಆಗಸ್ಟ್ 13, 2020

ನಿರಾಕರಣೆ

ನನ್ನ ಮರೆತ ಹೊನ್ನ ಮೆತ್ತ ಹೊತ್ತು 
ನನ್ನ ತೊರೆದು  ಯೋಚಿಸಿದ 
ಆ ಘಳಿಗೆಗಳ ಚಲನಗಳು 
ಕಳಚುತ್ತಿವೆ, ಇಂದು-ನಾಳೆಗಳ ಅಂಗಿಯ 
ಯಾರ ಕತ್ತಲು ಯಾರ ಒಡಲ್ಲಲ್ಲಿ 
ಜಿನುಗಿ ಹಾವಾಗುತ್ತಿರುವುದೋ 
ಕಡಲ ತುಂಬೆಲ್ಲ ಬರುವ ನಿನ್ನ ನೆನಪಿನ 
ಆರಿದ ಮಲ್ಲಿಗೆಯ ಕೆಂಡಗಳು 
ಎಷ್ಟು ಹೊತ್ತು ಸುಡಬಲ್ಲವು ನನ್ನ 
ಕರಕಲಾಗಿಸಲು ಅಥವಾ ಕಪ್ಪು ಬಣ್ಣ ಹಚ್ಚಲು 
ಬೇಕ ಸಮಯದ ಎಲ್ಲೆಗಳು 
ಬೂದಿಯ ಮಣ್ಣಲ್ಲಿ ಒಲೆಯ ತೂತುಗಳಾಗಿ 
ಹರಿದು ಹೋಗಲಿ 
ಎಷ್ಟೆಂದು ಉರಿಯ ಕಾವಿಗೆ ತಲೆ, ಕಾಲು ಕೊಡಲಿ 
ಆತ್ಮಶಕ್ತಿಯ ಅಂತರಾಗದ ಹಾಹಾಕಾರ ಮುಗಿಲೆದ್ದಿದೆ 
ಒಡಲಿನ ಭಾರ ಹೆಚ್ಚಿ ನಜ್ಜಾಗುತ್ತಿದೆ 
ಆಳಗರ್ಭದಲ್ಲಿ ಅಡಗಿ ನೆರೆ ಉಕ್ಕದಿರಲಿ 
ಅಲ್ಲೇ ಬೆನ್ನು ಮೇಲಾಗಿಸಿ, ಸಮುದ್ರರಾಜನ 
ತೋಳಲ್ಲಿ ಮಲಗಲಿ 
ನನ್ನೊಬ್ಬಳದೇ ಎಂಬ ಸಾಕ್ಷಾತ್ಕಾರ 
ಗೋರಿಯ ಮೇಲೆ ಬೆಳೆದ ರಜವಾಗಿದೆ 
ಕಳೆಯ ಭಾರಕೆ,  ನೀ ಬರುವ ದಾರಿ ಕಾಣುತ್ತಿಲ್ಲ 
ಇಂದು -ನೆನ್ನೆಗಳಲ್ಲಿ ಭೂಗತವಾಗಿ ನಿರಾತ್ಮವಾಗಿದ್ದ 
ಅಣುಗಳೆಲ್ಲ ಕಣ್ಣು, ಕಿವಿ, ಮೂಗು, ಬಾಯಿಗಳಾಗಿ
ಅಸ್ಥಿಪಂಜರಕ್ಕೆ ಇಂದು ರೆಕ್ಕೆ ಬಂದು ಉಸಿರಾಡುತ್ತಿವೆ 
ನನ್ನ ನೋವುಗಳೆಲ್ಲ ಸುಟ್ಟ ಬದನೆಕಾಯಿಗಳಾಗಿ 
ಹೊಟ್ಟೆ ಸೇರಿ ಆರಾಮದಲ್ಲಿ ನಿದ್ರಿಸುತ್ತಿವೆ.  




ಬುಧವಾರ, ಆಗಸ್ಟ್ 5, 2020

ಕೊಡಗಿನ ಪ್ರತಿಭಾನ್ವಿತ ಕವಿ ಕಾಜೂರು ಸತೀಶ್

                 ನನ್ನ ಈ ಲೇಖನ ಕೊಡಗಿನ ಪ್ರತಿಭಾನ್ವಿತ ಯುವ ಕವಿ ಹಾಗೂ ಭಿನ್ನತೆಯಲ್ಲಿ ವಿಭಿನ್ನತೆ ಮೆರೆವ,  ತನ್ನ ಆಸಕ್ತಿಯ ಕ್ಷೇತ್ರಗಳಲ್ಲಿ ಹವ್ಯಾಸಗಳ ಮೂಲಕ,  ಇಂದಿನ ಯುವ ಜನತೆಗೆ ಪ್ರೇರಣೆಯಾಗಿರುವ ಅನುವಾದಕ,  ಸಂವೇದನಾಶೀಲ ಯುವ  ಸಾಹಿತಿ,  ಶಿಕ್ಷಕ..  ಚಿಂತಕ  ಕಾಜೂರು ಸತೀಶ್ ರವರ ಕುರಿತಾಗಿದೆ.

  ಶ್ರೀ. ನಾರಾಯಣ್ ಮತ್ತು  ಶ್ರೀಮತಿ. ವಿಶಾಲಾಕ್ಷಿ ಯವರ ಪ್ರೀತಿಯ ಪುತ್ರ K. N. ಸತೀಶ್. ಇವರ ವಾಸ್ತವ್ಯ ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೋಕಿನ ಕಾಜೂರು ಗ್ರಾಮ.
        
      2015ರ " ಕಡೆಂಗೋಡ್ಲು  ಶಂಕರಭಟ್ಟ  ಕಾವ್ಯ ಪುರಸ್ಕಾರ " ಪಡೆದ ಸತೀಶ್ ರವರ ಮೊದಲ  ಕವನ ಸಂಕಲನ "ಗಾಯದ ಹೂವುಗಳು "  ಮತ್ತು ಮಲಯಾಳಂ ಕವಿತೆಗಳ ಅನುವಾದಿದ ಪುಸ್ತಕ "ಕಡಲಕರೆ "ಗೆ..ತಡವಾಗಿಯಾದರೂ ಅಭಿನಂದನೆಗಳನ್ನು   💐💐ತಿಳಿಸುತ್ತಾ... ಮುಂದುವರೆಯುತ್ತೇನೆ.
      
                            ನಾ ಅರಿತಂತೆ ಸತೀಶ್ ರವರ  ಕವಿತೆಗಳಲ್ಲಿ ಅವರಂತೆ ಉತ್ಸಾಹವಿದೆ.ಸಾಮಾನ್ಯ ಓದುಗರನ್ನು ಯೋಚನಾ ಮಗ್ನರನ್ನಾಗಿಸುವ ಶಕ್ತಿ ಇದೆ. ಇಂದಿನ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಆಕ್ರೋಶವಿದೆ. ಬೇಸರ, ಕಾಳಜಿ, ನೋವು, ಸಮಾನತೆಗಾಗಿ ಹಂಬಲ, ಭ್ರಷ್ಟಾಚಾರದ ವಿರುದ್ದ ದನಿ, ಪರಿಸರ ಕಾಳಜಿ, ಪ್ರೇರಣೆಯ ಶಕ್ತಿ,  ಇವುಗಳು ಅವರ ಕವಿತೆಯಲ್ಲಿ ಉಸಿರಾಡುತ್ತವೆ. ಸತೀಶ್ ರವರು  ಕವಿತೆಗಳನ್ನು ಹಡೆಯುವ ಪರಿ ನಮ್ಮಂಥ ಸಾಮಾನ್ಯ ಓದುಗರನ್ನು ಚಿಂತನಾಶೀಲರನ್ನಾಗಿಸುತ್ತದೆ.

     ಬುದ್ಧನ ತತ್ವಗಳಿಗೆ ಶರಣು ಹೋಗಿರುವ ಸತೀಶ್ ರವರು.. ಓದು ಮತ್ತು ಏಕಾಂತವನ್ನು ಸಂಗಾತಿಯನ್ನಾಗಿಸಿ ಕೊಂಡಿದ್ದಾರೆ. ಹೆಚ್ಚಾಗಿ ಏಕಾಂತವನ್ನು ಪ್ರೀತಿಸಿ.. ಅಪ್ಪಿರುವ ಇವರು ಏಕಾಂತ ಪರಿಭಾವಿ. ಶಿಕ್ಷಕರಾಗಿಯೂ ಹೆಚ್ಚಿನ ಜ್ಞಾನ ಹೊಂದಿರುವ ಇವರು ಎಲ್ಲರೊಂದಿಗೂ ಸ್ನೇಹಜೀವಿ. ಯಾವುದೇ ವೃತ್ತಿ /ಸೇವೆ ಕೊಟ್ಟರು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವ ಮೃದು ವ್ಯಕ್ತಿತ್ವದ ಆಶಾಭಾವಿ.
  
ಸೂಕ್ಷ್ಮ ದೃಷ್ಟಿಕೋನದಲ್ಲಿ ಗಮನಿಸಿದಾಗ ಭಿನ್ನರಲ್ಲಿ ವಿಭಿನ್ನರಾಗಿ ಕಾಣುವ ಸತೀಶ್ ರವರು ಸಾಹಿತ್ಯವಲ್ಲದೇ ಇತರ ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದಾರೆ.

  ಸತೀಶ್ ರವರ ಫೋಟೋಗ್ರಫಿ :-ಪರಿಸರ ಪ್ರೇಮಿಯು
  ಹೌದಾಗಿರುವ ಇವರು,  ಸಾಮಾನ್ಯ ವಸ್ತು.. ಸಂಗತಿಗಳನ್ನು ತನ್ನ ದೃಷ್ಟಿಯಲ್ಲಿ ವಿಶೇಷವಾಗಿ ಕಾಣುತ್ತಾ.. ಪ್ರಕೃತಿ, ಸಸ್ಯ, ಪಕ್ಷಿ ಹೀಗೆ  ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ವಿಶೇಷವಾಗಿ ತೋರಿಸುವ ಕಲೆ ಕರಗತವಾಗಿಸಿಕೊಂಡಿದ್ದಾರೆ. ನಮ್ಮ ಸುತ್ತಮುತ್ತಲಿನ ವಸ್ತುಗಳು ಸತೀಶ್ ರವರ  ಕ್ಯಾಮರಾ ಕಣ್ ಚಳಕದಲ್ಲಿ ಕಂಡಾಗ  wow.. !ಎಂಬ ಉದ್ಗಾರ ಹೊರಡಿಸುವಂತಿರುತ್ತವೆ.   ಪಕ್ಷಿಗಳನ್ನು ಪ್ರೀತಿಸುವ ಇವರು ಅವುಗಳೊಂದಿಗೆ ನಂಟು ಹೊಂದಿದ್ದು.. ಪಕ್ಷಿಗಳ ಬಗ್ಗೆ ಅಪಾರ ಜ್ಞಾನ ತುಂಬಿಕೊಂಡಿದ್ದಾರೆ.

      ಮಾತುಗಳೇ ಮತ್ತೆ ಮತ್ತೆ ಆಲಿಸುವಷ್ಟು ಹಿತವೆನ್ನಿಸುವಾಗ ಹಾಡಿದರೆ ಎಷ್ಟು ಚಂದ...!! ಹೌದು ಸತೀಶ್ ರವರ ಹಾಡುಗಾರಿಕೆ ಕೇಳಲು ಇಂಪಾಗಿರುತ್ತದೆ. ಸತೀಶ್ ರವರು ಹಾಡಿರುವ  ಕನ್ನಡ, ಮಲಯಾಳಂ, ಹಿಂದಿ ಭಾಷೆಯ ಚಲನಚಿತ್ರಗೀತೆಗಳು, ಭಾವಗೀತೆಗಳು ಅವರ ಹಾಡುಗಾರಿಕೆಯಲ್ಲಿನ ಆಸಕ್ತಿ., ತೊಡಗಿಸಿಕೊಳ್ಳುವಿಕೆಯನ್ನು ಸಾಕ್ಷಿಕರಿಸುತ್ತವೆ.

            ಚಿತ್ರಕಲೆಯನ್ನು ಹವ್ಯಾಸವಾಗಿಸಿಕೊಂಡಿರುವ  ಸತೀಶ್
ರವರು ವರ್ಣಚಿತ್ರಗಳು... ಡಿಜಿಟಲ್ ಪೇಂಟಿಂಗ್..ಹೀಗೆ ವಿವಿಧ ರೀತಿಯ ಕಲಾತ್ಮಕ ಚಿತ್ರಗಳನ್ನು ಅರಳಿಸುವಲ್ಲಿ ನಿಸ್ಸೀಮರು.ಫೇಸ್ಬುಕ್, ಇನ್ಸ್ಟಾಗ್ರಾಮ್, ಸ್ಟಾರ್ ಮೇಕರ್, youtube ಗಳಲ್ಲಿ ಅವರು ತೊಡಗಿಸಿ ಕೊಂಡಿರುವ ರೀತಿ ಶ್ಲಾಘನೀಯ. 

 Kajoorusathish.blogspot.com ಈ ಬ್ಲಾಗ್ ಅನ್ನು ಒಮ್ಮೆ ವೀಕ್ಷಿಸಿದರೆ ಅವರ ಕವಿತೆಗಳು, ಬರಹ, ವಿಮರ್ಶೆ ಗಳು, ಹೀಗೆ ಸಾಹಿತ್ಯಾಭಿರುಚಿ ಅವಲೋಕನವಾಗುತ್ತದೆ. 

ಕಾಡಿನ ಹಾದಿಯಾದರೂ ಸೈ.. !ಎನ್ನುವ ಅನ್ವೇಷಣಾ ಮನೋಭಾವದ ನಮ್ಮ ಸತೀಶ್ ರವರಿಗೆ ಗೆಳೆಯರ ಜೊತೆಗೂಡಿ  ಚಾರಣ ಹೋಗುವುದು,   ಬಲುಪ್ರೀತಿಯ   ಹವ್ಯಾಸಗಳಲ್ಲಿ ಒಂದಾಗಿದೆ.  ಮಾಡೆಲಿಂಗ್ ಕ್ಷೇತ್ರಕ್ಕೂ ಸೈ ಎನ್ನುವ ರೀತಿಯ ಸುಂದರ, ಸದೃಢಕಾಯ ಸತೀಶ್ ರವರಿಗೆ... ಸತೀಶ್ ರವರು ಮಾತ್ರ ಸಾಟಿ.

     ಸಾಮಾಜಿಕಜಾಲತಾಣಗಳು... youtube.. ನಂತಹ ವಿಡಿಯೋ ಶೇರಿಂಗ್  ಸರ್ವಿಸ್ಗಳಲ್ಲಿ ಸರ್ಕಾರಿಶಾಲೆ ಮತ್ತು ಸರ್ಕಾರಿ ಶಾಲಾಮಕ್ಕಳ ಪ್ರತಿಭೆ.. ಕವಿತಾವಾಚನ ಹೀಗೆ ಹಲವಾರು ಉಪಯುಕ್ತ ಮಾಹಿತಿಗಳನ್ನು ಪಸರಿಸುವಲ್ಲಿ ಸಕ್ರಿಯರಾಗಿದ್ದಾರೆ.   " ಯಾರಲ್ಲೂ ಸಲ್ಲದ ಕಲೆಗಳು.. ಸತೀಶ್ ರವರಿಗೆ ಸಲ್ಲುತ್ತವೆ.".. ಕಾರಣ ಅವುಗಳ ಜಾಡು ಹಿಡಿದು ದಕ್ಕಿಸಿಕೊಳ್ಳುವ ಶ್ರಮದ ಪ್ರಯತ್ನ /ಛಲ ಮತ್ತು ಪ್ರತಿಯೊಂದರಲ್ಲೂ ಸೃಜನಶೀಲತೆ ಹುಡುಕುವ  ನಿಪುಣತೆ ಇವರಲ್ಲಿದೆ.

   ಗಣ್ಯ ವ್ಯಕ್ತಿಗಳಿಂದಲೂ ಸೈ ಎನ್ನಿಸಿಕೊಳ್ಳುವ ಇವರು,  ಸರಳಜೀವಿ. ಸನ್ಮಾನ, ಹೊಗಳಿಕೆ, ಪ್ರಚಾರ, ಆಡಂಬರದ ಜೀವನಗಳಿಂದ ದೂರದಲ್ಲೇ ಉಳಿಯುವ ಇವರು,  ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಒಬ್ಬಂಟಿಯಾಗಿ ಹೊರಡುವ ಪರಿ... ಕವಿತೆಗಳ ಮೊರೆ ಹೋಗುವ ರೀತಿ ಇವರ ವ್ಯಕ್ತಿತ್ವಕ್ಕೆ  ಇನ್ನಷ್ಟು ಮೆರಗು ನೀಡುತ್ತವೆ. 

 ಮಾನವೀಯ ಮೌಲ್ಯಗಳು ದಿನೇ ದಿನೇ ಕುಸಿಯುತ್ತಿರುವ ಇಂದಿನ 
ದಿನಗಳಲ್ಲಿ  ಇಂತಹ ಯುವ ಕವಿ., ಕವಿತೆಗಳು, ತೊಡಗಿಸಿಕೊಳ್ಳುವಿಕೆ, ವ್ಯಕ್ತಿತ್ವ ಹವ್ಯಾಸ ಯುವಪೀಳಿಗೆಗೆ ಮಾರ್ಗದರ್ಶಿ ಎಂದರೆ ಅತಿಶಯದ ಮಾತುಗಳಾಗುವುದಿಲ್ಲ. 

    ಇಂತಹ  ವಿಶಿಷ್ಟತೆಯ ವಿಭಿನ್ನ ಚೇತನ  ಶಿಕ್ಷಕರಾಗಿ, ಶಿಕ್ಷಣ ಇಲಾಖೆಯಲ್ಲಿರುವುದೇ ಹೆಮ್ಮೆಯ ಸಂಗತಿ.     2017 ರಲ್ಲಿ ಬೇಂದ್ರೆ ಗ್ರಂಥ ಬಹುಮಾನಕ್ಕೆ ಭಾಜನರಾಗಿರುವ, ಇವರಿಂದ ಸಾಹಿತ್ಯ ಲೋಕಕ್ಕೆ ಇನ್ನಷ್ಟು ಕೊಡುಗೆಗಳು ಸಲ್ಲುವಂತಾಗಲಿ,  ಹಾಗೆಯೇ ಮತ್ತಷ್ಟು ಪ್ರಶಸ್ತಿಗಳು ಇವರ ಪ್ರತಿಭೆಗೆ ಅರಸಿ ಬರಲಿ. 

 ತಮ್ಮಲ್ಲಿಯ   ಜ್ಞಾನ ಮತ್ತು ಕವಿತ್ವದ ನೆಲೆಯಿಂದ ರಾಷ್ಟ್ರಕಂಡಕವಿಗಳ ಸಾಲಿನಲ್ಲಿ ನಮ್ಮ ಸತೀಶ್  ಸರ್ ರವರ  ಹೆಸರು ಹೊರಹೊಮ್ಮುವಂತಾಗಲಿ ಎಂಬುದೇ ಸಾಮಾನ್ಯ ಓದುಗಳಾಗಿ ನನ್ನ ಮನತುಂಬಿದ ಹಾರೈಕೆ💐💐. 

ಸೋಮವಾರ, ಆಗಸ್ಟ್ 3, 2020

ನೆನಪು




ನಾ ಮುಂದಿನ ದಿನಗಳಲ್ಲಿ
ಖಾಲಿಯಾಗಿ ಹೋಗುತ್ತೇನೆ
ನೀ ಕೊಟ್ಟ ಬುತ್ತಿಯನ್ನು ಸಾಲೆಣಿಸಿ
ದಾರಿಯುದ್ದಕ್ಕೂ ಕನಸಿನ
ಇರುವೆಗಳಿಗೆ ಚೆಲ್ಲುತ್ತ ಸಾಗುತ್ತೇನೆ
ನಕ್ಷತ್ರದ ಸಮುದ್ರದಲ್ಲಿ ನಗುವಾಗ
ಸಿಡಿ ಮೂತಿಗೆ ಮುತ್ತಿಕ್ಕಿ ಸರಿಯುತ್ತೇನೆ
ನಿನ್ನ ಹಾವ -ಭಾವಗಳ ಬೆವರನ್ನು
ಕದ್ದು ಮುಕ್ಕಿ ಬಿಡುತ್ತೇನೆ
ಹಿಂಬಾಲಿಸಿ ನಿನ್ನ ದಾರಿ ತಪ್ಪಿಸಿ
ಕ್ಷಣ ಮಾತ್ರಕ್ಕೆ ಕಾಡಿಸಿ ಅಗ್ನಿಜ್ವಾಲೆಯ
ತಾಪಕ್ಕೆ ಬಿಸುಟು ಕೂತಾಗ
ನಿನ್ನ ಸವಿಗಲ್ಲಕೆ ಬಾಯಾರಿಸಿ ತುಟಿಯಿತ್ತು
ನೀ ಬಂದಾಗ ಮೆಲ್ಲ ಮೆಲ್ಲನೆ
ಮಾಯಾಕುದುರೆಯ ಪಲ್ಲಂಗವಾಗುತ್ತೇನೆ
ಸೂರಲ್ಲಿ ನಿಂತು ಮುಖವೆತ್ತಿ
ನಗುವಿನ ವದನ ಚೆಲ್ಲಿ ಕೈ ಬೀಸಿದಾಗ
ನಿರಾಕೃತಿಯ ನಕ್ಷತ್ರದಲ್ಲಿ ಆಲಿಂಗನದ
ಮಿಲನವಾಗಿ ಸದಾ ಮಿನುಗುತ್ತಿರುತ್ತೇನೆ.



ಮಕ್ಕಳಲ್ಲಿನ ಮಾನವೀಯತೆ


              ಮಕ್ಕಳಲ್ಲಿನ ಮಾನವೀಯತೆ

        ಪ್ರತಿಭಾನ್ವಿತರೆಲ್ಲ -ಮೌಲ್ಯವುಳ್ಳವರೇ..? ಜೀರ್ಣಿಸಿಕೊಳ್ಳಲು ಕಷ್ಟವಾಗುವ ಪ್ರಶ್ನೆ.   ಶಿಕ್ಷಕರಾಗಿ ಎಲ್ಲಾ ಮಕ್ಕಳನ್ನು ಸಮಾನರಾಗಿ ಕಾಣುವ ಪ್ರಯತ್ನ ಮಾಡುತ್ತೇವೆಯಾದರು, ಪ್ರತಿಭೆಯುಳ್ಳವರಲ್ಲಿ ಹೆಚ್ಚಾಗಿ ಮೋಹಗೊಳ್ಳುತ್ತೇವೆ. ಪ್ರತಿಯೊಂದು ಮಗು ಒಂದೊಂದು ಕೌಶಲ್ಯ ಹೊಂದಿರುತ್ತದೆ.ಒಂದೊಂದು ಮಗುವಿನ ಬುದ್ಧಿ ಶಕ್ತಿ ಮಟ್ಟ  ಒಂದೊಂದು ರೀತಿಯದ್ದಾಗಿರುತ್ತದೆ. ಇದರಲ್ಲಿ ಮಗುವಿನ ತಪ್ಪೇನು..?? ಅದನ್ನು ಗುರುತಿಸಿ ಒರೆ ಹಚ್ಚುತ್ತೇವೆಯಾದರು,
ಹೆಚ್ಚಾಗಿ ನಾವು ಇಷ್ಟಪಡುವುದು ಬುದ್ದಿವಂತರನ್ನ,ಪ್ರತಿಭೆಯುಳ್ಳ, ಚುರುಕುವುಳ್ಳ, ಮಕ್ಕಳನ್ನು ಮಾತ್ರ. ಮೇಲ್ನೋಟಕ್ಕೆ ಒಪ್ಪಿಕ್ಕೊಳ್ಳಲು ಕಷ್ಟವಾದರು ಒಳಮನಸ್ಸಿನ  ಸತ್ಯದ ಪೊರೆ ಬಿಚ್ಚಿದರೆ ಸಿಗುವ ಉತ್ತರ.

       ಅದೇ ತರಗತಿಯಲ್ಲಿ ಒಳ್ಳೆ ನಡತೆ,  ಮೌಲ್ಯವುಳ್ಳ  ಮಗು ಇದ್ದರು, ಅದರ ಬಗ್ಗೆ ನಾವು ಅಷ್ಟಾಗಿ ಗಮನ ಕೊಡುವುದಿಲ್ಲ.   ಏಕೆ...??  ಶ್ರದ್ಧೆ,  ನಿಷ್ಠೆ, ನ್ಯಾಯ, ಪ್ರಾಮಾಣಿಕತೆ, ಸಹನೆ, ಅನುಕಂಪ, ಸತ್ಯ, ಒಳ್ಳೆಯ ಗುಣ, ಸಂಸ್ಕಾರ, ಸಚ್ಚಾರಿತ್ಯ, ಸಹಕಾರ, ಸಹೋದರತ್ವ ಗುಣಗಳು ನಮಗೆ ಒಂದು ಅತ್ಯಮೂಲ್ಯ ಕೌಶಲ /ಪ್ರತಿಭೆಯಾಗಿ ಗೋಚರಿಸುವುದಿಲ್ಲ?? ಗೋಚರಿಸಿಲ್ಲ. ಸೂಕ್ಷ್ಮವಾಗಿ ಆಲೋಚಿಸಿ, ಅವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ.

      ಇಂದಿನ ನವನವೀನತೆ ಹೊಂದಿರುವ ಸಮಾಜದಲ್ಲಿ ಮಾನವ ವೈಜ್ಞಾನಿಕತೆಯ ತುತ್ತ ತುದಿಯನ್ನೇರಿದರು, ಮಾನವರಾಗಿ ಬಾಳುವುದನ್ನು ಕಲಿತ್ತಿಲ್ಲ. ನೈತಿಕತೆ, ಮಾನವೀಯತೆಗಳು ರಾಗಿ ಕಾಳಿನಷ್ಟು ಬೆಲೆ ಉಳಿಸಿ ಕೊಂಡಿಲ್ಲ.

                 ನಾನಾದರು ಮಾಡುವುದೇನು?  ನನ್ನಲ್ಲೇ ನಾ ಹೊಕ್ಕಾಗ ಅಥವಾ ಇತರರನ್ನು ಅವಲೋಕಿಸಿದಾಗ, ಒಂದು ಮಗು /ವ್ಯಕ್ತಿ ಬುದ್ಧಿವಂತ, ಪ್ರತಿಭಾವಂತ ಎಂದರೆ ಪ್ರೋತ್ಸಾಹಿಸಿ ಬೆನ್ನುತಟ್ಟುತ್ತೇವೆ, ಇನ್ನಾ ಮುಂದುವರೆದು,ಸಾಮಾಜಿಕಜಾಲತಾಣಗಳಲ್ಲಿ, ಅವರ ಬಗ್ಗೆ ಹಾಕಿ ಬೀಗುತ್ತೇವೆ.ಅದೇ ಒಂದು ಮಗು/ ವ್ಯಕ್ತಿ  ಸಂಸ್ಕಾರವಂತನಾಗಿ, ಮೌಲ್ಯವುಳ್ಳವನಾಗಿ,  ಬಾಳುತ್ತಿರುವನೆಂದರೆ, ನಾವು ಅವರನ್ನು  ಗುರುತಿಸುವ  ಗೋಜಿಗೆ  ಹೋಗುವುದಿಲ್ಲ . ನೈತಿಕಗುಣವಿಲ್ಲದ ತಳಪಾಯ ಕಟ್ಟ ಹೊರಟಿರುವ ನಮಗೆ ಕಾಣುವುದು ಪ್ರತಿಭೆ, ಪುರಸ್ಕಾರ, ಪ್ರಶಂಸೆಗಳ ಗರಿಮೆಯ ಹಿರಿಮೆ.

               "ವರ್ತನೆಯ ನರ್ತನಕ್ಕೆ ಪರಿವರ್ತನೆಯ ಶೃಂಗಾರ "ಎಂಬ ಕವಿವಾಣಿಯಂತೆ ಪ್ರತಿಭಾವಂತರನ್ನು ಗೌರವಿಸೋಣ, ಪ್ರೋತ್ಸಾಹಿಸಿ, ಬೆಳೆಸೋಣ ಜೊತೆಗೆ ಮಾನವೀಯತೆಯನ್ನು ಎತ್ತಿ ಹಿಡಿಯೋಣ.

             ಜೀವನದಲ್ಲಿ ಪ್ರತಿಭೆ, ಸಾಧನೆಗಳಷ್ಟೇ ಮುಖ್ಯವಲ್ಲ, ಅದರೊಂದಿಗೆ ಗುಣ, ನಡತೆ, ಸಂಸ್ಕಾರ, ಬೆರೆತುಬಾಳುವ ಮನಸ್ಸು, ಗುರುಹಿರಿಯರಲ್ಲಿ ವಿನಯತೆಗಳು ಅವಶ್ಯಕ. ಇಂತಹ ಮಕ್ಕಳನ್ನು ಗುರುತಿಸಿ ನೈತಿಕ ಬಲವರ್ಧನೆಗೊಳಿಸುವ ಕೆಲಸ ನಮ್ಮಿಂದಾಗಬೇಕು. ಇಂತಹ ಅಭೂತಪೂರ್ಣವಾದ  ಹೊಣೆ , ಶಾಲೆ, ಶಿಕ್ಷಕರು, ಪೋಷಕರುಗಳಾದ ನಮ್ಮ ಮೇಲಿದೆ.




ಲೇಖನಕ್ಕೆ ಸ್ನೇಹಿತೆ ಲಕ್ಷ್ಮಿಯ ಪೂರಕವಾದ ಆಶಯ                                     ನುಡಿಗಳು :-

 ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದು ಸಮಂಜಸವೇ ಸರಿ. ಜೊತೆಗೆ ಸಾಮಾನ್ಯ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು, ಅಷ್ಟೇ ಮುಖ್ಯ. ಕೆಲವೇ ಪ್ರತಿಭಾವಂತರಿಂದ ಸಮಾಜ ಸಮೃದ್ಧಿ ಆಗುವುದಿಲ್ಲ. ಪ್ರತಿಯೊಬ್ಬರು ತಮ್ಮ ಕೊಡುಗೆ ನೀಡಬೇಕು. 

     ಪ್ರತಿಯೊಂದು ಮಗುವೂ ಅನನ್ಯ. ವಿಭಿನ್ನತೆಯೇ ಪ್ರತಿಯೊಬ್ಬರ ವೈಶಿಷ್ಠ್ಯ. ಈ ಭಿನ್ನತೆಯನ್ನು ಸ್ವೀಕರಿಸುವ ಗುಣ ಎಲ್ಲರಲ್ಲು ಇರಬೇಕು. ಎಲ್ಲರು ಅವರದೇ ಆದ ವ್ಯಕ್ತಿತ್ವ ಹೊಂದಿರುತ್ತಾರೆ. ಹೆಚ್ಚಿನ ನಿರೀಕ್ಷೆ ಸಲ್ಲದು. ಪ್ರತಿಭಾವಂತ ಮತ್ತು ಸಾಧಾರಣ ವಿದ್ಯಾರ್ಥಿಯನ್ನು ಭೇದಭಾವ ದೃಷ್ಟಿಯಲ್ಲಿ ಕಾಣಬಾರದು. ಪ್ರತಿ ಮಗುವನ್ನು ಶಿಕ್ಷಕರು ಸಮಾನ ಮನೋಭಾವದಿಂದ ನೋಡಬೇಕು. ಪ್ರತಿಭಾವಂತ ಮಗು ಮಾತ್ರ ನಮ್ಮ ಪ್ರತಿಷ್ಠೆ ಅಲ್ಲ. ಪ್ರತಿ ಮಗುವೂ ಸಹ ನಮ್ಮ ಪ್ರತಿಷ್ಠೆ. 

  ಸಾಮಾನ್ಯ ಮಗುವಿನ ವಿಶೇಷತೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ತರಗತಿಯಲ್ಲಿ ಈ ತರಹದ ವಿದ್ಯಾರ್ಥಿಗಳು ಇರುತ್ತಾರೆ.ಹೇಗೆಂದರೆ, ಕಲಿಕೆಯಲ್ಲಿ ಹಿಂದುಳಿದಿದ್ದಾನೆ, ಆದರೆ ನಯ -ವಿನಯದಲ್ಲಿ ಎಲ್ಲರಿಗಿಂತ ಮುಂದೆ. ಶಿಕ್ಷಕರೆದುರು ಮಾತನಾಡಲು ಹಿಂಜರಿಯುತ್ತಾಳೆ, ಆದರೆ ತನ್ನ ದೃಷ್ಟಿ ದೋಷ ಸಹಪಾಠಿಗೆ ಸಹಾಯ -ಬೆಂಬಲ ನೀಡಲು ಹಿಂಜರಿಯುವುದಿಲ್ಲ. ಸದಾ ಕೀಟಲೆ ಮಾಡುವ ಇವನು, ಶಾಲೆಯ ಕೆಲಸ ಕಾರ್ಯಗಳಲ್ಲಿ ಸದಾ ಮುಂದು. ಗೃಹಕಾರ್ಯ ಮಾಡದ ಇವನು, ಎಷ್ಟೇ ಬೈದರೂ ಬೇಸರಗೊಳ್ಳುವುದಿಲ್ಲ.  ಅವನ ಮುಗ್ದ ನಗು ಮಾಸುವುದಿಲ್ಲ. 

  ಪಾಠ ಪ್ರವಚನ ವಿಷಯದಲ್ಲಿ ಇವನು ಹಿಂದೆ ಇದ್ದಾನೆ, ಆದರೆ ಈ ವರೆಗೆ ಅನ್ಯ ಯಾವ ವಿಷಯದಲ್ಲೂ ತಪ್ಪು ಮಾಡುವುದಿಲ್ಲ. ಇಂತಹ ಹಲವು ವಿದ್ಯಾರ್ಥಿಗಳು ಕಾಣ ಸಿಗುತ್ತಾರೆ. ಅವರನ್ನು ಬೇರೆಯವರೊಂದಿಗೆ ಹೋಲಿಸಿ ಹೀಯಾಳಿಸುವ ಬದಲು, ಗುಣಗಳನ್ನು ಗುರುತಿಸಿ, ಪ್ರೇರೇಪಿಸಿದರೆ ಮುಂದೆ ಖಂಡಿತಾ ಸುಧಾರಿಸುತ್ತಾರೆ. 

  ಸಮಾಜ ಕೇವಲ ಪ್ರತಿಭೆ ಮೇಲೆ ನಿಂತಿಲ್ಲ. ಮಾನವೀಯ ಮೌಲ್ಯಗಳ ನೆಲೆಯಲ್ಲಿ ನಿಂತಿದೆ. ಇದನ್ನು ಬೆಂಬಲಿಸುವ ಹೊರೆ ಶಿಕ್ಷಕರದ್ದು ಮತ್ತು ಪೋಷಕರದ್ದು. 



ಶುಕ್ರವಾರ, ಜುಲೈ 31, 2020


            ಮಿನಿ ಕತೆ 

ದಿನ ಬೆಳಗುವ ಸೂರ್ಯ. ಅವನ ಬೆಳಕಲ್ಲೇ ಮಿನುಗುವ ಹುಳು. 

ಕಾಣದೇ ಸೂರ್ಯನ ಸಮಯ ಮುಂದೆ ಚಲಿಸುತ್ತಿರಲ್ಲಿಲ್ಲ.

ಸೂರ್ಯನಿಗೆ ಹುಳುವಿನಲ್ಲಿ ಅವಿಶ್ವಾಸದ ಕದಿರ ಬಿಂದುಗಳು. ಪರೀಕ್ಷಿಸ ಬಯಸಿ, 

ನಸುಕಾದರೂ  ಬೆಳಗಲಿಲ್ಲ ಜಗದೊಡೆಯ.   ಬಂದೇ ಬರುವನೆಂದು ಮಿಣುಕಲು 

ಹುಳು ಕಾಯುತ್ತ ಕಾಯುತ್ತ...  ಕೂತಲ್ಲೇ ಕುಸಿದು ಬಿದ್ದಿತು. ಜನ ಗುಂಪುಗಟ್ಟಿ

ಕೋಲಿನಿಂದ ತಿವಿದು ನೋಡಿದರು. ಸಂಶಯವಿಲ್ಲದೆ ಹುಳು ಸತ್ತಿತ್ತು. 

ಸೂರ್ಯ ನಗುತ್ತಿದ್ದ .  ಆದರೆ ಹುಳು ಸೂರ್ಯನೊಳಗೆ ಬದುಕಿತ್ತು.                                                                                              


                                                                            
        

ಗುರುವಾರ, ಜುಲೈ 30, 2020

ತಲೆಶೂಲೆ


               ತಲೆಶೂಲೆ

ಕಣ್ಣು ರೆಪ್ಪೆ ಮತ್ತು ಹುಬ್ಬಿನ ಮೇಲಿನ ಗುಂಗು
ಸದಾ ತನ್ನಲ್ಲೇ ಸುತ್ತುತ್ತಿರುತ್ತದೆ
ನರನಾಡಿಗಳೊಂದಿಗೆ ಸರಸದ ವಿರಸ
ಎಡವಾದರೆ ಎಡ, ಬಲವಾದರೆ ಬಲ
ಗುಂಗಿನ ಅಮಲಿಗೆ ಕರೆಯೋಲೆಯ
ಅಗತ್ಯ ಅನಿವಾರ್ಯಗಳಿಲ್ಲ
ಆತಿಥ್ಯ ಬಯಸದ ಹೊರದೂಡ ಇಚ್ಛಿಸುವ
ಅಮಲಿನ ತೀವ್ರತೆಗೆ ಮಸ್ತಿಷ್ಕದಲ್ಲಿ
ಮಿತಿಗುಡುವ ಮೃದು ಮನಸ್ಸಿನ ಹುಳುಗಳು
ಕೆಲಸಕಾರ್ಯಗಳು ರಜೆಯ ಬೆನ್ನು ಬಡಿದುಬಿಡುತ್ತವೆ
ವಿಶ್ರಾಂತಿ ಅರಸಿ ಬಗ್ಗಿ ಬಗ್ಗಿ ನೋಡಿದರು
ಅಡ್ಡಗಟ್ಟಿ  ಜೀಗುಡುವ ಜೇನುನೊಣಗಳ ಸದ್ದು
ಗುಳಿಗೆಯ ಮೋಹಕ್ಕೆ ಜೋತುಬಿದ್ದರು
ಸ್ವಲ್ಪ ಮಟ್ಟಿನ ಮೋಹದ ಪೊರೆ ಕಳಚಿಬಿಡುತ್ತದೆ
ಕೃಶ ದೇಹದ ಬಾವು ಬಯಸಿ ಸುತ್ತಾಡಿದರು
ಹಿಂಡಿ ಹಿಪ್ಪೆಯಾಗಿಸಿ ರಸ ಕುಡಿದು
ತೇಗುವವರೆಗು ಗುಂಗಿನ ನೆರಳು ಬೆಳಕಿನ
ಗೋಡೆಯ ಆಟ ನಡೆಯುತ್ತಿರುತ್ತದೆ. 

ಸೋಮವಾರ, ಜುಲೈ 27, 2020

ಹರಿಕಾರ


ಹೇ ದೇವಾ... ಭವ -ಬವಣೆಯ ಹರಿಕಾರ
ಏಕಾಗಿ ಬಿಟ್ಟಿರುವೆ ತನುವ !
ನನ್ನದೆನ್ನುವುದು ಮರೀಚಿಕೆಗೆ ಬಾಯಾರಿರುವಾಗ
ಕೊಟ್ಟು -ಕೇಳುವ ಪರಿಯ ದಿರಿಸೇನು

ಶೈಶವ -ಹರೆಯಗಳ ಅರಿವಿಲ್ಲದ ಕನವರಿಕೆ
ಅರಿತು ಬೆರೆಯುವಾಗ ನೀ ಎಡೆಗೊಡುತ್ತಿಲ್ಲ
ತಪ್ಪು ಒಪ್ಪಿನ ಜರಿಯ ಕಪ್ಪು ಹಾಸಿನ ದಿರಿಸು ತೊಟ್ಟಿರುವ
ಅಳೆದು ತೂಗುವ ಲೆಕ್ಕಾಚಾರದ ತಾರೀಫು

ಒಬ್ಬರಲ್ಲಿ ಕಿತ್ತು ಇನ್ನೊಬ್ಬರಿಗೆ ಬಿತ್ತುವ
ಸಮ ಅಸಮಾನತೆಗಳ ಆತ್ಮವ ನಾ ಒಲ್ಲೆ
ಎಲ್ಲಿಯ ಗುಣ ವ್ಯತ್ಯಾಸಗಳ ದೋಷಕ್ಕೆ
ಅಸಹಾಯಕರ ಕಾಡಿ ದೂಡಿರುವೆ
ಮನಸ್ಸಲ್ಲಿ ಪರಿಪಕ್ವತೆಯ ನಂಟಿನ ಜಾಡಿದ್ದರೆ
ಜಗದಲಿ ಕಾಣುತ ಸಮಾನರಾಗಿ
ಹಂಚೆಲ್ಲ ಸುಖ -ದುಃಖದ ಆಗಮ -ನಿಗಮಗಳ ಫಲವ


ಕೃಶದ ಇಂದು ನಾಳೆಯ ದೇಹದ ಅಸ್ತಿತ್ವಕ್ಕೆ
ಪುಟಿಯುತ್ತಿದೆ ನಾನು -ನನ್ನದೆಂಬ ಅಮಲಿನ ಮಜಲುಗಳು
ಸಿರಿತನವ ಉಟ್ಟು ನೆಮ್ಮದಿಯ ಕಿತ್ತು
ಗಹಗಹಿಸಿ ನಗುತ್ತಿರುವ ನಿನ್ನ ಮರ್ಮಕ್ಕೆ
ಶರಣಯ್ಯ ನಾ ಶರಣು


ನನ್ನೊಳಗಿನ ನಾನು ಬೇರಲ್ಲೇ ಕೊಳೆಯಲಿ
ಕ್ರೂರತೆಯಲ್ಲಿನ ಮೃಗ ತುಳಿಯಲಿ
ಸಮಾನತೆಯ ದಿಕ್ಕು ರಾರಾಜಿಸಲಿ
ನ್ಯಾಯ ಸಂಕುಲ ಅಜರಾಮರವಾಗಲಿ
ಪ್ರೀತಿಯು ಪ್ರೀತಿಯ ಸೇರುತ ಬಾಳಲಿ
ಆಗ ನಾ ಮೆಚ್ಚಿ ನುಡಿಯುವೆ
ನಿನ್ನ ಆಂತರ್ಯ -ಬಾಹ್ಯ ತತ್ವ ಸತ್ವದ ಸಿದ್ದಿ ಶುದ್ಧಿಯ.

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...